ರಾಯಚೂರು: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯಡಿ ಅರ್ಹರು ಅನುಕೂಲ ಪಡೆದುಕೊಳ್ಳಲು ಇದೇ ಸೆಪ್ಟೆಂಬರ್ 14ರೊಳಗಾಗಿ ಇ-ಕೆವೈಸಿಯನ್ನು ಕಡ್ಡಾಯವಾಗಿ ಮಾಡಿಸಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೇವಿಕಾ ಆರ್. ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂ ಒಡೆತನ ಹೊಂದಿರುವ ಪ್ರತಿ ರೈತ ಕುಟುಂಬಕ್ಕೆ ಮೂರು ಕಂತುಗಳಲ್ಲಿ ವಾರ್ಷಿಕವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವತಿಯಿಂದ ಒಟ್ಟು ₹ 10ಸಾವಿರ ದೊರೆಯುತ್ತದೆ. ಅರ್ಹ ರೈತರು ಕೂಡಲೇ ಇ–ಕೆವೈಸಿ ಮಾಡಿಸಬೇಕು. ಈ ಯೋಜನೆಯಡಿಯಲ್ಲಿ ಕೇಂದ್ರದಿಂದ ₹404.34 ಕೋಟಿ ಹಾಗೂ ರಾಜ್ಯ ಸರ್ಕಾರದಿಂದ ₹154.06 ಕೋಟಿ ಒಟ್ಟಾರೆ ₹558,40 ಕೋಟಿಗಳನ್ನು 20,21,748 ಫಲಾನುಭವಿಗಳ ಖಾತೆಗೆ ನೇರವಾಗಿ ವಿವಿಧ ಕಂತುಗಳಲ್ಲಿ ಜಮೆ ಮಾಡಲಾಗಿದೆ. ಇನ್ನು ಮುಂದೆ ಈ ಸೌಲಭ್ಯ ಪಡೆಯಲು ಇ-ಕೆವೈಸಿ ಕಡ್ಡಾಯವಾಗಿದ್ದು, ಅರ್ಹ ರೈತರು ಇ-ಕೆವೈಸಿ ಮಾಡಿಸಬಹುದಾಗಿದೆ ಎಂದರು.
ಮುಖ್ಯಮಂತ್ರಿ ರೈತ ವಿದ್ಯಾ ನಿಧಿ ಯೋಜನೆ ಅಡಿಯಲ್ಲಿ ರೈತರ ಮಕ್ಕಳ ಹೆಚ್ಚಿನ ಪ್ರೋತ್ಸಾಹಿಸುವ ಹಾಗೂ ಶಾಲೆ ದೊರೆಯುವುದನ್ನು ತಡೆಯಲು ಇದುವರೆಗೆ 40,487 ವಿದ್ಯಾರ್ಥಿಗಳ ಖಾತೆಗೆ ₹15.40 ಕೋಟಿ ವಿದ್ಯಾರ್ಥಿ ವೇತನವನ್ನು ಜಮಾ ಮಾಡಲಾಗಿದೆ. ರೈತಶಕ್ತಿ ಯೋಜನೆಯಡಿ ರೈತರಿಗೆ ಕೃಷಿ ಯಂತ್ರೋಪಕರಣ ಬಳಿಕೆಯನ್ನು ಪ್ರೋತ್ಸಾಹಿಸುವ ಹಾಗೂ ಇಂಧನ ವೆಚ್ಚ ಭಾರವನ್ನು ಕಡಿಮೆ ಮಾಡಲು ಪ್ರತಿ ಎಕರೆಗೆ 250ಗಳಂತೆ ಗರಿಷ್ಠ ಐದು ಎಕರೆ ಡೀಸೆಲ್ ಸಹಾಯಧನವನ್ನು ನೀಡಲು ರೈತ ಶಕ್ತಿ ಎಂಬ ಹೊಸ ಯೋಜನೆ ಜಾರಿಗೆ ತರಲಾಗಿದ್ದು, ಜಿಲ್ಲೆಯಲ್ಲಿ 2,99,214 ರೈತರಿ ಇಲ್ಲಿವರೆಗೂ 2,77,801 ಶೇ 92.84ರಷ್ಟು ರೈತರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದ ಕಳೆದ ಮೇ ತಿಂಗಳಿಂದ ಅಗಸ್ಟ್ ಅಂತ್ಯದವರೆಗೂ ಒಟ್ಟು 1,806 ಹೆಕ್ಟೇರ್ ಬೆಳೆಹಾನಿಯಾಗಿದ್ದು, ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದರು.
ಕೃಷಿ ಇಲಾಖೆ ಉಪ ನಿರ್ದೇಶಕ ನಯೀಂ ಹುಸೇನ್, ಅಧಿಕಾರಿಗಳಾದ ತಿಮ್ಮಪ್ಪ, ಶರಣಮ್ಮ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.