ADVERTISEMENT

ಲಿಂಗಸುಗೂರು: ಮಾವಿನಭಾವಿ ಇನ್ನೂ ಬಾರದ ‘ಸಿಹಿ’ ನೀರು

825 ಮನೆ: ಅಂದಾಜು 4900 ಜನಸಂಖ್ಯೆ ಇದ್ದರೂ ಬಗೆಹರಿಯದ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 4:30 IST
Last Updated 2 ಜುಲೈ 2024, 4:30 IST
ಲಿಂಗಸುಗೂರು ತಾಲ್ಲೂಕು ಮಾವಿನಭಾವಿ ಹೊರವಲಯದ ತೆರೆದಬಾವಿಯಿಂದ ಮೇಲೆ ಶಾಲಾ ಕಾಲೇಜು ಮಕ್ಕಳು ನೀರು ಒಯ್ಯುತ್ತಿರುವುದು
ಲಿಂಗಸುಗೂರು ತಾಲ್ಲೂಕು ಮಾವಿನಭಾವಿ ಹೊರವಲಯದ ತೆರೆದಬಾವಿಯಿಂದ ಮೇಲೆ ಶಾಲಾ ಕಾಲೇಜು ಮಕ್ಕಳು ನೀರು ಒಯ್ಯುತ್ತಿರುವುದು   

ಲಿಂಗಸುಗೂರು: ತಾಲ್ಲೂಕಿನಾದ್ಯಂತ ಜನತೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಆಗದಂತೆ ತಾಲ್ಲೂಕು ಆಡಳಿತ ಸಾಕಷ್ಟು ಮುಂಜಾಗ್ರತೆ ತೆಗೆದುಕೊಡಿದೆ. ಆದರೆ, ಮಾವಿನಭಾವಿ ಗ್ರಾಮಸ್ಥರಿಗೆ ಮಾತ್ರ ಶುದ್ಧ ನೀರು ಪೂರೈಕೆ ಸವಾಲಾಗಿದ್ದು ತೆರೆದಬಾವಿ ನೀರು ಬಳಕೆ ಮಾಡುತ್ತಿರುವುದು ಕಂಡು ಬಂದಿದೆ.

ತಾಲ್ಲೂಕು ಕೇಂದ್ರದಿಂದ ಕೇವಲ 12ಕಿ.ಮೀ ಅಂತರದಲ್ಲಿರುವ ಮಾವಿನಭಾವಿ ಗ್ರಾಮ ಪಂಚಾಯಿತಿ ಜೊತೆಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕ್ಷೇತ್ರ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಕ್ಷೇತ್ರ, ಪಿಕಾರ್ಡ್‌ ಬ್ಯಾಂಕ್‍ ನಿರ್ದೇಶಕ ಸ್ಥಾನದ ಕೇಂದ್ರ ಸ್ಥಳವಾಗಿದ್ದರೂ ಕೂಡ ಇಂದಿಗೂ ಶಾಶ್ವತ ಪರಿಹಾರ ಕಾಣದಿರುವುದು ವಿಪರ್ಯಾಸ.

ತಾಲ್ಲೂಕಿನ 30 ಗ್ರಾಮ ಪಂಚಾಯಿತಿ ವ್ಯಾಪ್ತಿಯ 141 ಕಂದಾಯ ಗ್ರಾಮಗಳು, 42 ತಾಂಡಾಗಳು, 249 ದೊಡ್ಡಿಗಳಿಗೆ ಸಮಸ್ಯೆಗಳ ಮಧ್ಯೆಯೆ ಶಾಶ್ವತ ಪರಿಹಾರ ಕಂಡುಕೊಂಡ ತಾಲ್ಲೂಕು ಆಡಳಿತಕ್ಕೆ ಮಾವಿನಭಾವಿ ಸಮಸ್ಯೆಯಾಗಿದೆ. ಖಾಸಗಿ ಮತ್ತು ಇತರೆ ಕೊಳವೆಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ.

ADVERTISEMENT

ಮಾವಿನಭಾವಿ 825 ಮನೆಗಳನ್ನು ಹೊಂದಿದ್ದು  4900 ಜನಸಂಖ್ಯೆ ಹೊಂದಿದೆ. ಜನಸಂಖ್ಯೆ ಆಧರಿಸಿ ಕೊಳವೆಬಾವಿ ಮೂಲಕ ನೀರು ಪೂರೈಸಲಾಗುತ್ತಿದೆ. ಶುದ್ಧ ನೀರಿನ ಘಟಕ ಹಾಕಿದ್ದರೂ ಕೇವಲ ಶೇ 25ರಷ್ಟು ಜನ ಮಾತ್ರ ಕುಡಿಯಲು ನೀರು ಬಳಕೆ ಮಾಡುತ್ತಿದ್ದು ಶೇ 75ರಷ್ಟು ಜನ ತೆರೆದಬಾವಿ ನೀರನ್ನೆ ಬಳಸುತ್ತಾರೆ.

‘ಕೊಳವೆಬಾವಿಗಳಿಂದ ಸಮರ್ಪಕ ನೀರು ಪೂರೈಸಲಾಗುತ್ತಿದೆ. ಈ ನೀರು ಬಳಕೆಗೆ ಅಯೋಗ್ಯವಾಗಿದೆ. ನೀರು ಭರ್ತಿ ಮಾಡಿದ ಕೊಡ, ಮಡಕಿ, ಬ್ಯಾರಲ್‍ಗಳಲ್ಲಿ ಸುಣ್ಣದ ಮಾದರಿ ಬಿಳಿಯ ಪದಾರ್ಥ ತೇಲುತ್ತದೆ. ಅಂತಹ ನೀರು ಕುಡಿಯಲು ಬಳಸಿದರೆ ಹೊಟ್ಟೆ ನೋವು, ಕೀಲು ನೋವು ಕಾಣಿಸಿಕೊಳ್ಳುತ್ತದೆ‘ ಎನ್ನುತ್ತಾರೆ ಜನರು.

ಗ್ರಾಮದ ಮಲ್ಲನಗೌಡ ಪೊಲೀಸ್‍ ಪಾಟೀಲರ ಜಮೀನದಲ್ಲಿರುವ ತೆರದಬಾವಿ ನೀರು ಅಮೃತಕ್ಕೆ ಸಮಾನವಾಗಿದೆ. ಈ ನೀರೆ ನಮಗೆ ಆಧಾರ. ನಯಾಪೈಸೆ ತೆಗೆದುಕೊಳ್ಳದೆ ಮಾಲೀಕರು ಗ್ರಾಮಸ್ಥರಿಗೆ ನೀರು ಒಯ್ಯಲು ಅನುಮತಿಸಿದ್ದಾರೆ. ಈ ನೀರು ಪೂರೈಕೆಗೆ ಆಡಳಿತ ಮುಂದಾಗದಿರುವುದು ಹಲವು ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ.

ಗ್ರಾಮ ಪಂಚಾಯಿತಿ ಸದಸ್ಯ ಬಸನಗೌಡ ಮಾಲಿಪಾಟೀಲ ಮಾತನಾಡಿ, ‘ತೆರೆದಬಾವಿ ನೀರು ಪೂರೈಸಿ ತೆರಿಗೆ ವಸೂಲಿ ಮಾಡುವ ಆಡಳಿತಕ್ಕೆ ನೀರು ಕೊಡುವುದಿಲ್ಲ. ಈ ನೀರು ಪೂರೈಸಲು ಹಣದ ಬೇಡಿಕೆ ಇಟ್ಟಿದ್ದರು. ಆಡಳಿತ ಮಂಡಳಿ ಒಪ್ಪಲಿಲ್ಲ. ಆದಾಗ್ಯೂ ಮಾನವೀಯತೆಯಿಂದ ನೀರು ಒಯ್ಯಲು ಸಮ್ಮತಿಸಿದ್ದಾರೆ’ ಎಂದು ಹೇಳಿದರು.

ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಜಯಶ್ರೀ ಭೋವಿ ಮಾತನಾಡಿ, ‘ತಾವು ಅಧಿಕಾರ ಈಚೆಗೆ ಸ್ವೀಕರಿಸಿರುವೆ. ನೀರು ಪೂರೈಕೆ ಸಮಸ್ಯೆ ಇರುವುದಿಲ್ಲ. ಆದರೆ, ಗ್ರಾಮಸ್ಥರು ಪಂಚಾಯಿತಿ ಪೂರೈಸುವ ನೀರು ಕುಡಿಯುತ್ತಿಲ್ಲ ಎಂಬುದು ನಮ್ಮ ಗಮನಕ್ಕಿಲ್ಲ. ಪೂರೈಸುವ ನೀರು ಪರೀಕ್ಷಿಸಿ ಕ್ರಮ ಕೈಗೊಳ್ಳುವೆ’ ಎಂದರು.

ಲಿಂಗಸುಗೂರು ತಾಲ್ಲೂಕು ಮಾವಿನಭಾವಿ ಹೊರವಲಯದ ತೆರೆದಬಾವಿಯಲ್ಲಿ ನೀರು ಸೇದುತ್ತಿರುವ ಶಾಲಾ ಮಕ್ಕಳು
ಲಿಂಗಸುಗೂರು ತಾಲ್ಲೂಕು ಮಾವಿನಭಾವಿ ಹೊರವಲಯದ ತೆರೆದಬಾವಿಗೆ ನೀರು ತರಲು ಶಾಲಾ ಮಕ್ಕಳು ಹೋಗುತ್ತಿರುವುದು

ತೆರೆದಬಾವಿ ನೀರಿಗೆ ವಯೋವೃದ್ಧರ ಪರದಾಟ ಕೊಳವೆಬಾವಿ ನೀರು ಅನಾರೋಗ್ಯಕ್ಕೆ ಆಹ್ವಾನ ಆರ್ಸೆನಿಕ್‍, ಫ್ಲೋರೈಡ್‍ ಅಂಶಗಳ ಶಂಕೆ ಆರೋಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.