ADVERTISEMENT

ಲಿಂಗಸುಗೂರು | ಬೇರುಗಳ ಹಿಡಿತದಲ್ಲಿ ದುರುಗಮ್ಮನ ಗುಡಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2024, 5:15 IST
Last Updated 18 ಜನವರಿ 2024, 5:15 IST
ವಿವಿಧ ಗಿಡ, ಮರ, ಬಳ್ಳಿಗಳ ಬೇರುಗಳಿಂದ ಆವೃತವಾದರೂ ಸುಭದ್ರವಾಗಿರುವ ಲಿಂಗಸುಗೂರು ತಾಲ್ಲೂಕು ಹನುಮಗುಡ್ಡ (ಹೊಸೂರು) ಗ್ರಾಮದ ದುರುಗಮ್ಮನ ಗುಡಿ
ವಿವಿಧ ಗಿಡ, ಮರ, ಬಳ್ಳಿಗಳ ಬೇರುಗಳಿಂದ ಆವೃತವಾದರೂ ಸುಭದ್ರವಾಗಿರುವ ಲಿಂಗಸುಗೂರು ತಾಲ್ಲೂಕು ಹನುಮಗುಡ್ಡ (ಹೊಸೂರು) ಗ್ರಾಮದ ದುರುಗಮ್ಮನ ಗುಡಿ   

ಲಿಂಗಸುಗೂರು: ಕಟ್ಟಡಗಳಲ್ಲಿ ಗಿಡಮರಗಳು ಬೆಳೆದರೆ ಆ ಕಟ್ಟಡ ಶಿಥಿಗೊಳ್ಳುವುದು ಸಾಮಾನ್ಯ. ಆದರೆ ತಾಲ್ಲೂಕಿನ ಹನುಮಗುಡ್ಡ (ಹೊಸೂರು) ಗ್ರಾಮದಲ್ಲಿ ಬಸರಿ, ಬೇವು ಇತರೆ ಗಿಡ ಬಳ್ಳಿಗಳ ಬೇರುಗಳ ಹಿಡಿತದಲ್ಲಿ ದುರುಗಮ್ಮದೇವಿ ಗುಡಿ ಸುಭದ್ರ ಸ್ಥಿತಿಯಲ್ಲಿರುವುದು ವಿಸ್ಮಯ ಮೂಡಿಸಿದೆ.

ಗ್ರಾಮ ಪ್ರವೇಶಿಸುವ ಮಾರ್ಗದಲ್ಲಿ ಭಾರಿ ಪ್ರಮಾಣದಲ್ಲಿ ಬೆಳೆದಿರುವ ಬಸರಿ ಗಿಡ ಮತ್ತು ಇತರೆ ಮರ ಬಳ್ಳಿಗಳ ಬೇರು ಗುಡಿಯ ನಾಲ್ಕು ಗೋಡೆಗಳನ್ನು ಆವರಿಸಿಕೊಂಡಿವೆ. ಗುಡಿಯನ್ನು ಬೇರುಗಳ ಸಮೇತ ನಿರ್ಮಿಸಿದ್ದಾರೆ ಎಂಬ ಕಲ್ಪನೆ ಬರುತ್ತದೆ. ಗರ್ಭಗುಡಿ ಬಾಗಿಲು ಚೌಕಟ್ಟು ಆಕಾರದಲ್ಲಿ ಬೇರುಗಳು ಸುತ್ತುವರೆದಿದ್ದು ಇಲ್ಲಿನ ವಿಶೇಷ.

ಮರ, ಗಿಡ, ಬಳ್ಳಿಗಳ ಬುಡದಲ್ಲಿ ದುರುಗಮ್ಮನ ಗುಡಿ ತಲೆ ಎತ್ತಿ ನಿಂತಿದೆ. ಶತ ಶತಮಾನಗಳಷ್ಟು ಹಿಂದಿನ ಗುಡಿ ಆಗಿದ್ದು ಅಂದಿನಿಂದ ಇದೇ ಸ್ಥಿತಿಯಲ್ಲಿದೆ. ಬೇರುಗಳು ಗೋಡೆಯ ಒಳ ಮತ್ತು ಹೊರಮೈಗೆ ಬೆಸೆದುಕೊಂಡಿದ್ದು ಶಿಲ್ಪಿಯೋರ್ವ ಕೆತ್ತನೆ ಮಾಡಿ ಬೇರುಗಳ ಹೊದಿಕೆ ಮಾಡಿರಬಹುದೆ ಎಂಬ ಕಲ್ಪನೆಗಳು ಮೂಡಿಬರುವಂತಿದೆ.

ADVERTISEMENT

ಬೃಹತ್‍ ಪ್ರಮಾಣದ ಗಿಡ, ಮರ, ಬಳ್ಳಿಗಳ ಬೇರುಗಳು ಗುಡಿಯ ಹೊರಗಡೆ ಮತ್ತು ಒಳಗಡೆ ಎಲ್ಲಿಯೂ ಕಾಣಸಿಗುವುದಿಲ್ಲ. ಅಷ್ಟೊಂದು ಬೇರುಗಳಿದ್ದರು ಗುಡಿಯ ಗೋಡೆಗಳಿಗೆ ಹೆಣೆದುಕೊಂಡಿದ್ದು ಪವಾಡ ಎಂಬಂತಿದೆ. ಗ್ರಾಮ ಪ್ರವೇಶಿಸುವ ಹೊಸ ವ್ಯಕ್ತಿ ಸ್ವಲ್ಪ ನಿಂತು ಆಳೆತ್ತರದ ಗಿಡಮರ, ಸುಸ್ಥಿತಿಯಲ್ಲಿರುವ ಗುಡಿ ನೋಡಿ  ಹೋಗುವುದು ಸಾಮಾನ್ಯ.

‘ದುರುಗಮ್ಮ ದೇವಿಗೆ ಪ್ರತಿ ವರ್ಷ ಮುಂಗಾರು ಆರಂಭದಲ್ಲಿ ಐದು ವಾರಗಳ ಕಟ್ಟಳೆಯ ಪೂಜೆ ವಿಧಿ ವಿಧಾನ ಮಾಡುತ್ತೇವೆ. ಐದನೇ ದಿನ ಕಳಸದ ಮೆರವಣಿಗೆ, ಅಭಿಷೇಕ ನೆರವೇರಿಸಿ ಅನ್ನ ಸಂತರ್ಪಣೆ ಮಾಡುತ್ತ ಬಂದಿದ್ದೇವೆ’ ಎಂದು ಗ್ರಾಮಸ್ಥ ಸಂಗಣ್ಣ ಗೊಂದಿ ಹೇಳುತ್ತಾರೆ.

ಲಿಂಗಸುಗೂರು ತಾಲ್ಲೂಕು ಹನುಮಗುಡ್ಡ (ಹೊಸೂರು) ಗ್ರಾಮದ ಆರಾಧ್ಯ ದೈವಳಾದ ದುರುಗಮ್ಮ ಗುಡಿ ಗಿಡ ಮರ ಬೇರುಗಳ ಹಿಡಿತದಲ್ಲಿ ಸುಭದ್ರವಾಗಿರುವುದನ್ನು ವೀಕ್ಷಿಸುತ್ತಿರುವ ಯುವಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.