ರಾಯಚೂರು: 2019ರ ಏಪ್ರಿಲ್ 1 ಕ್ಕೂ ಮುನ್ನ ನೋಂದಣಿಯಾದ ವಾಹನಗಳಿಗೆ ಕಡ್ಡಾಯವಾಗಿ ಎಚ್‌ಎಸ್‌ಆರ್‌ಪಿ (ಹೈ ಸೆಕ್ಯುರಿಟಿ ರಜಿಸ್ಟೇಷನ್ ಪ್ಲೇಟ್ಸ್) ಅಳವಡಿಸಿಕೊಳ್ಳುವಂತೆ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಆದೇಶ ಹೊರಡಿಸಿದರೂ ರಾಯಚೂರಿನ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಜನರಿಗೆ ಮಾಹಿತಿ ತಲುಪಿಸುವಲ್ಲಿ ಹಿಂದೆ ಬಿದ್ದಿದ್ದಾರೆ.
ವಾಹನಗಳ ಮಾಲೀಕರು ತಮ್ಮ ವಾಹನಗಳಿಗೆ ನವೆಂಬರ್ 17ರೊಳಗೆ ಹೊಸ ನಂಬರ್ ಪ್ಲೇಟ್ ಅಳವಡಿಸುವಂತೆ ಒಂದು ಚಿಕ್ಕ ಪ್ರೆಸ್ ನೋಟ್ ಕೊಟ್ಟಿರುವುದನ್ನು ಬಿಟ್ಟರೆ ಶೋರೂಂಗಳಿಗೆ ಹಾಗೂ ವಾಹನ ಮಾಲೀಕರಿಗೆ ಸರಿಯಾದ ಮಾಹಿತಿ ಕೊಡುತ್ತಿಲ್ಲ. ಆರ್‌ಟಿಒ ಕಚೇರಿ ಸಿಬ್ಬಂದಿ ಜನರಿಗೆ ಸರಿಯಾದ ಮಾಹಿತಿ ಕೊಡದೇ ಜನ ಗೊಂದಲಕ್ಕೆ ಸಿಲುಕುವಂತೆ ಮಾಡಿದ್ದಾರೆ.
ಪ್ರಾದೇಶಿಕ ಸಾರಿಗೆ ಅಧಿಕಾರಿಯನ್ನು ಕೇಳಿದರೆ ಅವರು ಕೆಳ ಹಂತದ ಅಧಿಕಾರಿಯನ್ನು ವಿಚಾರಿಸಿ ಎಂದು ಸಲಹೆ ನೀಡುತ್ತಿದ್ದಾರೆ. ಕಚೇರಿ ಸಿಬ್ಬಂದಿ ನೀವು ಕಚೇರಿಗೆ ಬಂದು ಲಿಖಿತ ಅರ್ಜಿ ಕೊಡಿ ಎಂದು ವಾಹನ ಮಾಲೀಕರಿಗೆ ಹೇಳಿ ಕಳಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಜನರಿಗೆ ಎಲ್ಲಿ ಹೋಗಬೇಕು ಏನು ಮಾಡಬೇಕು ಎನ್ನುವುದು ಸರಿಯಾಗಿ ಅರ್ಥವಾಗದೆ ಸಮಸ್ಯೆ ಎದುರಿಸತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಜಿಲ್ಲೆಯಲ್ಲಿ ಹಳೆಯ ವಾಹನಗಳ ಎಚ್‌ಎಸ್‌ಆರ್‌ಪಿ ನೋಂದಣಿ ಸಂಖ್ಯೆ ನೂರು ದಾಟಿಲ್ಲ.
ಜಿಲ್ಲೆಯ ಗಡಿಯಲ್ಲಿರುವ ನೆರೆ ರಾಜ್ಯಗಳಲ್ಲಿ ಹಳೆಯ ವಾಹನ ಹೊಂದಿದವರು ಹಾಗೂ ಹಳೆಯ ವಾಹನ ಖರೀದಿಸಿದವರು ಹೆಚ್ಚು ಗೊಂದಲಕ್ಕೆ ಸಿಲುಕಿದ್ದಾರೆ. ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಶೋರೂಂಗಳ ಮಾಲೀಕರು ಹಾಗೂ ಸಿಬ್ಬಂದಿಗೂ ಮಾರ್ಗದರ್ಶನ ನೀಡಿಲ್ಲ. ಕ್ಲಿಷ್ಟಕರ ಸಮಸ್ಯೆಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎನ್ನುವ ಬಗ್ಗೆ ತಿಳಿವಳಿಕೆಯನ್ನೂ ಕೊಡುತ್ತಿಲ್ಲ.
‘ಹೊಸ ನಂಬರ್ ಪ್ಲೇಟ್ ಕೊಡುವುದು ನಮ್ಮ ಕೆಲಸವಲ್ಲ. ಎಚ್‌ಎಸ್‌ಆರ್‌ಪಿ ಪ್ಲೇಟ್‌ಗಳನ್ನು ಶೋರೂಂಗಳೇ ಕೊಡಬೇಕು. ಸರ್ಕಾರದ ಆದೇಶ ವಾಹನ ಮಾಲೀಕರಿಗೆ ತಲುಪಿಸುವುದೊಂದೇ ನಮ್ಮ ಕೆಲಸ’ ಎಂದು ಪ್ರಾದೇಶಿಕ ಸಾರಿಗೆ ಕಚೇರಿಯ ಅಧಿಕಾರಿ ವಿನಯಾ ಹೇಳುತ್ತಾರೆ.
ರಾಜ್ಯದಲ್ಲಿ 2019ರ ಏಪ್ರಿಲ್ 1 ಕ್ಕೂ ಮುನ್ನ ನೋಂದಣಿಯಾದ ವಾಹನಗಳಿಗೆ ನವೆಂಬರ್ 17ರೊಳಗೆ ಎಚ್‌ಎಸ್‌ಆರ್‌ಪಿ ಅಳವಡಿಸದಿದ್ದರೆ ವಾಹನ ಮಾಲೀಕರು ₹ 500ರಿಂದ ₹ 1 ಸಾವಿರ ದಂಡ ಪಾವತಿಸುವುದು ಅನಿವಾರ್ಯವಾಗಲಿದೆ. ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಪೊಲೀಸರ ಮೇಲೆ ಕೆಲಸ ಹೊರೆ ಹೆಚ್ಚಾಗಲಿದೆ. ತಿಂಗಳ ನಂತರ ವಾಹನಗಳ ಪರಿಶೀಲನೆ ನಡೆಸಿ ದಂಡ ವಿಧಿಸುವ ಕಾರ್ಯ ಆರಂಭವಾದರೂ ಅಚ್ಚರಿ ಇಲ್ಲ.
ಜೆಸಿಬಿ, ಟ್ರ್ಯಾಕ್ಟರ್ ಹಾಗೂ ಲಾರಿ ಮಾಲೀಕರು ಎಲ್ಲಿ ನೋಂದಣಿ ಮಾಡಿಸಬೇಕು ಎನ್ನುವ ಬಗ್ಗೆ ಸ್ಪಷ್ಟತೆಯೇ ಇಲ್ಲ. ಭಾರಿ ವಾಹನಗಳನ್ನು ಹೈದರಾಬಾದ್‌ನಲ್ಲಿ ಖರೀದಿಸಿ ತರಲಾಗಿದೆ. ಆನ್‌ಲೈನ್‌ನಲ್ಲಿ ನಕಲಿ ವೆಬ್‌ಸೈಟ್ ತೆರೆದುಕೊಂಡಿವೆ. ಸರ್ಕಾರದ ವೆಬ್‌ಸೈಟ್‌ಗಳು ಸರಿಯಾಗಿ ತೆರೆದುಕೊಳ್ಳುತ್ತಿಲ್ಲ. ಮಾಹಿತಿ ತುಂಬಿದರೂ ಅವು ಸೇವ್ ಆಗುತ್ತಿಲ್ಲ. ತಾಂತ್ರಿಕ ಸಮಸ್ಯೆಗೆ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಹೀಗಾಗಿ ವಾಹನ ಮಾಲೀಕರಲ್ಲಿ ಆತಂಕ ಹೆಚ್ಚಾಗಿದೆ.
ನೆರೆಯ ಆಂಧ್ರಪದೇಶ, ತೆಲಂಗಾಣ, ಮಹಾರಾಷ್ಟ್ರದಲ್ಲಿ 2019ಕ್ಕಿಂತ ಮೊದಲು ನೋಂದಣಿಯಾದ ಅನೇಕ ವಾಹನಗಳಿವೆ. ಒಂದೊಂದು ಶೋರೂಂಗಳು ಗರಿಷ್ಠ 30ರಿಂದ 50 ಸಾವಿರ ವಾಹನ ಮಾರಾಟ ಮಾಡಿದ ದಾಖಲೆಗಳೂ ಇವೆ. ಆದರೆ ಈಗ ಜನ ನೋಂದಣಿಗೆ ಬರುತ್ತಿಲ್ಲ. ಆಯಾ ಕಂಪನಿಗಳ ವಾಹನಗಳನ್ನು ಆ ಕಂಪನಿಯ ಶೋರೂಂಗಳಲ್ಲೇ ನೋಂದಣಿ ಮಾಡಿ ಹೊಸ ನಂಬರ್ ಪ್ಲೇಟ್ ಅಳವಡಿಸಬೇಕು ಎನ್ನುವ ನಿಯಮ ರೂಪಿಸಲಾಗಿದೆ. ಬೇರೆ ಕಂಪನಿಯ ವಾಹನಗಳು ನೋಂದಣಿಯಾಗುತ್ತಿಲ್ಲ.
ಮುನಿರ್ ಸುಜಕಿ ಅರೇನಾ, ಶಹಾ ಹುಂಡೈ, ಮಹೀಂದ್ರಾ ಶಾ ಮೋಟರ್ಸ್‌ಗೆ ಒಂದೇ ಒಂದು ಅರ್ಜಿ ಬಂದಿಲ್ಲ. ಎಚ್‌ಎಸ್‌ಆರ್‌ಪಿ ಪ್ಲೇಟಗಳೂ ಬಂದಿಲ್ಲ. ಎಚ್‌ಎಸ್‌ಆರ್‌ಪಿ ಪಡೆಯಲು ಹಳೆಯ ವಾಹನ ಮಾಲೀಕರು ಅರ್ಜಿ ಸಲ್ಲಿಸಿದರೂ ಅವು ಸರಿಯದ ಸ್ಥಳಕ್ಕೆ ತಲುಪುತ್ತಿಲ್ಲ. ಮುಖ್ಯ ಡೀಲರ್‌ಗಳ ಶೋರೂಂಗಳು ಬಳ್ಳಾರಿ, ಕಲಬುರಗಿಯಲ್ಲಿ ಇವೆ. ಇಲ್ಲಿಯ ಶೋರಗಳ ಹೆಸರು ದಾಖಲಿಸಿದರೂ ಮೂಲಶೋ ರೂಮ್‌ಗಳಿಗೆ ಪ್ಲೇಟ್‌ಗಳು ಡಿಲೇವರಿ ಆಗುತ್ತಿವೆ.
‘ರಾಯಚೂರು ಆರ್‌ಟಿಒ ಕಚೇರಿಯಿಂದ ನಮಗೆ ಯಾವುದೇ ಮಾಹಿತಿ ಅಥವಾ ಪ್ರಕಟಣೆ ಬಂದಿಲ್ಲ. ತೆರಿಗೆ ಕಡಿಮೆ ಇದ್ದ ಕಾರಣ ಹಿಂದೆ ಗ್ರಾಹಕರು ನೆರೆಯ ತೆಲಂಗಾಣದಲ್ಲಿ ಅತಿ ಹೆಚ್ಚು ವಾಹನಗಳನ್ನು ಖರೀದಿಸಿದ್ದಾರೆ. ಅಂಥವರು ರಾಯಚೂರಲ್ಲಿ ವಾಸವಾಗಿದ್ದರೂ ಹೊಸ ನಂಬರ್ ಪ್ಲೇಟ್ ಪಡೆಯುವುದು ಹೇಗೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ‘ ಎಂದು ಮುನಿರ್ ಸುಜಕಿ ಅರೇನಾದ ಸಿಬ್ಬಂದಿ ಅನುರಾಧಾ ಹಾಗೂ ಶಹಾ ಹುಂಡೈನ ಶೇಖ ಸರ್ವರ್ ಅವರು ತಾಂತ್ರಿಕ ಸಮಸ್ಯೆ ವಿವರಿಸಿದರು.
ನಗರದಲ್ಲಿ ಸಬ್ ಡೀಲರ್ ಶೋರೂಂಗಳಿವೆ. ಇಲ್ಲಿಯ ಶೋರೂಂ ಉಲ್ಲೇಖಿಸಿ ಬುಕ್ ಮಾಡಿದರೂ ಮೂಲ ಡೀಲರ್‌ನ ಶೂರೂಮ್‌ಗಳಿಗೆ ನಂಬರ್ ಪ್ಲೇಟ್ ಹೋಗುತ್ತಿವೆ. ಅವುಗಳ ಜತೆಯಲ್ಲಿ ಹೆಸರು, ಮೊಬೈಲ್ ನಂಬರ್ ಯಾವುದೂ ಇಲ್ಲ. ಮಾಲೀಕರನ್ನು ಹುಡುಕುವುದು ಶೋರೂಗಳಿಗೂ ಕಷ್ಟವಾಗುತ್ತಿದೆ. ಗ್ರಾಹಕರು ಶೋರೂಂಗೆ ಬಂದು ಅರ್ಜಿ ಸಲ್ಲಿಕೆಯ ಪ್ರತಿ ತೋರಿಸಿದ ಮೇಲೆಯೇ ಸ್ಪಷ್ಟವಾಗುತ್ತಿದೆ.
‘ವಾಹನಗಳು ಆರ್‌ಟಿಒ ಕಚೇರಿಗಳಲ್ಲೇ ನೋಂದಣಿಯಾಗಿವೆ. ಎಚ್‌ಎಸ್‌ಆರ್‌ಪಿ ನೋಂದಣಿಗೆ ಮತ್ತೆ ಮೂಲ ಕಂಪನಿಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಅವೈಜ್ಞಾನಿಕವಾಗಿದೆ. ಗಡಿ ಹಾಗೂ ಗ್ರಾಮೀಣ ಪ್ರದೇಶದ ಜನ ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಪ್ರಾದೇಶಿಕ ಸಾರಿಗೆ ಇಲಾಖೆಯೇ ಇದಕ್ಕೆ ಪರಿಹಾರ ಒದಗಿಸಬೇಕು’ ಎಂದು ಶ್ರೀವೆಂಕಟೇಶ್ವರ ಹಿರೊದ ವ್ಯವಸ್ಥಾಪಕ ನಿರ್ದೇಶಕ ಬೆಲ್ಲಮ್ ಜೈಪಾಲ ಹೇಳುತ್ತಾರೆ.
ಎಚ್‌ಎಸ್ ಆರ್‌ಪಿ ನೋಂದಣಿ ಫಲಕ ಕಡ್ಡಾಯ
ಹಳೆ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಫಲಕ ಕಡ್ಡಾಯ. ಸರ್ಕಾರ ನಿಗದಿಪಡಿಸಿದ ಶುಲ್ಕಕ್ಕೂ, ನೋಂದಣಿ ಅವಧಿಯಲ್ಲಿ ಆನ್‌ಲೈನ್‌ನಲ್ಲಿ ಸಂಗ್ರಹವಾಗುತ್ತಿರುವ ಶುಲ್ಕ ತಾಳೆಯಾಗುತ್ತಿಲ್ಲ. ದ್ವಿಚಕ್ರವಾಹನಕ್ಕೆ 503 ಕಟ್ಟಿದರೆ ಮಾತ್ರ ಸ್ವೀಕರಿಸುತ್ತಿದೆ.
ರಾಯಚೂರಿಗೆ ಈ ಮೊದಲು ದಾವಣಗೆರೆಯಿಂದ ಎಚ್‌ಎಸ್‌ಆರ್‌ಪಿ ಪ್ಲೇಟ್‌ಗಳು ಬರುತ್ತಿದ್ದವು. ಇದೀಗ ರಾಯಚೂರನಲ್ಲಿ ಪ್ಲೇಟ್ ಸಿದ್ಧಪಡಿಸಲು ಅನುಮತಿ ಕೊಡಲಾಗಿದೆ. ವಾಹನ ಉತ್ಪಾದಕ ಕಂಪೆನಿಗಳೇ ಎಚ್‌ಎಸ್‌ಆರ್‌ಪಿ ಪ್ಲೇಟ್ ಪೂರೈಕೆ ಮಾಡುತ್ತಿವೆ.
ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಲೊಗ್ರಾಮ್ ಹೊಂದಿವೆ. ಪ್ಲೇಟ್‌ನ ಒಂದು ಬದಿಯಲ್ಲಿ ನೀಲಿ ಬಣ್ಣದ ಚಕ್ರವನ್ನು ಹೋಲುವ ಹಾಲೋಗ್ರಾಮ್ ಇದ್ದರೆ, ಕೆಳಗಡೆ 10 ನಂಬರಿನ ವಿಶಿಷ್ಟ ಗುರುತಿನ ಸಂಖ್ಯೆ ಇರುತ್ತದೆ. ಅಂಕಿಗಳ ಮೇಲೆ ಇಂಗ್ಲಿಷ್‌ನಲ್ಲಿ 'ಇಂಡಿಯಾ' ಎಂದು ನಮೂದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.