ADVERTISEMENT

ರಾಯಚೂರು | ಮಳೆಗಾಲ ಹೊಸ್ತಿಲಿಗೆ ಬಂದರೂ ಸಿಗದ ನೀರು: ಕೊಡ ಹಿಡಿದು ನೀರಿಗಾಗಿ ಪರದಾಡ

ಚಂದ್ರಕಾಂತ ಮಸಾನಿ
Published 27 ಮೇ 2024, 4:46 IST
Last Updated 27 ಮೇ 2024, 4:46 IST
ರಾಯಚೂರಿನ ಅಶೋಕ ಡಿಪೊ ಪ್ರದೇಶದಲ್ಲಿ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗದ ಕಾರಣ ಕೈಗಾಡಿಯ ಮೇಲೆ ನೀರು ತರುತ್ತಿರುವ ತಂದೆ–ಮಗಳು
ರಾಯಚೂರಿನ ಅಶೋಕ ಡಿಪೊ ಪ್ರದೇಶದಲ್ಲಿ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗದ ಕಾರಣ ಕೈಗಾಡಿಯ ಮೇಲೆ ನೀರು ತರುತ್ತಿರುವ ತಂದೆ–ಮಗಳು   

ರಾಯಚೂರು: ಲೋಕಸಭಾ ಚುನಾವಣೆಯ ಸಿದ್ಧತೆಯಲ್ಲೇ ಮುಳುಗಿದ್ದ ಅಧಿಕಾರಿಗಳು ಚುನಾವಣೆಯ ನಂತರ ಜನರ ಸಮಸ್ಯೆಗೆ ಸ್ಪಂದಿಸಲಿದ್ದಾರೆ ಎನ್ನುವುದು ಹುಸಿಯಾಗಿದೆ. ಮಳೆಗಾಲ ಹೊಸ್ತಿಲಿಗೆ ಬಂದರೂ ನಗರ ಹಾಗೂ ಹಳ್ಳಿಗಳ ಕೆಲ ವಾರ್ಡ್‌ಗಳಲ್ಲಿ ನೀರಿಗಾಗಿ ಪರದಾಡುವುದು ತಪ್ಪಿಲ್ಲ.

ರಾಯಚೂರು ನಗರಸಭೆಯ ವಾರ್ಡ್‌–16ರ ಜನ ಈ ಬಾರಿಯ ಬೇಸಿಗೆಯಲ್ಲಿ ಹೆಚ್ಚು ಹಿಂಸೆ ಅನುಭವಿಸಿದ್ದಾರೆ. ನೀರಿಗಾಗಿ ರಾತ್ರಿ ನಿದ್ದೆಗೆಟ್ಟು ನಲ್ಲಿಯ ಮುಂದೆ ಕುಳಿತು ಆರೋಗ್ಯ ಹಾಳು ಮಾಡಿಕೊಂಡಿದ್ದಾರೆ. ಈ ವಾರ್ಡ್‌ನ ಜನರ ಕುಡಿಯುವ ನೀರಿನ ಸಮಸ್ಯೆ ಈಗಲೂ ಬಗೆಹರಿದಿಲ್ಲ.

ಮೂರು ತಿಂಗಳು ಕುಡಿಯುವ ನೀರಿನ ಗಂಭೀರ ಸಮಸ್ಯೆ ಎದುರಿಸಿ ಸಹನೆ ಕಳೆದುಕೊಂಡ ಮಹಿಳೆಯರು ಅಧಿಕಾರಿಯ ಮನೆ ಮುಂದೆ ಕುಳಿತು ಪ್ರತಿಭಟನೆ ನಡೆಸಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಪ್ರತಿಭಟನೆ ನಡೆಸಿದವರ ವಿರುದ್ಧವೇ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೂರು ತಿಂಗಳಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುತ್ತ ಇದ್ದರೂ ಸ್ಪಂದಿಸದ ನಗರಸಭೆ ಹಾಗೂ ಜಿಲ್ಲಾಡಳಿತವು ಪ್ರತಿಭಟನೆ ನಡೆಸುವ ಮಾಹಿತಿ ನೀಡಿಲ್ಲ ಎನ್ನುವ ಒಂದೇ ಕಾರಣಕ್ಕೆ ಪ್ರಕರಣ ದಾಖಲಿಸಿಕೊಂಡು ಪೊಲೀಸ್‌ ಠಾಣೆಗೆ ಅಲೆದಾಡುವಂತೆ ಮಾಡಿದ್ದಾರೆ.

ADVERTISEMENT

ಅಶೋಕ ಡಿಪೊ ಪ್ರದೇಶದಲ್ಲೂ ಸರಿಯಾಗಿ ನೀರು ಬರುತ್ತಿಲ್ಲ. ಇಲ್ಲಿಯ ಜನರು ಕೈಗಾಡಿ, ಸೈಕಲ್‌ ಹಾಗೂ ಬೈಕ್‌ಗಳ ಮೇಲೆ ಕೊಡ ಇಟ್ಟುಕೊಂಡು ನೀರು ಇರುವ ಕಡೆಗೆ ಹೋಗಿ ತುಂಬಿಕೊಂಡು ಮನೆಗಳಿಗೆ ಬರುತ್ತಿದ್ದಾರೆ. ಮಹಿಳೆಯರು, ಮಕ್ಕಳಿಗೆ ಬೆಳಿಗ್ಗೆ ಎದ್ದು ನೀರು ತರುವುದೇ ಒಂದು ಕೆಲಸವಾಗಿದೆ.

ಕಂದಾಯ ಸಚಿವ ಕೃಷ್ಣಬೈರೇಗೌಡ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುವ ಮೊದಲೇ ಮುನ್ನೆಚ್ಚರಿಕೆ ವಹಿಸಬೇಕು. ಜನರಿಗೆ ಕುಡಿಯುವ ನೀರು ಪೂರೈಸಬೇಕು ಎಂದು ಸೂಚನೆ ನೀಡಿದ್ದರು. ಆದರೆ, ಜಿಲ್ಲೆಯ ಅಧಿಕಾರಿಗಳು ಸಚಿವರ ಮಾತಿಗೂ ಬೆಲೆ ಕೊಟ್ಟಿಲ್ಲ.

‘ನೀರಿನ ಸಮಸ್ಯೆ ಗಂಭೀರವಾದರೆ ಟ್ಯಾಂಕರ್‌ ಮೂಲಕ ನೀರು ಕೊಡುವುದಾಗಿ ಭರವಸೆ ನೀಡಿದ್ದ ಜಿಲ್ಲಾಡಳಿತ ನುಡಿದಂತೆ ನಡೆದುಕೊಳ್ಳಲೇ ಇಲ್ಲ. ಹೀಗಾಗಿ ಜನರಿಗೆ ಆಡಳಿತ ವರ್ಗದ ಮೇಲಿನ ಭರವಸೆಯೇ ಹೊರಟು ಹೋಗಿದೆ’ ಎಂದು ಅಶೋಕ ಡಿಪೊದ ನಿವಾಸಿ ಮಹಮ್ಮದ್‌ ಗಫೂರ್‌ ಬೇಸರ ವ್ಯಕ್ತಪಡಿಸುತ್ತಾರೆ.

ರಾಯಚೂರು ತಾಲ್ಲೂಕಿನ ಶಕ್ತಿನಗರ ಸಮೀಪದ ಶಾಖವಾದಿ ಗ್ರಾಮದ ಜನ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಪಕ್ಕದ ಹಳ್ಳಿಗಳಿಗೆ ಬೈಕ್‌ಗಳಲ್ಲಿ ತೆರಳಿ ನೀರು ತರುವ ಪರಿಸ್ಥಿತಿ ಎದುರಾಗಿದೆ.

ಮೂರು ತಿಂಗಳಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ನಿತ್ಯದ ಕೆಲಸಗಳನ್ನು ಬಿಟ್ಟು ಸೈಕಲ್‌, ಬೈಕ್‌, ಕಾರುಗಳಲ್ಲಿ ತೆರಳಿ ನೀರು ತರಬೇಕಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ನೀರಿನ ಸಮಸ್ಯೆ ಪರಿಹರಿಸುವಲ್ಲಿ ಶಾಖವಾದಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ವಿಫಲವಾಗಿದ್ದಾರೆ. ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಪ್ರಯೋಜವಾಗಿಲ್ಲ. ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರಾದ ಮಲ್ಲೇಶ ಹಾಗೂ ಮೈಲಾರಿ ದೂರಿದರು.

ನಾಲ್ಕು ದಿನಕ್ಕೊಮ್ನೆ ಕುಡಿಯುವ ನೀರು ಪೂರೈಕೆ

ಮಾನ್ವಿ: ಪಟ್ಟಣದಲ್ಲಿ ಪುರಸಭೆ ವತಿಯಿಂದ ನಾಲ್ಕು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಬೇಸಿಗೆ ಆರಂಭಕ್ಕೂ ಮೊದಲು ತುಂಗಭದ್ರಾ ಎಡದಂಡೆ ನಾಲೆಯ ಕಾಲುವೆ ಮೂಲಕ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ರಬ್ಬಣಕಲ್ ಕೆರೆ ಭರ್ತಿ ಮಾಡುವಲ್ಲಿ ಪುರಸಭೆಯ ಅಧಿಕಾರಿಗಳು ವಿಫಲರಾಗಿದ್ದಾರೆ.

ಮಳೆ ಕೊರತೆಯಿಂದ ಕಾತರಕಿ ಗ್ರಾಮದ ಸಮೀಪ ಹರಿಯುವ ತುಂಗಭದ್ರಾ ನದಿ ಬತ್ತಿರುವ ಕಾರಣ ಅಲ್ಲಿನ ಜಾಕ್‌ವೆಲ್ ಬಳಿ ಇರುವ ಕೊಳವೆಬಾವಿಗಳಲ್ಲಿಯೂ ನೀರು ಇಲ್ಲ. ಪಟ್ಟಣದ ಹಲವು ವಾರ್ಡ್‌ಗಳಲ್ಲಿ ಪೈಪ್‌ಲೈನ್ ದುರಸ್ತಿಯ ಅಗತ್ಯ ಇದೆ. ಕಾರಣ ಪಟ್ಟಣದಲ್ಲಿ ಕುಡಿಯುವ ನೀರಿನ ಅಸಮರ್ಪಕ ಪೂರೈಕೆಯೇ ಶಾಶ್ವತ ಸಮಸ್ಯೆಯಾಗಿದೆ.

ಈಚೆಗೆ ಪೈಪ್‌ಲೈನ್ ದುರಸ್ತಿ ಕಾರಣ ಕುಡಿಯುವ ನೀರಿನ ಪೂರೈಕೆ ಸ್ಥಗಿತಗೊಳಿಸಲಾಗಿತ್ತು. ಕಾರಣ ಪಟ್ಟಣದ 14ನೇ ವಾರ್ಡ್‌ನಲ್ಲಿ ಪುರಸಭೆ ಸದಸ್ಯೆ ವನಿತಾ ಶಿವರಾಜ ನಾಯಕ ತಮ್ಮ ಸ್ವಂತ ಖರ್ಚಿನಲ್ಲಿ ಖಾಸಗಿ ಟ್ಯಾಂಕರ್ ಮೂಲಕ ವಾರ್ಡಿನ ಜನರಿಗೆ ಕುಡಿಯುವ ನೀರು ಪೂರೈಸಿದ್ದಾರೆ.

ಪ್ರತಿ ಬೇಸಿಗೆಯಲ್ಲೂ ನೀರಿನ ಸಮಸ್ಯೆ

ದೇವದುರ್ಗ: ತಾಲ್ಲೂಕಿನ ಚಿಕ್ಕಬೂದುರು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.

ನೆರೆಯ ಯಾಟಗಲ್ ಗ್ರಾಮದಲ್ಲಿ ನಿರ್ಮಿಸಿದ ಟ್ಯಾಂಕ್ ಮೂಲಕ ಗ್ರಾಮಕ್ಕೆ ನಿತ್ಯ ನೀರು ಸರಬರಾಜು ಮಾಡಲಾಗುತ್ತದೆ. 20 ದಿನಗಳಿಂದ ಮಳೆ, ಗಾಳಿ ಹಿನ್ನೆಲೆ ವಿದ್ಯುತ್ ಸಂಪರ್ಕ ಕಡಿತಗೊಂಡು ಸರಿಯಾಗಿ ನೀರು ಸರಬರಾಜು ಆಗುತ್ತಿಲ್ಲ. ಮೋಟಾರ್‌ ಕೆಟ್ಟು ಹೋಗಿದ್ದು, ಈ ಸಂದರ್ಭದಲ್ಲಿ ಜನರು ನರಕ ಯಾತನೆ ಅನುಭವಿಸುತ್ತಾರೆ.

ಗ್ರಾಮದಲ್ಲಿ 500 ಅಡಿ ಆಳದಲ್ಲಿ ಕೊಳವೆಬಾವಿ ಕೊರೆಸಿದರೂ ನೀರು ಕುಡಿಯಲು ಯೋಗ್ಯವಿಲ್ಲ. ಹೀಗಾಗಿ ತೋಟದ ಬಾವಿಯಿಂದ ನೀರು ತರುತ್ತಿದ್ದಾರೆ. ಸೈಕಲ್‌, ಬೈಕ್‌ಗಳ ಮೇಲೆ ನೀರು ಹೊತ್ತು ತರುವುದು ಅನಿವಾರ್ಯವಾಗಿದೆ.

‘ಗ್ರಾಮ ಪಂಚಾಯಿತಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಯೋಜನೆ ರೂಪಿಸಬೇಕು. ಪ್ರತಿ ವರ್ಷ ತಾತ್ಕಾಲಿಕ ಪರಿಹಾರ ಮಾಡುತ್ತಿದ್ದು ಜನರಿಗೆ ಪ್ರತಿ ವರ್ಷ ಬೇಸಿಗೆಯಲ್ಲಿ ತೀವ್ರ ತೊಂದರೆ ಆಗುತ್ತಿದೆ‘ ಎಂದು ಚಿಕ್ಕಬೂದುರು ನಿವಾಸಿ ಮಹಾದೇವಪ್ಪ ಗೌಡ ಪಾಟೀಲ ಹೇಳುತ್ತಾರೆ.

ಸಹಕಾರ: ಬಸವರಾಜ ಭೋಗಾವತಿ, ಮಂಜುನಾಥ ಎನ್ ಬಳ್ಳಾರಿ, ಪಿ.ಕೃಷ್ಣಾ ಸಿರವಾರ, ಯಮನೇಶ ಗೌಡಗೇರಾ, ಉಮಾಪತಿ ರಾಮೋಜಿ, ಡಿ.ಎಚ್‌.ಕಂಬಳಿ

ಮಾನ್ವಿ ಪಟ್ಣಣದ 14ನೇ ವಾರ್ಡ್‌ನಲ್ಲಿ ಈಚೆಗೆ ಪುರಸಭೆ ಸದಸ್ಯೆ ವನಿತಾ ಶಿವರಾಜ ನಾಯಕ ತಮ್ಮ ಸ್ವಂತ ಖರ್ಚಿನಲ್ಲಿ ಖಾಸಗಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಿದರು
ಕವಿತಾಳದಲ್ಲಿ ಸಾರ್ವಜನಿಕರು ನೀರಿಗಾಗಿ ಪರದಾಡುತ್ತಿರುವುದು
ದೇವದುರ್ಗ ತಾಲ್ಲೂಕಿನ ಚಿಕ್ಕಬೂದುರು ಗ್ರಾಮದಲ್ಲಿ ಟ್ಯಾಂಕ್‌ನಿಂದ ನೀರು ತುಂಬಿಕೊಳ್ಳುತ್ತಿರುವ ಗ್ರಾಮಸ್ಥರು
ಸಿರವಾರ ತಾಲ್ಲೂಕಿನ ಅತ್ತನೂರು ಗ್ರಾಮದ ಹೊರವಲಯದಲ್ಲಿರುವ ಜಲಕುಂಭದಿಂದ ನೀರು ಒಯ್ಯುತ್ತಿರುವ ಗ್ರಾಮಸ್ಥರು

ತಿಂಗಳಿಗೆ ಮೂರೇ ದಿನ ನೀರು

ಸಿಂಧನೂರು: ತುರ್ವಿಹಾಳ ಬಳಿ ಇರುವ ಕುಡಿಯುವ ನೀರಿನ ಕೆರೆ ಬತ್ತಿದೆ. ಸಿಂಧನೂರು ನಗರದ ಕೆರೆಯಲ್ಲಿಯೂ ಎರಡು ಅಥವಾ ಮೂರು ಬಾರಿ ನೀರು ಪೂರೈಕೆ ಮಾಡುವಷ್ಟು ಮಾತ್ರ ನೀರಿದೆ. ನಗರಕ್ಕೆ ಈಗಾಗಲೇ 10 ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಶಾಸಕ ಹಂಪನಗೌಡ ಬಾದರ್ಲಿ ಮತ್ತು ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರ ಅವರು ಖಾಸಗಿ ಕೆರೆಗಳಿಂದ ನೀರು ಪಡೆದು ನಗರಕ್ಕೆ ನೀರು ಪೂರೈಸುವ ಕುರಿತು ಚಿಂತನೆ ನಡೆಸಿದ್ದಾರೆ. ತಿಂಗಳಲ್ಲಿ ಮೂರೇ ದಿನ ಬಿಡುವ ನೀರು ಸಹ ನಿಂತು ಹೋಗಲಿದೆ ಎನ್ನುವ ಆತಂಕ ಸಾರ್ವಜನಿಕರಲ್ಲಿ ಶುರುವಾಗಿದೆ.

ಕುಡಿಯುವ ನೀರಿಗೆ ತಪ್ಪದ ಅಲೆದಾಟ

ಸಿರವಾರ: ರಾಯಚೂರು ಮುಖ್ಯ ರಸ್ತೆಯಲ್ಲಿರುವ ಅತ್ತನೂರು ಗ್ರಾಮದಲ್ಲಿ ಕುಡಿಯುವ ನೀರಿಗೆ ಅಲೆದಾಡುವುದು ತಪ್ಪಿಲ್ಲ. ಗ್ರಾಮದಿಂದ ಒಂದು ಕಿ.ಮೀ ದೂರವಿರುವ ಕೆರೆಯ ನೀರೆ ಆಸರೆಯಾಗಿದೆ. ಪ್ರತಿದಿನ ಬೆಳಿಗ್ಗೆ ನೀರಿಗಾಗಿ ಸೈಕಲ್ ಬಂಡಿ ದ್ವಿಚಕ್ರ ವಾಹನಗಳ ಮೂಲಕ ತರಬೇಕಾದ ಅನಿವಾರ್ಯತೆ ಇದೆ. ಬಳಕೆ ನೀರಿಗಾಗಿ ಪೈಪ್‌ಲೈನ್ ವ್ಯವಸ್ಥೆ ಇದ್ದರೂ ಸಮಯಕ್ಕೆ ನೀರು ಬಾರದ ಕಾರಣ ಕೆರೆಯಿಂದ ತಂದ ನೀರನ್ನು ಬಳಕೆ ಮಾಡಬೇಕಾಗಿದೆ. ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಯು ಗ್ರಾಮದ ದಶಕಗಳ ಕನಸಾಗಿದ್ದರೂ ಅಧಿಕಾರಿಗಳ ಮತ್ತು ಜನ ಪ್ರತಿನಿಧಿಗಳು ಸರಿಯಾಗಿ ಕ್ರಮ ಕೈಗೊಳ್ಳದ ಕಾರಣ ಗ್ರಾಮಸ್ಥರ ಸಂಕಷ್ಟ ನಿವಾರಣೆಯಾಗಿಲ್ಲ. ‘ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಬೀಗ ಹಾಕಲಾಗಿದೆ. ಉಳ್ಳವರು ದೂರದ ಸಿರವಾರ ಗಣದಿನ್ನಿ ನೀಲಗಲ್ ಕ್ಯಾಂಪ್‌ನಿಂದ ದ್ವಿ ಚಕ್ರ ವಾಹನಗಳ ಮೂಲಕ ಕುಡಿಯುವ ನೀರು ಹೊತ್ತು ತರುತ್ತಿದ್ದಾರೆ’ ಎಂದು ಗ್ರಾಮದ ನಿವಾಸಿ ಹನುಮಂತ ಅತ್ತನೂರು ಹೇಳುತ್ತಾರೆ.

ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ

ಕವಿತಾಳ: ತುಂಗಭದ್ರ ಎಡದಂಡೆ ಕಾಲುವೆಯಿಂದ ಪಟ್ಟಣದ 16 ವಾರ್ಡ್ ಗಳಿಗೆ ಕುಡಿಯುವ ನೀರು ಪೂರೈಸುವ ಲಕ್ಷ್ಮೀ ನಾರಾಯಣ ಕ್ಯಾಂಪ್ ಹತ್ತಿರದ ಅಂದಾಜು 267850 ಕ್ಯೂ.ಮೀ ನೀರು ಸಂಗ್ರಹ ಸಾಮರ್ಥ್ಯದ ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿದೆ. ಕೆರೆಯಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಕಳೆದ ಒಂದು ತಿಂಗಳಿಂದ ಐದು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡುತ್ತಿದ್ದಾರೆ.

ಕುಡಿಯುವ ನೀರಿಗಾಗಿ ಕೆರೆ ಭರ್ತಿ ಮಾಡಲು ಕಾಲುವೆಗೆ ನೀರು ಹರಿಸಿದಾಗ ಹೆಚ್ಚಿನ ಪ್ರಮಾಣದ ನೀರು ಭರ್ತಿಗೆ ಅಧಿಕಾರಿಗಳು ಕಾಳಜಿ ವಹಿಸಿಲ್ಲ ಹೀಗಾಗಿ ಮುಂದಿನ ದಿನಗಳಲ್ಲಿ ನೀರಿನ ಕೊರತೆ ಮತ್ತಷ್ಟು ಹೆಚ್ಚಲಿದೆ ಎಂದು ಸುರೇಶ ಗಂಗಾನಗರ ಕ್ಯಾಂಪ್ ದೂರಿದರು. ‘ಐದು ದಿನಗಳಿಗೊಮ್ಮೆ ನೀರು ಪೂರೈಸುವುದರಿಂದ ನೀರಿಗಾಗಿ ಪರದಾಡುವ ಪರಿಸ್ಥಿತಿ ಇದೆ ಕೆಲವರಿಗೆ ನೀರು ಸಿಗುತ್ತಿಲ್ಲ ಜನ ಜಾನುವಾರುಗಳಿಗೆ ನೀರು ಸಾಕಾಗುತ್ತಿಲ್ಲ. ಕೆರೆಯಲ್ಲಿನ ನೀರಿನ ಪ್ರಮಾಣ ಗಮನಿಸಿದರೆ ಇನ್ನೂ 20 ದಿನಗಳ ವರೆಗೆ ನೀರು ಪೂರೈಸಬಹುದು ಕೆಲವು ವಾರ್ಡ್ ಗಳಿಗೆ ಕೊಳವೆಬಾವಿ ನೀರು ಪೂರೈಸುತ್ತಿದ್ದು ಎನ್.ಎಸ್.ಬೋಸರಾಜು ಕಾಲೊನಿಯಲ್ಲಿನ ಕೊಳವೆಬಾವಿ ಕೆಟ್ಟು ಒಂದು ತಿಂಗಳು ಕಳೆದರೂ ಅದನ್ನು ದುರಸ್ತಿ ಮಾಡುವ ಬಗ್ಗೆ ಅಧಿಕಾರಿಗಳು ಕಾಳಜಿ ತೋರುತ್ತಿಲ್ಲʼ ಎಂದು ಪಟ್ಟಣ ಪಂಚಾಯಿತಿ ಸದಸ್ಯ ರಮೇಶ ನಗನೂರು ಹೇಳಿದರು.

‘ಕೆರೆಯಲ್ಲಿ ಒಂದು ತಿಂಗಳಿಗೆ ಸಾಕಾಗುವಷ್ಟು ನೀರು ಸಂಗ್ರಹವಿದೆ. ಕಾಲುವೆಗೆ ನೀರು ಬಿಟ್ಟರೆ ಅದನ್ನೇ ಕುಡಿಯಲು ಬಳಸಲಾಗುವುದುʼ ಎಂದು ಮುಖ್ಯಾಧಿಕಾರಿ ಕೆ.ದುರುಗಣ್ಣ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.