ADVERTISEMENT

‘ರಾಜ್ಯದಲ್ಲಿ ಕೃಷಿ ಎಂಜಿನಿಯರಿಂಗ್‌ ನಿರ್ದೇಶನಾಲಯ ಸ್ಥಾಪಿಸಿ’

ಭಾರತೀಯ ಅನುಸಂಧಾನ ಪರಿಷತ್ತಿನ ಉಪ ಮಹಾ ನಿರ್ದೇಶಕ ಡಾ.ಝಾ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 15:34 IST
Last Updated 29 ಫೆಬ್ರುವರಿ 2024, 15:34 IST
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 13ನೆಯ ಘಟಿಕೋತ್ಸವದಲ್ಲಿ ನವದೆಹಲಿಯ ಭಾರತೀಯ ಅನುಸಂಧಾನ ಪರಿಷತ್ತಿನ ಉಪ ಮಹಾ ನಿರ್ದೇಶಕ ಡಾ.ಎಸ್‌.ಎನ್‌.ಝಾ ದಿಕ್ಸೂಚಿ ಭಾಷಣ ಮಾಡಿದರು
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 13ನೆಯ ಘಟಿಕೋತ್ಸವದಲ್ಲಿ ನವದೆಹಲಿಯ ಭಾರತೀಯ ಅನುಸಂಧಾನ ಪರಿಷತ್ತಿನ ಉಪ ಮಹಾ ನಿರ್ದೇಶಕ ಡಾ.ಎಸ್‌.ಎನ್‌.ಝಾ ದಿಕ್ಸೂಚಿ ಭಾಷಣ ಮಾಡಿದರು   

ರಾಯಚೂರು: ‘ಕೃಷಿಯಲ್ಲಿ ಆಮೂಲಾಗ್ರ ಬದಲಾವಣೆ ತರುವ ದಿಸೆಯಲ್ಲಿ ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಕೃಷಿ ಎಂಜಿನಿಯರಿಂಗ್‌ ನಿರ್ದೇಶನಾಲಯ ಸ್ಥಾಪಿಸಬೇಕು’ ಎಂದು ಭಾರತೀಯ ಅನುಸಂಧಾನ ಪರಿಷತ್ತಿನ ಕೃಷಿ ಎಂಜಿನಿಯರಿಂಗ್‌ ವಿಭಾಗದ ಉಪ ಮಹಾ ನಿರ್ದೇಶಕ ಡಾ.ಎಸ್‌.ಎನ್‌.ಝಾ ಸಲಹೆ ನೀಡಿದರು.

ನಗರದ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ದಿಕ್ಸೂಚಿ ಭಾಷಣ ಮಾಡಿದರು.

‘ಪ್ರತಿ ಪಂಚಾಯಿತಿ, ಬ್ಲಾಕ್, ಜಿಲ್ಲೆಗಳಲ್ಲಿ ಎಂಜಿನಿಯರ್‌ಗಳನ್ನು ನೇಮಿಸಬೇಕು. ಸರಿಯಾದ ಸ್ಥಳಗಳಲ್ಲಿ ಸರಿಯಾದ ಜ್ಞಾನ ಹೊಂದಿರುವ ಸರಿಯಾದ ವ್ಯಕ್ತಿಗಳ ಅಗತ್ಯವಿದೆ. ಈ ದಿಸೆಯಲ್ಲಿ ಎಂಜಿನಿಯರಿಂಗ್ ಪಡೆದವರಿಗೆ ಇನ್ನಷ್ಟು ತರಬೇತಿ ನೀಡಿ ಸಜ್ಜುಗೊಳಿಸಬೇಕಿದೆ’ ಎಂದರು.

ADVERTISEMENT

‘ನಿರ್ದೇಶನಾಲಯದ ಮೂಲಕ ಕೆಲಸದ ಮೇಲ್ವಿಚಾರಣೆ ನಡೆಸಬೇಕು. ಅಂದಾಗ ಮಾತ್ರ
ಉತ್ತಮ ಯೋಜನೆ ರೂಪಿಸಲು ಹಾಗೂ ಯೋಜನೆಯ ಸಮರ್ಪಕ ಅನುಷ್ಠಾನ ಸಾಧ್ಯವಾಗುತ್ತದೆ. ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಸುಧಾರಣೆಯಲ್ಲಿ ಬಹಳ ಮುಂದಿದೆ’ ಎಂದು ಹೇಳಿದರು.

ಕೃಷಿಯಲ್ಲಿ ಪದವಿ ಹಾಗೂ ಎಂಜಿನಿಯರಿಂಗ್‌ ಪದವಿ ಪಡೆದವರು ಸಕಾರಾತ್ಮಕ ಚಿಂತನೆ ಹಾಗೂ ಕ್ರಿಯೆಯೊಂದಿಗೆ ದೇಶಕ್ಕೆ ಕೊಡುಗೆ ನೀಡಲು ಪ್ರಯತ್ನಿಸಬೇಕು. ಕೃಷಿ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ದಿಸೆಯಲ್ಲಿ ಕಾರ್ಯನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.

‘ಸಾಂಪ್ರದಾಯಿಕ ಕೃಷಿಯಲ್ಲಿ ಯುವಕರ ಆಸಕ್ತಿ ಕಡಿಮೆಯಾಗಿದೆ. ದೇಶದಲ್ಲಿ ಕೃಷಿ ಕಾರ್ಮಿಕರ ಶೇಕಡಾವಾರು ಪ್ರಮಾಣವು 1991ರಲ್ಲಿ ಶೇ 59.1ರಷ್ಟು, 2011ರಲ್ಲಿ ಶೇ 54.6ರಷ್ಟು ಮತ್ತು 2021ರಲ್ಲಿ ಶೇ39.4ಕ್ಕೆ ಇಳಿದಿದೆ. ದನಗಳ ಸಂಖ್ಯೆ 1971-72ರಲ್ಲಿ 78.42 ಮಿಲಿಯನ್‌ ಇತ್ತು. 2018-19ರಲ್ಲಿ 38.74 ಮಿಲಿಯನ್‌ಗೆ ಇಳಿಕೆಯಾಗಿದೆ’ ಎಂದು ತಿಳಿಸಿದರು.

‘ಕೃಷಿ ಕಾರ್ಮಿಕರು ಮತ್ತು ಬರದಲ್ಲಿ ನೆರವಾಗುವ ಜಾನುವಾರುಗಳ ಸಂಯೋಜಿತ ಪಾಲು ಹಾಗೂ ಭೂಮಿಯ ಹಿಡುವಳಿ ಕಡಿಮೆಯಾಗಿದೆ. ಇದರಿಂದಾಗಿ ಕೃಷಿಯನ್ನು ಲಾಭದಾಯಕವಾಗಿಸುವಲ್ಲಿ ಮತ್ತಷ್ಟು ಸಮಸ್ಯೆಗಳು ಎದುರಾಗುತ್ತಿವೆ’ ಎಂದು ಹೇಳಿದರು.

‘ಮುಂಬರುವ ವರ್ಷಗಳಲ್ಲಿ ರೊಬೊಟ್‌ ಮೂಲಕ ತಳಿ ಅಭಿವೃದ್ಧಿ, ವಿವಿಧ ಅಭಿವೃದ್ಧಿ ಮತ್ತು ಗುರುತಿಸುವಿಕೆ ವ್ಯವಸ್ಥೆಯನ್ನು ನಿರೀಕ್ಷಿಸಲಾಗುತ್ತಿದೆ. ಯಾಂತ್ರೀಕರಣ, ಯಾಂತ್ರೀಕೃತಗೊಂಡ ಮತ್ತು ಪರ್ಯಾಯಗಳ ಬಗ್ಗೆ ನೀತಿ ನಿರೂಪಕರು ಆಲೋಚಿಸುವ ಅಗತ್ಯವಿದೆ’ ಎಂದು ತಿಳಿಸಿದರು.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವದಲ್ಲಿ ಪದವಿ ಸ್ವೀಕರಿಸಿದ ನಂತರ ವಿದ್ಯಾರ್ಥಿಗಳು ಟೊಪ್ಪಿಗೆಯನ್ನು ಗಾಳಿಯಲ್ಲಿ ತೂರಿ ಸಂಭ್ರಮಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.