ರಾಯಚೂರು: ‘ನವೆಂಬರ್ 22ರಂದು ಝೀಬ್ರಾ ಚಿತ್ರ ತೆರೆ ಕಾಣಲಿದೆ. ಬ್ಯಾಂಕಿಂಗ್ ವಂಚನೆ ಕುರಿತಾದ ಕಥಾ ವಸ್ತು ಹೊಂದಿದೆ. ಅಲ್ಲದೇ ಪುಷ್ಪಾ-2 ಚಿತ್ರವೂ ಬಿಡುಗಡೆಯಾಗಲಿದೆ. ಜಿಂಕ್, ಉತ್ತರಕಾಂಡ ಸೇರಿ ಮೂರು ಚಿತ್ರಗಳ ಚಿತ್ರೀಕರಣ ನಡೆಯುತ್ತಿದೆ’ ಎಂದು ನಟ ಡಾಲಿ ಧನಂಜಯ ತಿಳಿಸಿದರು.
ನಗರದಲ್ಲಿ ಪೈ ಇಂಟರ್ ನ್ಯಾಷನಲ್ ಶೋ ರೂಂ ಉದ್ಘಾಟನೆಗೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
‘ನಾನು ಎಲ್ಲಿ ಹೋದರೂ ಜನ, ಅಭಿಮಾನಿಗಳು ಮದುವೆ ಯಾವಾಗ? ಎಂದು ಒಂದೇ ಪ್ರಶ್ನೆ ಕೇಳುತ್ತಾರೆ. ಅದಕ್ಕಾಗಿ ಇಲ್ಲಿಯೇ ಅನೌನ್ಸ್ ಮಾಡ್ತೀನಿ. ಶೀಘ್ರವೇ ಮದುವೆಯಾಗುತ್ತೇನೆ. ನಿಮ್ಮೆಲ್ಲರಿಗೂ ಆಮಂತ್ರಣ ನೀಡುತ್ತೇನೆ. ಮದುವೆಗೆ ಆಗಮಿಸಿ ಆಶೀರ್ವದಿಸಬೇಕು’ ಎಂದು ಅಭಿಮಾನಿಗಳಿಗೆ ಮನವಿ ಮಾಡಿದರು.
‘ಕಲ್ಯಾಣ ಕರ್ನಾಟಕ ಭಾಗದ ಜನರ ಪ್ರೀತಿಯೇ ವಿಶೇಷ. ರಫ್ ಅಂಡ್ ಟಫ್ ಇದ್ದರೂ ಬಹಳ ಸ್ವೀಟು, ವಿಭಿನ್ನವಾಗಿರುತ್ತಾರೆ. ಇಲ್ಲಿನ ಜನರ ಪ್ರೀತಿಗೆ ಬೆಲೆ ಕಟ್ಟಲಾಗದು. ಈ ಭಾಗಕ್ಕೆ ಮತ್ತೆಮತ್ತೆ ಬರುವೆ’ ಎಂದು ಹೇಳಿದರು.
‘ಝೀಬ್ರಾ ಚಿತ್ರ ಕನ್ನಡ ಸೇರಿ ಮೂರು ಭಾಷೆಗಳಲ್ಲಿ ತೆರೆ ಕಾಣಲಿದೆ. ಡಿಸೆಂಬರ್ 5ರಂದು ಪುಷ್ಪ–2 ತೆರೆ ಕಾಣಲಿದ್ದು ನಾನು ವಿಶೇಷ ಪಾತ್ರದಲ್ಲಿ ನಟಿಸಿದ್ದೇನೆ. ಪಾತ್ರದ ಬಗ್ಗೆ ಕೇಳದೇ ಚಿತ್ರವನ್ನು ನೋಡಿಯೇ ತಿಳಿದುಕೊಳ್ಳಬೇಕು’ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದರು.
ಡಾಲಿ ಧನಂಜಯ ರಾಯಚೂರಿಗೆ ಬಂದ ವಿಷಯ ತಿಳಿಯುತ್ತಿದ್ದಂತೆಯೇ ಅಭಿಮಾನಿಗಳ ದಂಡು ಹರಿದುಬಂದಿತ್ತು. ನೆಚ್ಚಿನ ನಟನನ್ನು ಕಣ್ತುಂಬಿಕೊಂಡ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.