ADVERTISEMENT

ಕವಿತಾಳ | ನಕಲಿ ರಸಗೊಬ್ಬರ: ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 4:20 IST
Last Updated 28 ಅಕ್ಟೋಬರ್ 2024, 4:20 IST
ಕವಿತಾಳ ಸಮೀಪದ ಮಲ್ಲದಗುಡ್ಡ ಕ್ಯಾಂಪ್‌ನ ರಸಗೊಬ್ಬರ ಮಾರಾಟ ಮಳಿಗೆಗೆ ಸಬ್‌ ಇನ್‌ಸ್ಪೆಕ್ಟರ್‌ ವೆಂಕಟೇಶ ನಾಯಕ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು
ಕವಿತಾಳ ಸಮೀಪದ ಮಲ್ಲದಗುಡ್ಡ ಕ್ಯಾಂಪ್‌ನ ರಸಗೊಬ್ಬರ ಮಾರಾಟ ಮಳಿಗೆಗೆ ಸಬ್‌ ಇನ್‌ಸ್ಪೆಕ್ಟರ್‌ ವೆಂಕಟೇಶ ನಾಯಕ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು   

ಕವಿತಾಳ: ಇಲ್ಲಿಗೆ ಸಮೀಪದ ಮಲ್ಲದಗುಡ್ಡ ಕ್ಯಾಂಪ್‌ನ ಶ್ರೀನಿವಾಸ ಅಗ್ರೊ ಟ್ರೇಡರ್ಸ್‌ನಲ್ಲಿ ಸಂಗ್ರಹಿಸಿ ಡಿಎಪಿ ರಸಗೊಬ್ಬರದ ಗುಣಮಟ್ಟದ ಪರೀಕ್ಷೆಯ ಪ್ರಯೋಗಾಲಯದ ವರದಿ ಬಂದಿದ್ದು, ನಕಲಿ ರಸಗೊಬ್ಬರ ಎಂಬುದು ದೃಢಪಟ್ಟಿದೆ. ಈ ಬೆನ್ನಲ್ಲೆ ಕೃಷಿ ಇಲಾಖೆ ಅಧಿಕಾರಿಗಳು ರಸಗೊಬ್ಬರ ಅಂಗಡಿ ಮಾಲೀಕನ ವಿರುದ್ಧ ಕವಿತಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

‘ಶ್ರೀನಿವಾಸ ಟ್ರೇಡರ್ಸ್‌ನಲ್ಲಿ ಖರೀದಿಸಿದ್ದ ಡಿಎಪಿ ರಸಗೊಬ್ಬರ ಬಳಕೆಯಿಂದ ಭತ್ತದ ಬೆಳೆಯ ಬೆಳವಣಿಗೆ ಕುಂಠಿತವಾಗಿದೆ. ನಕಲಿ ಗೊಬ್ಬರ ವಿತರಿಸಿ ನಷ್ಟ ಉಂಟು ಮಾಡಿದ್ದಾರೆ’ ಎಂದು ರೈತರು ಕೃಷಿ ಅಧಿಕಾರಿಗೆ ದೂರು ನೀಡಿದ್ದರು.

ರೈತರ ದೂರು ಆಧರಿಸಿ ಅಂಗಡಿ ಮೇಲೆ ದಾಳಿ ಮಾಡಿದ್ದ ಕೃಷಿ ಅಧಿಕಾರಿಗಳು ರಸಗೊಬ್ಬರದ ಮಾದರಿ ಸಂಗ್ರಹಿಸಿದ್ದರು. ಅದನ್ನು ವಡ್ಡರಹಟ್ಟಿಯ ಸರ್ಕಾರಿ ಪ್ರಯೋಗಾಲಯಕ್ಕೆ ಗುಣಮಟ್ಟ ಪರೀಕ್ಷೆಗೆ ಕಳುಹಿಸಿದ್ದರು. ಪ್ರಯೋಗಾಲಯದ ವರದಿ ಇದೀಗ ಅಧಿಕಾರಿಗಳ ಕೈ ಸೇರಿದೆ. ಈ ಬೆನ್ನಲ್ಲೆ ಅಂಗಡಿ ಮಾಲೀಕ ಬಿ.ವಾಸು ವಿರುದ್ದ ಪ್ರಕರಣ ದಾಖಲಾಗಿದೆ. ಸದ್ಯ ಅಂಗಡಿ ಮಾಲೀಕ ನಾಪತ್ತೆಯಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ADVERTISEMENT

ಈ ನಡುವೆ, ‘ಅಂಗಡಿಯಲ್ಲಿ ಎಂದಿನಂತೆ ವಹಿವಾಟು ನಡೆಯುತ್ತಿದೆ. ಕೃಷಿ ಇಲಾಖೆ ಅಧಿಕಾರಿಗಳು ಅಂಗಡಿ ಮಾಲೀಕರ ಜತೆ ಶಾಮೀಲಾಗಿ ದಿನಕ್ಕೊಂದು ಕಥೆ ಹೆಣೆಯುತ್ತಿದ್ದಾರೆ’ ಎಂದು ರೈತ ಬಾಲಾಜಿ ಆರೋಪಿಸಿದರು.

ಮತ್ತೊಂದೆಡೆ, ‘ರೈತರು ನೇರವಾಗಿ ಸಿಂಧನೂರಿನಲ್ಲಿ ಖರೀದಿಸಿ ತಂದಿದ್ದ ಗೊಬ್ಬರದ ಮಾದರಿಯನ್ನು ಪಡೆದ ಕೃಷಿ ಅಧಿಕಾರಿಗಳು ಗುಣಮಟ್ಟ ಪರೀಕ್ಷೆಗೆ ಕಳುಹಿಸಿ ಉಳಿದ ದಾಸ್ತಾನನ್ನು ಈ ಅಂಗಡಿಯಲ್ಲಿ ಇಟ್ಟಿದ್ದರು. ಈಗ ಆರೋಪವನ್ನು ಅಂಗಡಿ ಮಾಲೀಕನ ತಲೆಗೆ ಕಟ್ಟಲಾಗುತ್ತಿದೆ’ ಎಂದು ಕೆಲವು ರೈತರು  ಪ್ರತಿಪಾದಿಸಿದ್ದಾರೆ.

‘ಹಣದ ಆಸೆಗೆ ಕಳಪೆ, ಕಲಬೆರಕೆ ಗೊಬ್ಬರ, ಕ್ರಿಮಿನಾಶಕ ಮಾರಾಟ ಮಾಡಿ ರೈತರಿಗೆ ನಷ್ಟ ಉಂಟು ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು’ ಎನ್ನುವುದು ಬಹುತೇಕ ರೈತರ ಒಕ್ಕೋರಲ ಒತ್ತಾಯ.

ಬಾಲಾಜಿ
ಗುರುನಾಥ

Quote - ರಸಗೊಬ್ಬರ ಖರೀದಿಸಿದ ಕುರಿತು ಅಂಗಡಿ ಮಾಲೀಕ ಬರೆದು ಕೊಟ್ಟ ಪುಸ್ತಕ ನಮ್ಮಲ್ಲಿದೆ. ಗೊಬ್ಬರ ನಕಲಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಈಗ ತಾನು ಮಾರಿಲ್ಲ ಎನ್ನುತ್ತಿದ್ದಾರೆ ಬಾಲಾಜಿ ಮಲ್ಲದಗುಡ್ಡ ಕ್ಯಾಂಪ್‌ ರೈತ

Quote - ಡಿಎಪಿ ರಸಗೊಬ್ಬರ ನಕಲಿ ಎಂದು ವರದಿ ಬಂದಿದೆ. ಅಂಗಡಿ ಪರವಾನಗಿ ರದ್ದುಪಡಿಸಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಗುರುನಾಥ ಸಹಾಯಕ ಕೃಷಿ ನಿರ್ದೇಶಕ ಮಾನ್ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.