ರಾಯಚೂರು: ರಾಜ್ಯದ ಅತ್ಯಂತ ಹಳೆಯ ಜಿಲ್ಲೆಗಳಲ್ಲೇ ರಾಯಚೂರು ಒಂದು. ಹೊಸ ಜಿಲ್ಲೆಗಳು ಅಸ್ತಿತ್ವಕ್ಕೆ ಬಂದು ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದ್ದರೂ ಗೂಟಕ್ಕೆ ಕಟ್ಟಿದಂತೆ ರಾಯಚೂರು ಹಿಂದುಳಿದ ಸ್ಥಾನದಲ್ಲೇ ಇದೆ. ಇಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿದ್ದರೂ ರಾಜಕಾರಣಿಗಳು ಸರಿಯಾಗಿ ಸ್ಪಂದಿಸಿಲ್ಲ. ಅಧಿಕಾರಿಗಳೂ ಆಸಕ್ತಿಯಿಂದ ಕೆಲಸ ಮಾಡಿಲ್ಲ. ಇಲ್ಲಿ ಅಭಿವೃದ್ಧಿ ನಿಧಾನ, ಅತಿಕ್ರಮಣವೇ ಪ್ರಧಾನವಾಗಿದೆ.
ಜಿಲ್ಲೆಯಲ್ಲಿ ಒಟ್ಟು ಆರು ಐತಿಹಾಸಿಕ ಕೋಟೆಗಳಿವೆ. 78 ವರ್ಷಗಳಲ್ಲಿ ಅತಿಕ್ರಮಣವು ಕೋಟೆಗಳನ್ನೇ ನುಂಗಿ ಹಾಕಿದೆ. ರಾಯಚೂರಿನಲ್ಲಿ ಶೇಕಡ 80ರಷ್ಟು ಕೋಟೆ ಪ್ರದೇಶ ಅತಿಕ್ರಮಣಕ್ಕೆ ಒಳಗಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಅತಿಕ್ರಮಣ ಮಾಡಿದವರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಒಂದು ಅಡಿಯನ್ನೂ ಬಿಡದಂತೆ ಅತಿಕ್ರಮಣ ಮುಂದುವರಿದಿದೆ. ಚುನಾಯಿತ ಪ್ರತಿನಿಧಿಗಳೇ ಅತಿಕ್ರಮಣ ಮಾಡಿ ಬಹುಮಹಡಿ ಕಟ್ಟಡಗಳನ್ನು ಕಟ್ಟುತ್ತಿದ್ದಾರೆ. ಕೋಟ್ಯಂತರ ಬೆಲೆ ಬಾಳುವ ಜಾಗ ಅತಿಕ್ರಮಣವಾಗುತ್ತಿದ್ದರೂ ಇಲ್ಲಿ ಕೇಳುವವರೇ ಇಲ್ಲ. ಅಧಿಕಾರಿಗಳು ಕಿವಿ, ಕಣ್ಣು ಇಲ್ಲದಂತೆ ಇದ್ದಾರೆ.
ಜಿಲ್ಲಾ ಕೇಂದ್ರದಲ್ಲೇ ರಾಜ್ಯ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಕಚೇರಿ ಇದ್ದರೂ ಅಲ್ಲಿ ಅಧಿಕೃತವಾಗಿ ‘ಡಿ‘ ದರ್ಜೆಯ ನೌಕರರೊಬ್ಬರೇ ಇದ್ದಾರೆ. ಅಧಿಕಾರಿಗಳು ಹಾಗೂ ಕಾಯಂ ಸಿಬ್ಬಂದಿ ಇಲ್ಲದ ಕಾರಣ ನಗರದಲ್ಲಿ ಅವ್ಯಾಹತವಾಗಿ ನಡೆದಿರುವ ಅತಿಕ್ರಮಣಕಾರರ ವಿರುದ್ಧ ಧ್ವನಿ ಎತ್ತುವವರೇ ಇಲ್ಲವಾಗಿದ್ದಾರೆ.
ಬಸವೇಶ್ವರ ವೃತ್ತದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ಹೋಗುವ ಮಾರ್ಗದಲ್ಲಿ ಎಡಭಾಗದಲ್ಲಿ ಕೋಟೆಯ ಗೋಡೆಗಳು ಹಾಗೂ ಬುರ್ಜ್‌ಗಳು ಕಾಣಸಿಗುತ್ತವೆ. ಇದರ ಎರಡೂ ಬದಿಗೂ ಅತಿಕ್ರಮಣವಾಗಿದೆ. ಕೋಟೆ ಮುಂದಿನ ಕಂದಕ ಇದೀಗ ಕೊಳಚೆ ನೀರಿನ ರಾಜಕಾಲುವೆಯಾಗಿದೆ.
ರಾಜ್ಯ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು ಕೇಂದ್ರ ಬಸ್ ನಿಲ್ದಾಣ ಸಮೀಪದ ಕೋಟೆ ಪ್ರವೇಶ ದ್ವಾರದಲ್ಲಿರುವ ಬುರ್ಜ್ ದುರಸ್ತಿ ಪಡಿಸಿದೆ. ಅದರೊಳಗೆ ಒಂದು ವಾಚನಾಲಯ ಪ್ರಾರಂಭಿಸಲಾಗಿದೆ. ಕಾರ್ಯಕ್ರಮ ನಡೆಸಲು ಚಿಕ್ಕ ಬಯಲು ರಂಗ ಮಂದಿರವನ್ನೂ ನಿರ್ಮಿಸಲಾಗಿದೆ. ಕೋಟೆ ಪಕ್ಕದಲ್ಲಿರುವ ಕೊಳಚೆ ನೀರಿನ ಗಬ್ಬು ನಾತ ಜನರ ನೆಮ್ಮದಿ ಹಾಳು ಮಾಡಿದೆ.
‘ವೃತ್ತ ಸಮೀಪ ಸಾರ್ವಜನಿಕ ಶೌಚಾಲಯದ ಪಕ್ಕದಲ್ಲೇ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು, ಸಚಿವರು, ಶಾಸಕರು ಪ್ರತಿಭಟನೆ ಹಾಗೂ ಸರ್ಕಾರಿ ಕಾರ್ಯಕ್ರಮಗಳ ಜಾಗೃತಿ ಮೆರವಣಿಗೆ ನಡೆಸಿದರೂ ಕೋಟೆ ಆವರಣದ ನೈರ್ಮಲ್ಯಕ್ಕೆ ಕ್ರಮ ಕೈಗೊಳ್ಳುತ್ತಿಲ್ಲ. ಕೆಲ ಕನ್ನಡಪರ ಸಂಘಟನೆಗಳು ಅತಿಕ್ರಮಣ ತೆರವಿಗೆ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಜಿಲ್ಲಾಡಳಿತ ಹಾಗೂ ಸರ್ಕಾರ ಗಂಭೀರವಾಗಿಲ್ಲ. ಅವರೆ ಮನವಿಗೂ ಕವಡೆ ಕಾಸಿನ ಬೆಲೆ ನೀಡಿಲ್ಲ’ ಎಂದು ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಮುಖಂಡ ವಿನೋದ ರೆಡ್ಡಿ ಬೇಸರ ವ್ಯಕ್ತಪಡಿಸುತ್ತಾರೆ.
‘ಜಿಲ್ಲೆಯಲ್ಲಿ ಐತಿಹಾಸಿಕ ಸ್ಮಾರಕಗಳ ಕೊರತೆ ಇಲ್ಲ. ಅಭಿವೃದ್ಧಿ ಮಾಡುವ ಮನಸ್ಸುಗಳ ಕೊರತೆ ಇದೆ. ರಾಜ್ಯ ಸರ್ಕಾರ ಜಿಲ್ಲೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ನಿಟ್ಟಿಯಲ್ಲಿ ಸ್ಮಾರಕಗಳ ಸಂರಕ್ಷಣೆ ಮಾಡಬೇಕು. ಸ್ಮಾರಕ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸಬೇಕು‘ ಎಂದು ಸಾಹಿತಿ ಈರಣ್ಣ ಬೆಂಗಾಲಿ ಮನವಿ ಮಾಡುತ್ತಾರೆ.
ಮಾವಿನಕೆರೆ ಗುಡ್ಡದ ಮೇಲೆ ಕಾಣುವ ಅವಶೇಷಗಳ ಮೇಲೆ ಬೆಳಕು ಚೆಲ್ಲಲು ಕೆಲವು ವರ್ಷಗಳ ಹಿಂದೆ ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಲಾಗಿತ್ತು. ಕಳ್ಳರು ಅವುಗಳಲ್ಲಿನ ಬಲ್ಬ್, ಕೇಬಲ್ ಹಾಗೂ ಜಾಲರಿಗಳನ್ನು ಕದ್ದು ಒಯ್ದಿದ್ದಾರೆ. ಗುಡ್ಡದ ಮೇಲಿನ ವೀಕ್ಷಣಾ ಗೋಪರಕ್ಕೆ ಹೋಗುವ ಜಾಗ ಹಾಳಾಗಿದೆ. ತೋಟಗಾರಿಕೆ ಇಲಾಖೆ ಸಮೀಪದ ವೃತ್ತದಲ್ಲಿ ಕೆಲ ಶಿಲ್ಪಗಳನ್ನು ಇಡಲಾಗಿದೆ. ಅವು ಅಸ್ತಿತ್ವ ಕಳೆದುಕೊಳ್ಳುತ್ತಿವೆ.
‘ಹಿಂದಿನ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಅವರೊಂದಿಗೆ ರಾಯಚೂರು ಕೋಟೆ ಅಭಿವೃದ್ಧಿ ವಿಷಯವಾಗಿ ಚರ್ಚಿಸಲಾಗಿತ್ತು. ಪ್ರವಾಸಿ ಮಿತ್ರ ಯೋಜನೆ ಅಡಿಯಲ್ಲಿ ಪ್ರವಾಸೋದ್ಯಮ ಇಲಾಖೆಯವರು ಇಬ್ಬರು ಕಾವಲುಗಾರರನ್ನು ಕೊಟ್ಟಿದ್ದಾರೆ. ಅವರನ್ನು ವಸ್ತು ಸಂಗ್ರಹಾಲಯದ ರಕ್ಷಣೆಗೆ ನೇಮಕ ಮಾಡಲಾಗಿದೆ‘ ಎನ್ನುತ್ತಾರೆ ಕಲಬುರಗಿಯಲ್ಲಿರುವ ರಾಜ್ಯ ಪುರಾತತ್ವ ಇಲಾಖೆಯ ಪುರಾತತ್ವ ಸಂರಕ್ಷಣಾ ಎಂಜಿನಿಯರ್ ಪ್ರೇಮಲತಾ ಬಿ.ಎಂ.
‘ಕೇಂದ್ರ ಬಸ್ ನಿಲ್ದಾಣ ಸಮೀಪ ಕೋಟೆ ಬುರ್ಜ್ ಬಿದ್ದಿತ್ತು. ಅದನ್ನು ದುರಸ್ತಿ ಪಡಿಸಲಾಗಿದೆ. ಕೋಟೆ ಪ್ರದೇಶವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವ ದಿಸೆಯಲ್ಲಿ ವಿಸ್ತೃತ ಯೋಜನಾ ಸಿದ್ಧಪಡಿಸಲಾಗುತ್ತಿದೆ. ಶೀಘ್ರದಲ್ಲೇ ಜಿಲ್ಲಾಡಳಿತಕ್ಕೆ ಸಲ್ಲಿಸಲಾಗುವುದು‘ ಎಂದು ಹೇಳುತ್ತಾರೆ.
ಹಿಂದೆ ರಾಯಚೂರಿನ ಜಿಲ್ಲಾಧಿಕಾರಿಯೊಬ್ಬರು ಕೋಟೆ ಅಭಿವೃದ್ಧಿ ಪಡಿಸಲು ನಗರದ ಮಧ್ಯ ಭಾಗದಲ್ಲಿರುವ ಕೋಟೆ ಪ್ರದೇಶದಲ್ಲಿನ ಮನೆಗಳನ್ನು ತೆರವುಗೊಳಿಸಿ ಇಲ್ಲಿಯ ನಿವಾಸಿಗಳಿಗೆ ಪರ್ಯಾಯ ಜಾಗ ಕಲ್ಪಿಸಿದ್ದರು. ಪುರಾತತ್ವ ಇಲಾಖೆಗೆ ಸೇರಿದ ಈ ಜಾಗದಲ್ಲಿ ಅಂದವಾದ ಉದ್ಯಾನ ನಿರ್ಮಿಸಿ ಅಭಿವೃದ್ಧಿ ಮಾಡಬೇಕು ಎನ್ನುವಷ್ಟರಲ್ಲೇ ಅವರನ್ನು ವರ್ಗ ಮಾಡಲಾಯಿತು.
ರಾಜಕಾರಣಿಗಳು ತಮ್ಮ ಕೈಗೊಂಬೆಯಂತೆ ಕೆಲಸ ಮಾಡುವ ಅಧಿಕಾರಿಗಳನ್ನು ಇಲ್ಲಿಗೆ ವರ್ಗ ಮಾಡಿಸಿಕೊಂಡು ಬಂದರು. ಇದಾದ ನಂತರ ಪರ್ಯಾಯ ಜಾಗ ಪಡೆದವರು ಮತ್ತೆ ಇಲ್ಲಿಗೆ ಬಂದು ನೆಲೆಸಿ ಸಿಮೆಂಟ್ ಕಾಂಕ್ರೀಟ್ ಮನೆಗಳನ್ನು ಕಟ್ಟಿಸಿಕೊಂಡರು. ಕೋಟೆ ಸುತ್ತ ಇರುವ ಪ್ರದೇಶದಲ್ಲಿ ಹಾಗೂ ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತದ ವರೆಗೆ ರಸ್ತೆ ಪಕ್ಕದಲ್ಲಿರುವ ಜಾಗವನ್ನು ಅತಿಕ್ರಮಣ ಮಾಡುವುದು ಮುಂದುವರಿದಿದೆ.
* ಸಾಧ್ಯವಿರುವ ಮಟ್ಟಿಗಾದರೂ ಅತಿಕ್ರಮಣ ತೆರವುಗೊಳಿಸಬೇಕು
* ನಿಲ್ದಾಣ ಸಮೀಪದ ಗುಡ್ಡದ ಮೇಲೆ ಹೋಗಲು ಒಂದು ರೋಪ್ ವೇ ನಿರ್ಮಿಸಬೇಕು
* ಗುಡ್ಡದ ಮೇಲೆ ವೀಕ್ಷಣಾ ಗೋಪುರ ನಿರ್ಮಾಣ ಮಾಡಬೇಕು
* ರಾಜಮನೆಗಳ ಇತಿಹಾಸ ಬಿಂಬಿಸುವ ಪ್ರತಿಕೃತಿ ನಿರ್ಮಿಸಬೇಕು
* ಗುಡ್ಡದ ಸುತ್ತಲೂ ಬೇಲಿ ನಿರ್ಮಿಸಿ ಒಳಗಡೆಯೇ ಪಾತ್‌ವೇ ನಿರ್ಮಾಣ ಮಾಡಬೇಕು
* ಕೊಳಚೆ ನೀರು ಮಾವಿನ ಕೆರೆಗೆ ಸೇರದಂತೆ ನೋಡಿಕೊಳ್ಳಬೇಕು
* ನೈರ್ಮಲ್ಯಕ್ಕೆ ಹೆಚ್ಚಿನ ಒತ್ತುಕೊಡಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.