ADVERTISEMENT

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಬರಗಾಲ: ಬಿ.ವೈ.ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 3 ಮೇ 2024, 13:52 IST
Last Updated 3 ಮೇ 2024, 13:52 IST
ಮಸ್ಕಿಯಲ್ಲಿ ಕೊಪ್ಪಳ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಪರ ನಡೆದ ಪ್ರಚಾರ ಸಭೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿದರು
ಮಸ್ಕಿಯಲ್ಲಿ ಕೊಪ್ಪಳ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಪರ ನಡೆದ ಪ್ರಚಾರ ಸಭೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿದರು   

ಮಸ್ಕಿ: ‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಜನರಿಗೆ ಬರಗಾಲ ಹಾಗೂ ಬೆಲೆ ಏರಿಕೆ ಗ್ಯಾರಂಟಿ ಖಚಿತ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಪಟ್ಟಣದ ರಥ ಬೀದಿಯಲ್ಲಿ ಶುಕ್ರವಾರ ಕೊಪ್ಪಳ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಪರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ಒಂದು ಕಡೆ ಉಚಿತ ವಿದ್ಯುತ್ ಕೊಟ್ಟು, ಮತ್ತೊಂದು ಕಡೆ ವಿದ್ಯುತ್ ಬಿಲ್ ಹೆಚ್ಚಿಸುತ್ತಿದೆ. ರೈತರು ಹೊಲಕ್ಕೆ ಟಿಸಿ ಹಾಕಿಕೊಳ್ಳಬೇಕು ಎಂದರೆ ಎರಡು ಲಕ್ಷ ಕಟ್ಟಬೇಕು. ಸ್ಟ್ಯಾಂಪ್ ಡ್ಯೂಟಿ, ಆರ್‌ಟಿಒ ಶುಲ್ಕ ಹೆಚ್ಚಳ ಮಾಡಿ ಒಂದು ಕೈಯಲ್ಲಿ ಕೊಡುವುದು, ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುವುದು ಮಾಡುತ್ತಿದೆ ಎಂದರು.

ADVERTISEMENT

ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ. ಕಾಂಗ್ರೆಸ್ ಜನ ವಿರೋಧಿ ಆಡಳಿತ ನೀಡುತ್ತಿದೆ ಎಂದು ಹೇಳಿದರು.

ನೇಹಾ ಹಿರೇಮಠ ಅವರ ಹತ್ಯೆ ಪ್ರಕರಣದಲ್ಲಿ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿ ಹಗುರವಾಗಿ ಮಾತನಾಡಿದರು. ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲ. ಜಾತಿ–ಜಾತಿಗಳ ನಡುವೆ ವಿಷ ಬೀಜ ಬಿತ್ತುವುದೇ ಇವರ ಅಭಿವೃದ್ಧಿ ಎಂದು ಟೀಕಿಸಿದರು.

ಯಡಿಯೂರಪ್ಪನವರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರೂ ವಿರೋಧ ಪಕ್ಷದ ನಾಯಕರಂತೆ ವರ್ತನೆ ಮಾಡುತ್ತಿದ್ದಾರೆ ಎಂದರು.

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬುದು ಕೋಟ್ಯಂತರ ಜನರ ಬಯಕೆ. ಕೊಪ್ಪಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಆಡಳಿತ ಪಕ್ಷದ ಸಂಸದರಾಗಿ ಅಭಿವೃದ್ಧಿಗೆ ಶ್ರಮಿಸುತ್ತಾರೆ. ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ಕಾಂಗ್ರೆಸ್‌ನ 40 ಸಂಸದರಲ್ಲಿ ಒಬ್ಬರಾಗಿ ಇರುತ್ತಾರೆ ಎಂದರು.

ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್, ಶಾಸಕ ಮಾನಪ್ಪ ವಜ್ಜಲ್, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಮಾಜಿ ಸಚಿವರಾದ ಹಾಲಪ್ಪ ಆಚಾರ್, ವೆಂಕಟರಾವ್ ನಾಡಗೌಡ, ಮಾಜಿ ಶಾಸಕರಾದ ಪ್ರತಾಪಗೌಡ ಪಾಟೀಲ, ಬಸನಗೌಡ ಪಾಟೀಲ ಬ್ಯಾಗವಾಟ್, ಜೆಡಿಎಸ್ ಮುಖಂಡ ಸಿ.ವಿ.ಚಂದ್ರಶೇಖರ, ಶರಣಪ್ಪ ಮೇಟಿ, ಶರಣು ತಳ್ಳಿಕೇರಿ, ಅಮರೇಗೌಡ ವಿರುಪಾಪುರ, ರಾಘವೇಂದ್ರ ನಾಯಕ, ಶರಣಯ್ಯ ಸೊಪ್ಪಿಮಠ, ಕೆ.ಕರಿಯಪ್ಪ, ಗಿರಿಗೌಡ, ಬಸವಂತರಾಯ ಕುರಿ, ಆಶಾ ಕ್ಯಾತನಟ್ಟಿ, ಚಂದ್ರಕಲಾ ದೇಶಮುಖ, ಶಾರದಾ ರಾಠೋಡ ಹಾಜರಿದ್ದರು.

ಮಸ್ಕಿಯಲ್ಲಿ ಗುರುವಾರ ಕೊಪ್ಪಳ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ಪರ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.