ADVERTISEMENT

ಲಿಂಗಸುಗೂರು: ಮೂರು ದಶಕ ಕಳೆದರೂ ಕಾಲುವೆಗೆ ಹರಿಯದ ನೀರು

ಗುತ್ತಿಗೆದಾರರು, ರಾಜಕಾರಣಿಗಳ ಪಾಲಿಗೆ ವರದಾನವಾದ ಯೋಜನೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 5:52 IST
Last Updated 1 ಜುಲೈ 2024, 5:52 IST
ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆ 25.500 ನೇ ಕಿ.ಮೀ ದಿಂದ 26ನೇ ಕಿ.ಮೀ ವರೆಗೆ ಕಾಂಕ್ರಿಟ್‍ ಲೈನಿಂಗ್‍ ಹಾಕಿಲ್ಲ
ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆ 25.500 ನೇ ಕಿ.ಮೀ ದಿಂದ 26ನೇ ಕಿ.ಮೀ ವರೆಗೆ ಕಾಂಕ್ರಿಟ್‍ ಲೈನಿಂಗ್‍ ಹಾಕಿಲ್ಲ   

ಲಿಂಗಸುಗೂರು (ರಾಯಚೂರು ಜಿಲ್ಲೆ): ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ನಾರಾಯಣಪುರ ಬಲದಂಡೆ ಕಾಲುವೆ ರೈತರ ಜಮೀನುಗಳಿಗೆ ನೀರು ಹರಿಸುವ ಬದಲು ಗುತ್ತಿಗೆದಾರರ ಮತ್ತು ರಾಜಕಾರಣಿಗಳ ಪಾಲಿಗೆ ವರದಾನವಾಗಿ ಪರಿಣಮಿಸಿದೆ. ಮೂರು ದಶಕ ಗತಿಸುತ್ತಿದ್ದರೂ ಯೋಜನೆಯ ವ್ಯಾಪ್ತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ಹರಿದಿಲ್ಲ.

1986-87ರ ಅವಧಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ನಾರಾಯಣಪುರ ಬಲದಂಡೆ ನಾಲೆ ಹೋರಾಟ ಸಮಿತಿ, ರೈತ ಕೂಲಿ ಸಂಗ್ರಾಮ ಸಮಿತಿಯ ಸಹಯೋಗದಲ್ಲಿ ಚಂದ್ರಶೇಖರ ಬಾಳೆ , ಪುರುಷೋತ್ತಮ ಕಲಾಲಬಂಡಿ ಟಿ.ಆರ್. ಕಮದಾಳ, ಆರ್. ಮಾನಸಯ್ಯ ನೇತೃತ್ವದಲ್ಲಿ  ಹಂತ ಹಂತವಾಗಿ ನಡೆದ ಹೋರಾಟಗಳ ಪರಿಣಾಮ 1990ರಲ್ಲಿ ಬಲದಂಡೆ ಕಾಲುವೆಗೆ ಸರ್ಕಾರದಿಂದ ಮಂಜೂರಾತಿ ದೊರೆಯಿತು.

1994-95ರ ಅವಧಿಯಲ್ಲಿ ತುಂಡು ಗುತ್ತಿಗೆ ಆಧಾರದ ಮೇಲೆ ಕಾಮಗಾರಿಗೆ ಚಾಲನೆ ನೀಡಲಾಯಿತು. ಇಲ್ಲಿಂದ ಎಡವಟ್ಟು ಸಹ ಶುರುವಾಯಿತು. ತುಂಡು ಗುತ್ತಿಗೆಯಲ್ಲಿ ಭಾರಿ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದವು. ಹಲವು ಹಂತದ ತನಿಖೆಗಳ ಮಧ್ಯೆಯೇ 2002ರಲ್ಲಿ ಕಾಲುವೆಗೆ ನೀರು ಹರಿಸಲಾಯಿತು. ಆರಂಭದಲ್ಲಿ ಕಾಲುವೆ ಕುಸಿತ, ಬಿರುಕು, ಬಸಿ ನೀರು ಕಾಣಿಸಿಕೊಂಡಿತು.

ADVERTISEMENT

ಆರಂಭದಿಂದ 95 ಕಿ.ಮೀ ವರೆಗೆ ನೀರು ಹರಿಸಿ 1.14 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಸಲು ಭಾರಿ ಪ್ರಯಾಸ ಪಡಲಾಯಿತು. ನಂತರ 130ನೇ ಕಿ.ಮೀ ವರೆಗೆ ವಿಸ್ತರಿಸಿದರೂ 1.56ಲಕ್ಷ ಹೆಕ್ಟೇರ್ ಜಮೀನಿಗೆ ನೀರು ಹರಿಸುವ ಪ್ರಯತ್ನ ಫಲಕೊಡಲಿಲ್ಲ. 6ಸಾವಿರ ಕ್ಯೂಸೆಕ್‍ ನೀರು ಹರಿಸುವ ಕಾಲುವೆಗೆ ತಡೆಗೋಡೆಗಳನ್ನು ನಿರ್ಮಿಸಲಾಯಿತು. ಕೇವಲ 2200 ರಿಂದ 2600 ಕ್ಯೂಸೆಕ್‍ ನೀರು ಹರಿಸಲಾಯಿತು.

ಕಡಿಮೆ ಪ್ರಮಾಣದಲ್ಲಿ ನೀರು ಹರಿಸಿದರೂ ಮೇಲಿಂದ ಮೇಲೆ ಕಾಲುವೆ ಕುಸಿತ, ಕೊಚ್ಚುವ, ಬಸಿಯುವಿಕೆ ಇತರೆ ಸಮಸ್ಯೆಗಳು ಎದುರಾಧವು. ಕಾಲುವೆ ಕೊನೆ ಭಾಗದ ರೈತರಿಗೆ ನೀರು ತಲುಪಿಸಲಾಗಿಲ್ಲ. ಇದಕ್ಕಾಗಿ ನಿರಂತರವಾಗಿ ಹೋರಾಟಗಳು ನಡೆದವು. ಆರಂಭಿಕ ಸಮಸ್ಯೆಗಳನ್ನು ನಿವಾರಿಸದೇ ಸರ್ಕಾರ ಕಾಲುವೆ ಅಧುನೀಕರಣಕ್ಕೆ ಮುಂದಾಗಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ. ರೈತರಿಗೆ ಅನುಕೂಲ ಮಾಡಿಕೊವುದಕ್ಕಿಂತ ಗುತ್ತಿಗೆದಾರರು ಹಾಗೂ ರಾಜಕಾರಣಿಗೆ ಲಾಭ ತಂದುಕೊಡುವುದೇ ಇದರ ಉದ್ದೇಶವಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ.

ಸತ್ಯ ಶೋಧನಾ ಸಮಿತಿ: ರಾಜ್ಯ ಸರ್ಕಾರ ಸತ್ಯ ಶೋಧನಾ ಸಮಿತಿಯೊಂದನ್ನು ನೇಮಿಸಿ ಮರಮ್‍ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಿ ₹ 47ಕೋಟಿ ಕಡಿತಗೊಳಿಸಿದ್ದನ್ನು ಹೋರಾಟಗಾರ ಲಕ್ಷ್ಮಿಕಾಂತ ಪಾಟೀಲ ದೃಢಪಡಿಸಿದ್ದಾರೆ. ಅಂದಾಜು ವೆಚ್ಚದ ಸದನ ಸಮಿತಿ ಪರಿಶೀಲನೆ ನಡೆಸಿ ಹೋಗಿದ್ದು ವರದಿ ಬಹಿರಂಗಗೊಂಡಿಲ್ಲ. ಅಲ್ಲದೆ, ನಾಗಮೋಹನದಾಸ ನೇತೃತ್ವದ ಸಮಿತಿ ರಚಿಸಿಸಲಾಗಿದ್ದು, ಸಮಿತಿ ಈವರೆಗೆ ದೂರುದಾರರನ್ನೇ ಸಂಪರ್ಕಿಸಿಲ್ಲ.

95ನೇ ಕಿ.ಮೀ ವರೆಗೆ ಬರುವ ಮುಖ್ಯ ಕಾಲುವೆ ಮತ್ತು ವಿತರಣಾ ನಾಲೆಗಳ ಸಂಪರ್ಕ ಸೇತುವೆಗಳು, ಹಳ್ಳ, ನಾಲೆಗಳಿಗೆ ಮುಖ್ಯ ನಾಲೆ ಕೆಳಭಾಗದಲ್ಲಿ ನಿರ್ಮಿಸಿದ ಅಂಡರ್‍ ಟನಲ್‍, ಪೈಪ್‍ ಟನಲ್‍, ಅಕ್ವಾಡೆಕ್ಟ್‍ ಪಾಳು ಬಿದ್ದಿವೆ. ಅಪೂರ್ಣ ಕಾಮಗಾರಿ, ಅಲ್ಲಲ್ಲಿ ಕುಸಿತಗೊಂಡ, ಮುಳ್ಳುಕಂಟಿ ಸ್ವಚ್ಛ ಮಾಡದ ಬಗ್ಗೆ ಅಧಿಕಾರಿಗಳು ಗುತ್ತಿಗೆದಾರರಿಗೆ ಹೇಳಿ ಮಾಡಿಸಿಕೊಳ‍್ಳುವಷ್ಟು ಧೈರ್ಯ ತೋರುತ್ತಿಲ್ಲ.

ಕಾರ್ಯನಿರ್ವಾಹಕ ಎಂಜಿನಿಯರ್ ಸುರೇಂದ್ರರೆಡ್ಡಿ ಅವರನ್ನು ಸಂಪರ್ಕಿಸಿದಾಗ, ‘ನಾನು ಈಚೆಗಷ್ಟೇ ಹೊಸದಾಗಿ ಅಧಿಕಾರ ಸ್ವೀಕರಿಸಿರುವೆ. ಈ ಮೊದಲು ನಡೆದಿದ್ದರ ಬಗ್ಗೆ  ಸ್ಪಷ್ಟ ಮಾಹಿತಿಲ್ಲ. ಅಧುನೀಕರಣ ಕಾಮಗಾರಿ ಪ್ರಗತಿಯಲ್ಲಿದೆ. ಕ್ರಿಯಾಯೋಜನೆ ಆಧರಿಸಿ ಉಳಿದೆಲ್ಲ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಅಲ್ಲಲ್ಲಿ ಮುಳ್ಳುಕಂಟಿ, ಕಾಂಕ್ರಿಟ್‍ ಕುಸಿತ, ಕೊಚ್ಚಿರುವ ದೂರು ಬಂದಿದ್ದು ಪರಿಶೀಲಿಸಲಾಗುವುದು’ ಎಂದು ಹೇಳಿದರು.

ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆ ವ್ಯಾಪ್ತಿಯ 7(ಎ)ನೇ ವಿತರಣಾ ಕಾಲುವೆ ಆಧುನೀಕರಣ ಕಾಮಗಾರಿ ಪ್ರಗತಿಯಲ್ಲಿರುವಾಗಲೇ ಕೆಲವೆಡೆ ಮುಳ್ಳುಕಂಟಿ ಬೆಳೆದು ಮುಚ್ಚಿಕೊಂಡಿದೆ
ಆಧುನೀಕರಣದ ₹ 2424 ಕೋಟಿ ನೀರುಪಾಲು ನಿರ್ಮಾಣ ಹಂತದಲ್ಲಿಯೆ ಕಳಪೆ ಕಾಮಗಾರಿ ತನಿಖಾ ತಂಡಗಳ ನಿರಾಸಕ್ತಿ: ಹೆಚ್ಚಿದ ಭ್ರಷ್ಟಾಚಾರ 
ಬಲದಂಡೆ ಆಧುನೀಕರಣ ಕಾಮಗಾರಿ ಟೆಂಡರ್ ಹಂತದಿಂದ ಮುಕ್ತಾಯ ವರೆಗಿನ ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಬಗ್ಗೆ ದೂರು ಸಲ್ಲಿಸಿದರೂ ಭ್ರಷ್ಟರ ವಿರುದ್ಧ ಕ್ರಮಕೈಗೊಂಡಿಲ್ಲ.
ಎಚ್‍.ಬಿ. ಮುರಾರಿ ಹಿರಿಯ ಮುಖಂಡರು ಕಾಂಗ್ರೆಸ್‍ ಲಿಂಗಸುಗೂರು
ಬಲದಂಡೆ ಆಧುನೀಕರಣ ಕಾಮಗಾರಿ ಕುರಿತಂತೆ ಮುಖ್ಯಮಂತ್ರಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಸದನದ ಅಂದಾಜು ವೆಚ್ಚ ಸಮಿತಿಗೆ ಲಿಖಿತ ದೂರು ನೀಡಿ ಸದನದಲ್ಲಿ ಚರ್ಚಿಸಿದರೂ ರೈತರಿಗೆ ನ್ಯಾಯ ದೊರಕಿಲ್ಲ
ಡಿ.ಎಸ್‍ ಹೂಲಗೇರಿ ಮಾಜಿ ಶಾಸಕರು ಲಿಂಗಸುಗೂರು
ಭ್ರಷ್ಟಚಾರ ಅಕ್ರಮ ಕಳಪೆ ಕಾಮಗಾರಿ ಸಂಬಂಧ ಕೃಷ್ಣಾ ಮೇಲ್ದಂಡೆ ಯೋಜನೆ ಜಾಗೃತಿ ಸಮಿತಿಗೆ ದೂರು ನೀಡಿ ನಿರಂತರ ಹೋರಾಟ ನಡೆಸಲಾಗಿದ್ದು. ಇದೀಗ ತನಿಖಾ ಸಂಸ್ಥೆಗಳೇ ಸ್ಪಂದಿಸುತ್ತಿಲ್ಲ
ಆರ್. ಮಾನಸಯ್ಯ ರಾಜ್ಯಾಧ‍್ಯಕ್ಷರು ಸಿಪಿಎಎಂಎಲ್‍ ರೆಡ್‍ ಸ್ಟಾರ್‍
ಬಲದಂಡೆ ಆಧುನೀಕರಣ ಕಾಮಗಾರಿ ಟೆಂಡರ್ ಹಂತದಿಂದ ಈ ವರೆಗಿನ ದಾಖಲಾತಿ ಆಧರಿಸಿ ಎಲ್ಲ ಹಂತದಲ್ಲೂ ದೂರು ದಾಖಲಿಸಲಾಗಿದೆ. ಬ್ಲಾಸ್ಟಿಂಗ್‍ ಮರಮ್‍ ಹೆಸರಲ್ಲಿ ಕೋಟ್ಯಂತರ ಹಣ ದುರ್ಬಳಕೆ ಬಯಲಿಗೆಳೆಯಲು ದಾಖಲೆ ಇಟ್ಟುಕೊಂಡು ಹೋರಾಟ ಮುಂದುವರೆಸುವೆ
ಲಕ್ಷ್ಮಿಕಾಂತ ಪಾಟೀಲ ರಾಜ್ಯ ರೈತ ಸಂಘದ ರಾಜ್ಯ ಉಪಾಧ‍್ಯಕ್ಷ
ಟೆಂಡರ್‌ ಹಂತದಲ್ಲೇ ದೂರು
ಬಲದಂಡೆ ಮುಖ್ಯ ಕಾಲುವೆ ಮತ್ತು ವಿತರಣಾ ನಾಲೆಗಳ ಅಧುನೀಕರಣ ಕಾಮಗಾರಿಗೆ 2019ರಲ್ಲಿ ಟೆಂಡರ್ ಹಂತದಲ್ಲಿ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿತ್ತು. 2020ರಲ್ಲಿ ಮುಖ್ಯ ಕಾಲುವೆ ಆಧುನೀಕರಣಕ್ಕೆ ₹980ಕೋಟಿ ವಿತರಣಾ ಮತ್ತು ಹೊಲಗಾಲುವೆಗೆ ₹1444ಕೋಟಿ ವೆಚ್ಚದ ಕಾಮಗಾರಿಯನ್ನು ಪ್ರತ್ಯೇಕ ಗುತ್ತಿಗೆದಾರರಿಗೆ ನೀಡಲಾಯಿತು. ಆಧುನೀಕರಣದ ಕ್ರಿಯಾ ಯೋಜನೆಯಲ್ಲಿ ಬ್ಲಾಸ್ಟಿಂಗ್‍ಗೆ ₹ 99 ಕೋಟಿ 65ಲಕ್ಷ ಕ್ಯೂಬಿಕ್‍ ಮೀಟರ್ ಮರಮ್ ಗೆ ₹ 420ಕೋಟಿ ಹಣ ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ಲೋಕಾಯುಕ್ತ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೃಷ್ಣಾ ಮೇಲ್ದಂಡೆ ಯೋಜನೆಯ ಮುಖ್ಯ ಎಂಜಿನಿಯರ್‌ಗೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಕಾಂತ ಪಾಟೀಲ ದೂರು ನೀಡಿದರು. ಇಂದಿಗೂ ತನಿಖೆಗಳು ಮುಂದುವರೆದಿದೆ. ಅಂದಿನ ಶಾಸಕ ಡಿ.ಎಸ್‍ ಹೂಲಗೇರಿ ಕೃಷ್ಣಾ ಭೀಮ ಅಚ್ಚುಕಟ್ಟು ಪ್ರದೇಶದ ರೈತ ಸಂಘದ ರಾಜ್ಯ ಘಟಕ ಅಧ್ಯಕ್ಷ ಅಮರೇಶ ಅಂಬಿಗೇರ ಸಮಾಜ ಚಿಂತಕ ಶರಣಪ್ಪ ಮೇಟಿ ಸಿಪಿಐಎಂಎಲ್‍ ರೆಡ್‍ ಸ್ಟಾರ್ ರಾಜ್ಯಾಧ್ಯಕ್ಷ ಮಾನಸಯ್ಯ ಆರ್. ಸೇರಿದಂತೆ ಇತರರು ಅಂದಾಜು ವೆಚ್ಚ ಸಮಿತಿ ಲೋಕಾಯುಕ್ತ ಸರ್ಕಾರದ ಪ್ರಧಾನ ಕಾರ್ಯದರ್ಶಿ ಕೇಂದ್ರದ ನೀರಾವರಿ ಸಚಿವರು ಸೇರಿದಂತೆ ಕೃಷ್ಣಾ ಮೇಲ್ದಂಡೆ ಯೋಜನೆ ಜಾಗೃತ ದಳಕ್ಕೆ ಲಿಖಿತ ದೂರು ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.