ADVERTISEMENT

ನೀರಾವರಿ ಸಾಮಗ್ರಿ ಗುಜರಿಗೆ ಹಾಕಲು ಮುಂದಾದ ರೈತರು!

ಕವಿತಾಳ: ಕೊಳವೆ ಭಾವಿಯಿಂದ ನೀರು ಎತ್ತದ ಮೋಟರ್

ಮಂಜುನಾಥ ಬಳ್ಳಾರಿ
Published 17 ಅಕ್ಟೋಬರ್ 2023, 5:11 IST
Last Updated 17 ಅಕ್ಟೋಬರ್ 2023, 5:11 IST
ಕವಿತಾಳ ಸಮೀಪದ ಕಾಚಾಪುರದ ರೈತನಿಗೆ ವಿತರಿಸಿದ ಕೊಳವೆಬಾವಿ ಮೋಟಾರ್ ದುರಸ್ತಿಗೆ ಬಿಚ್ಚಿರುವುದು
ಕವಿತಾಳ ಸಮೀಪದ ಕಾಚಾಪುರದ ರೈತನಿಗೆ ವಿತರಿಸಿದ ಕೊಳವೆಬಾವಿ ಮೋಟಾರ್ ದುರಸ್ತಿಗೆ ಬಿಚ್ಚಿರುವುದು   

ಕವಿತಾಳ: ಗಂಗಾ ಕಲ್ಯಾಣ ಯೋಜನೆಯಡಿ ವಿತರಿಸಿದ ಸಾಮಗ್ರಿಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು ಅವುಗಳನ್ನು ಗುಜರಿಗೆ ಹಾಕಲು ರೈತರು ಮುಂದಾಗಿದ್ದಾರೆ.

ಪಟ್ಟಣ ಸೇರಿದಂತೆ ಮಸ್ಕಿ ತಾಲ್ಲೂಕಿನ ಯತಗಲ್, ಕಾಚಾಪುರ, ನೆಲಕೊಳ ಮತ್ತು ಯಕ್ಲಾಸ್ಪುರ ಗ್ರಾಮಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಉಪಕರಣಗಳು ನೀರೆತ್ತದ ಕಾರಣ ಅವುಗಳನ್ನು ಪದೇ ಪದೇ ಕೊಳವೆಬಾವಿಗೆ ಹಾಕಿ ತೆಗೆದು ಹೈರಾಣಾಗಿದ್ದಾರೆ.

2019-20ನೇ ಸಾಲಿನಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಕೊವಿಡ್‍ -19 ಹಿನ್ನೆಲೆ ಕಳೆದ 4 ತಿಂಗಳ ಹಿಂದೆ 15 ಪೈಪ್‍, ‌ಕ್ಲಿಪ್ಪಿಂಗ್, ವಿದ್ಯುತ್ ಕೇಬಲ್, ಮೋಟರ್, ಪಂಪ್ ಹಾಗೂ ಸ್ಟಾಟರ್ ಸೇರಿದಂತೆ ಅಗತ್ಯ ಸಾಮಗ್ರಿ ವಿತರಿಸಲಾಗಿದೆ. ಮೋಟರ್‌ ಮತ್ತು ಪಂಪ್‍ ಮೇಲೆ ಪ್ರತಿಷ್ಠಿತ ಕಂಪನಿ ಲೇಬಲ್‍ ಹಾಕಿದ್ದರೂ ಕೊಳವೆಬಾವಿಯಿಂದ ನೀರೇ ಎತ್ತುತ್ತಿಲ್ಲ ಎನ್ನುವುದು ರೈತರ ಆರೋಪ.

ADVERTISEMENT

‘ತಾಲ್ಲೂಕು ಕೇಂದ್ರಕ್ಕೆ ಹೋಗಿ ಸಾಮಗ್ರಿಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ತಂದು ನುರಿತ ಮೆಕ್ಯಾನಿಕ್‍ ಸಹಾಯದೊಂದಿಗೆ ಜೋಡಣೆ ಮಾಡಲು ಸಾವಿರಾರು ರೂಪಾಯಿ ಖರ್ಚಾಗಿದೆ, ನೀರು ಎತ್ತದೆ ಹೋದರೆ ಮೋಟರ್ ಮತ್ತು ಪಂಪ್‌ನ್ನು ಪದೇ ಪದೇ ತೆಗೆದು ಹಾಕಿ ನಷ್ಟಅನುಭವಿಸವಂತಾಗಿದೆ’ ಎಂದು ರೈತ ಈರಪ್ಪ ಯತಗಲ್ ಅಳಲು ತೋಡಿಕೊಂಡರು.

‘ಬೇರೆ ಯಾವುದೇ ಕಂಪನಿ ಉಪಕರಣಗಳಿಗೆ ಹೊಂದಾಣಿಕೆಯಾಗದ ಮೋಟಾರ್ ಮತ್ತು ಪಂಪ್‍ ವಿತರಿಸಲಾಗಿದೆ. ಹೀಗಾಗಿ ಎರಡನ್ನೂ ಬದಲಿಸಬೇಕಿದೆ, ಹೊಸದಾಗಿ ಖರೀದಿಸುವ ಸಾಮಗ್ರಿಗೆ ಇವುಗಳನ್ನು ವಿನಿಮಯ ಮಾಡಿಕೊಳ್ಳಲು ತಿರಸ್ಕಾರ ಮಾಡುತ್ತಿದ್ದಾರೆ’ ಎಂದು ರೈತ ಮಹಿಳೆ ಪಾರ್ವತಮ್ಮ ಕಾಚಾಪುರ, ಬಸನಗೌಡ ಯತಗಲ್ ಹೇಳಿದರು.

‘ರೈತರು ದೂರು ನೀಡಿದರೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳಲಾಗುವುದು ಆತುರ ಪಟ್ಟು ಗುಜರಿಗೆ ಹಾಕುವುದು ಬೇಡ’ ಎಂದು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ತಾಲ್ಲೂಕು ಅಧಿಕಾರಿ ನಾರಾಯಣಪ್ಪ ಹೇಳಿದರು.

ಕವಿತಾಳ ಸಮೀಪದ ಕಾಚಾಪುರದ ರೈತನಿಗೆ ವಿತರಿಸಿದ ಕೊಳವೆಬಾವಿಯ ಮೋಟರ್ ಪಂಪ್
ಈರಪ್ಪ

ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿವೆ ನೀರು ಹಾಯಿಸಿ ಬೆಳೆ ರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ ಅಧಿಕಾರಿಗಳು ಶೀಘ್ರ ಪರ್ಯಾಯ ವ್ಯವಸ್ಥೆ ಮಾಡಬೇಕು

ಈರಪ್ಪ, ರೈತ

ಮಾಹಿತಿ ಮತ್ತು ಸಾಮಗ್ರಿಯ ಚಿತ್ರ ಸಹಿತ ಫಲಾನುಭವಿ ರೈತರು ದೂರು ಸಲ್ಲಿಸಿದರೆ ಬೆಂಗಳೂರು ಮೂಲದ ಸರಬರಾಜುದಾರರಿಗೆ ಮಾಹಿತಿ ನೀಡಿ ಅವುಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು –

–ಜಗಧೀಶ ನಾಯಕ ಜಿಲ್ಲಾ ವ್ಯವಸ್ಥಾಪಕ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ ರಾಯಚೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.