ADVERTISEMENT

ರಾಯಚೂರು | ಬರ: ಜ.8ರಂದು ರಾಜ್ಯದಾದ್ಯಂತ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2024, 4:51 IST
Last Updated 4 ಜನವರಿ 2024, 4:51 IST
ಚಂದ್ರಪ್ಪ ಹೊಸಕೇರಾ
ಚಂದ್ರಪ್ಪ ಹೊಸಕೇರಾ   

ರಾಯಚೂರು: ರಾಜ್ಯದಲ್ಲಿ ಬರ ಪರಿಹಾರ ವಿತರಣೆಗೆ ಕೂಡಲೇ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿ ಜನವರಿ 8ರಂದು ರಾಜ್ಯದಾದ್ಯಂತ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕಚೇರಿಗಳ ಎದುರು ಪ್ರತಿಭಟನಾ‌ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಅಧ್ಯಕ್ಷ ರಾಜ್ಯ ಕಾರ್ಯದರ್ಶಿ ಚಂದ್ರಪ್ಪ ಹೊಸಕೇರಾ ತಿಳಿಸಿದರು.

ರಾಜ್ಯದ 223 ತಾಲ್ಲೂಕುಗಳು ಬರಪೀಡಿತ ಪ್ರದೇಶಗಳೆಂದು ಈಗಾಗಲೇ ಸರ್ಕಾರ ಘೋಷಣೆ ಮಾಡಿದೆ. ಬರ ಪರಿಹಾರ ವಿತರಣೆಗಾಗಿ ₹18 ಸಾವಿರ ಕೋಟಿ ರಾಜ್ಯಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಸರ್ಕಾರ ಮನವಿ ಮಾಡಿದೆ. ಆದರೆ, ಕೇಂದ್ರ ಸರ್ಕಾರ ರಾಜ್ಯದ ಬರ ಪರಿಹಾರ ವಿತರಿಸುವ ವಿಷಯದಲ್ಲಿ ಗಂಭೀರವಾಗಿಲ್ಲ ಎಂದು ಬುಧವಾರ ಮಾಧ್ಯಮ ಗೋಷ್ಠಿಯಲ್ಲಿ ಆರೋಪಿಸಿದರು.

ಜಿಲ್ಲೆ ಸೇರಿ ರಾಜ್ಯದಲ್ಲಿ ಮುಂಗಾರು, ಹಿಂಗಾರು ವೈಫಲ್ಯದಿಂದ ಬೆಳೆ ಕೈಕೊಟ್ಟಿದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಸೇರಿದಂತೆ ಇನ್ನಿತರ ಸಮಸ್ಯೆಗಳು ರೈತರು, ಕೂಲಿ ಕಾರ್ಮಿಕರನ್ನು ಬಾದಿಸತೊಡಗಿವೆ. ತಕ್ಷಣ ಸರ್ಕಾರ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ADVERTISEMENT

ಬರದಲ್ಲಿ ನೆರವಾಗಲು ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರ್ಮಿಕರಿಗೆ 200 ದಿನಗಳ ಕೆಲಸ ಒದಗಿಸಬೇಕು. ದಿನಗೂಲಿಯನ್ನು ಕನಿಷ್ಠ ₹600ಕ್ಕೆ ಹೆಚ್ಚಳ ಮಾಡಬೇಕು ಎಂದ ಒತ್ತಾಯಿಸಿದರು.

ಕೂಲಿಕಾರರು ಬ್ಯಾಂಕ್‌ ಹಾಗೂ ಮೈಕ್ರೋ ಫೈನಾನ್ಸ್ ಮೂಲಕ‌ ಪಡೆದಿರುವ ಸಾಲ ಮನ್ನಾ ಮಾಡಬೇಕು. ಬರಗಾಲ ಸಮಯದಲ್ಲಿ ಯಂತ್ರಗಳ ಬಳಕೆಯನ್ನು ನಿಲ್ಲಿಸಿ ಕೂಲಿ ಕಾರ್ಮಿಕರಿಗೆ ಉದ್ಯೋಗ ಕೊರತೆಯುಂಟಾಗದಂತೆ ನಿರ್ವಹಿಸಬೇಕು ಎಂದು ಮನವಿ ಮಾಡಿದರು.

ಸಂಘದ ಉಪಾಧ್ಯಕ್ಷ ಗೋವಿಂದ ನಾಯಕ, ಮುಖಂಡರಾದ ಕರಿಯಪ್ಪ ಅಚ್ಚಳ್ಳಿ, ಸಂಗಮೇಶ, ಇಸ್ಮಾಯಿಲ್‌ಸಾಬ್, ದವಲ್ ಸಾಬ್ ನದಾಫ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.