ಹಟ್ಟಿಚಿನ್ನದಗಣಿ: ಹಟ್ಟಿ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಕೊನೆಗಾಣಿಸಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೊಳಿದರು ಜನರು ಪರದಾಟ ತಪ್ಪುತ್ತಿಲ್ಲ.
16 ಕಿ.ಮೀ ದೂರದ ಕೃಷ್ಣ ನದಿಯಿಂದ ಟಣಮಕಲ್ಲು ಬಳಿಯ ನೀರು ಶುದ್ದಿಕರಣ ಘಟಕಕ್ಕೆ ನೀರು ಹರಿಸಿ ಶುದ್ದಿಕರಿಸಿ ಪಟ್ಟಣಕ್ಕೆ ಪೂರೈಕೆ ಮಾಡಲಾಗುತ್ತಿದೆ. ಆದರೆ ಮೋಟರ್ ಪದೇಪದೇ ದುರಸ್ತಿಗೆ ಬರುತ್ತಿರುವುದರಿಂದ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ.
2012ರಲ್ಲಿ ಶುದ್ದ ನೀರಿಗಾಗಿ ನಬಾರ್ಡ್ ಸಹಕಾರದಲ್ಲಿ ಕುಡಿಯುವ ನೀರಿನ ಯೋಜನೆಗೆ ₹18 ಕೋಟಿ ಒದಗಿಸಲಾಗಿತ್ತು, ಇದರಲ್ಲಿ ₹4 ಕೋಟಿಯನ್ನು ಹಟ್ಟಿ ಚಿನ್ನದ ಗಣಿ ಕಂಪನಿ ಒದಗಿಸಿತ್ತು. ಕಾಳೇಶ್ವರಿ ಕೆರೆ ತುಂಬಿಸಲು ಜಿಲ್ಲಾಡಳಿತ ವತಿಯಿಂದ ₹6 ಲಕ್ಷ, ಕೆರೆಯಲ್ಲಿ ಸಂಪ್ ನಿರ್ಮಾಣಕ್ಕೆ ಅನುದಾನ ನೀಡಲಾಗಿತ್ತು. ಹಟ್ಟಿಚಿನ್ನದಗಣಿ ಕಂಪನಿ ವತಿಯಿಂದ ₹10 ಲಕ್ಷ ನೀಡಲಾಗಿತ್ತು. ಗ್ರಾ.ಪಂ ಇರುವಾಗ ನರೇಗಾದಡಿ ₹10 ಲಕ್ಷ ವಿನಿಯೋಗಿಸಲಾಗಿತ್ತು. ಒಟ್ಟು ₹16 ಲಕ್ಷ ಖರ್ಚು ಮಾಡಿದರೂ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ.
ಜನರ ಸಮಸ್ಯೆ ಆಸಲಿಸಬೇಕಾದ ಜನಪ್ರತಿನಿದಿಗಳ ಇಚ್ಚಾಶಕ್ತಿ ಕೊರತೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ಫಲದಿಂದ ಪಕ್ಕದಲ್ಲೇ ಕೃಷ್ಣ ನದಿ ಹರಿಯುತ್ತಿದ್ದರು ನೀರಿಗಾಗಿ ಜನರ ಪರದಾಟ ತಪ್ಪುತ್ತಿಲ್ಲ.
2020-21ನೇ ಸಾಲಿನಲ್ಲಿ ಡಿಎಂಎಫ್ ಯೋಜನೆ ಅಡಿಯಲ್ಲಿ ₹4.3 ಕೋಟಿ ವೆಚ್ಚದಲ್ಲಿ ಟಣಮಕಲ್ಲು ಹತ್ತಿರ ಜಾಕ್‌ವೆಲ್ ನಿರ್ಮಾಣ ಮಾಡಿದರೂ ಹೊಸ ಪೈಪ್‌ಲೈನ್ ಅಳವಡಿಸಿಲ್ಲ. ಇದರಿಂದ ನೀರು ಪೂರೈಕೆಯಾಗುತ್ತಿಲ್ಲ.
‘ಹಟ್ಟಿ ಪಟ್ಟಣಕ್ಕೆ ಟಣಮಕಲ್ಲು ಜಾಕ್‌ವೆಲ್‌ನಿಂದ ನೇರವಾಗಿ ಹೊಸ ಪೈಪ್‌ಲೈನ್ ಅಳವಡಿಸಿದರೆ ಮಾತ್ರ ನೀರಿನ ಸಮಸ್ಯೆ ಬಗೆಹರಿಸಬಹುದು. ಸಂಬಂದಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜನರ ನೋವಿಗೆ ಸ್ಪಂದಿಬೇಕಾಗಿದೆ’ ಎನ್ನುತ್ತಾರೆ ಸಾರ್ವಜನಿಕರು.
ಹಟ್ಟಿ ಪಟ್ಟಣಕ್ಕೆ ಶಾಶ್ವತ ಹೊಸ ಪೈಪ್‌ಲೈನ್ ಅಳವಡಿಸಲು ಅಧಿಕಾರಿಗಳು ಗಮನಹರಿಸಬೇಕಾಗಿದೆ-ಎನ್.ಸ್ವಾಮಿ ನಾಯಿಕೊಡಿ, ನಿವಾಸಿ
ಅಧಿಕಾರಿಗಳ ಜತೆ ಚರ್ಚಿಸಿ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು-ಮಾನಪ್ಪ ಡಿ.ವಜ್ಜಲ್, ಶಾಸಕ ಲಿಂಗಸುಗೂರು
ಹೊಸದಾಗಿ ಅಧಿಕಾರ ಸ್ವೀಕರಿಸಿದ್ದೇನೆ ನೀರಿನ ಸಮಸ್ಯೆ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು-ಕರಿಯಪ್ಪ, ಪ.ಪಂ ಮುಖ್ಯಾಧಿಕಾರಿ ಹಟ್ಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.