ADVERTISEMENT

ಹೂಲಸೂರ: ಕಾರಹುಣ್ಣಿಮೆಗೆ ರೈತರ ಭರದ ಸಿದ್ಧತೆ

ಮುಂಗಾರಿನ ಮೊದಲ ಹಬ್ಬಕ್ಕೆ ಖರೀದಿ ಜೋರು: ಎತ್ತುಗಳ ಮೆರವಣಿಗೆಗೆ ತಯಾರಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 4:46 IST
Last Updated 21 ಜೂನ್ 2024, 4:46 IST
ಕಾರಹುಣ್ಣಿಮೆ ಪ್ರಯುಕ್ತ ಪಟ್ಟಣದ ಅಂಗಡಿಯೊಂದರಲ್ಲಿ ಗುರುವಾರ ರೈತರು ಎತ್ತುಗಳ ಅಲಂಕಾರಿಕ ವಸ್ತುಗಳನ್ನು ಖರೀದಿಸಿದರು
ಕಾರಹುಣ್ಣಿಮೆ ಪ್ರಯುಕ್ತ ಪಟ್ಟಣದ ಅಂಗಡಿಯೊಂದರಲ್ಲಿ ಗುರುವಾರ ರೈತರು ಎತ್ತುಗಳ ಅಲಂಕಾರಿಕ ವಸ್ತುಗಳನ್ನು ಖರೀದಿಸಿದರು   

ಹೂಲಸೂರ: ಮುಂಗಾರಿನ ಮೊದಲ ಹಬ್ಬ ಹಾಗೂ ರೈತರ ಹಬ್ಬ ಎಂದೇ ಹೇಳಲಾಗುವ ಕಾರಹುಣ್ಣಿಮೆ ಹಬ್ಬಕ್ಕೆ ರೈತರು ಸಿದ್ಧತೆ ನಡೆಸಿದ್ದಾರೆ.

ಎತ್ತುಗಳು ಜಮೀನಿನಲ್ಲಿ ನೇಗಿಲು, ಕುಂಟೆ ಹೊಡೆದು ಅಯಾಸಗೊಂಡಿರುತ್ತವೆ. ರೈತರು ಸಹ ಧಗೆ ಲೆಕ್ಕಿಸದೆ ಹೊಲವನ್ನು ಸ್ವಚ್ಛಗೊಳಿಸಿ ಬಿತ್ತನೆಗೆ ಹದಮಾಡಿಕೊಂಡಿರುತ್ತಾರೆ. ಹೀಗಾಗಿ ಆಯಾಸ ಮರೆಯಲಿ ಎಂಬ ಕಾರಣಕ್ಕೆ ಕಾರಹುಣ್ಣಿಮೆ ಆಚರಿಸಲಾಗುತ್ತದೆ. ಇದು ಮನುಷ್ಯ ಮತ್ತು ಪಶುಗಳ ಮಧ್ಯದ ಅತ್ಮೀಯ ಸಂಬಂಧದ ಜೊತೆಗೆ ಕೃಷಿ ಸಂಸ್ಕೃತಿ ಬಿಂಬಿಸುವ ಹಬ್ಬ ಎಂದೂ ಹೇಳಲಾಗುತ್ತದೆ.

ತಾಲ್ಲೂಕು ಸುತ್ತಮುತ್ತಲಿನ ಗಡಿಗೌಡಗಾಂವ, ಬೇಲೂರ, ತೊಗಲೂರ, ಗೋರಟಾ, ಮುಚಳoಬ , ಹುಲಸೂರ ಸೇರಿದಂತೆ ಇತರೆಡೆ ಗ್ರಾಮದಲ್ಲಿ ಬಿಡುವಿಲ್ಲದೆ ರೈತರೂ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಈ ಹೊಸ್ತಿಲಲ್ಲಿ ಹಬ್ಬ ಬಂದಿದ್ದು ಹಬ್ಬದ ಮೊದಲ ದಿನ ರೈತರು ವಿವಿಧ -ರೀತಿಯ ಸಿದ್ಧತೆಯಲ್ಲಿ ತೊಡಗಿಸಿ ಕೊಂಡಿರುವುದು ಕಂಡು ಬಂದಿದೆ.

ADVERTISEMENT

ರೈತರು ಬಣ್ಣಬಣ್ಣದ ಮತಾಟ, ಬಾರುಕೋಲು, ಕೊರಳ ಪಟ್ಟಿ, ಗಂಟೆಸರ, ಮಗಡಾ, ಕೋಡು, ಕಾಲಿನ ಕಂಡಾ, ಝಾಲಾ ಇತ್ಯಾದಿ ಖರೀದಿಸುವಲ್ಲಿ ನಿರತರಾಗಿದ್ದಾರೆ.

‘ಎತ್ತುಗಳನ್ನು ಸಿಂಗರಿಸಲಾಗುತ್ತದೆ. ನಂತರ ಪೂಜೆ ಸಲ್ಲಿಸಿ, ಕುಟುಂಬ ಸಮೇತ ಅರತಿ ಬೆಳಗಿ ನೈವೇದ್ಯ ಅರ್ಪಿಸಲಾಗುತ್ತದೆ’ ಎಂದು ಗಡಿಗೌಡಗಾಂವ್ ಗ್ರಾಮದ ರೈತ ಬಂಡೆಪ್ಪಾ ಪಾಟೀಲ ತಿಳಿಸಿದರು.

’ಮಧ್ಯಾಹ್ನ ಊರಲ್ಲಿ ಎತ್ತುಗಳ ಸಾಮೂಹಿಕ ಮೆರವಣಿಗೆ ನಡೆಯುತ್ತದೆ. ಸಂಜೆ ಆಗಸೆಯಲ್ಲಿ ಕರಿ ಕಡಿಯಲಾಗುತ್ತದೆ’ ಎಂದು ಮುಸ್ತಾಪುರ ಗ್ರಾಮದ ರೈತ ಕುಪೇಂದ್ರ ಪಾಟೀಲ ಹೇಳಿದರು.

ಬೆಲೆ ಏರಿಕೆ: ಕಾರಹುಣ್ಣಿಮೆಗೆ ಎತ್ತು, ಹೋರಿಗಳನ್ನು ಸಿಂಗರಿಸುವವಿವಿಧ ಸಾಮಗ್ರಿಗಳ ಬೆಲೆ ಈ ಬಾರಿ ಅಧಿಕವಾಗಿದೆ. ನೂಲಿನ ಹಗ್ಗದ ₹200, ಜೋಡಿ ಮತಾಟಿಗೆ ₹160, ಬಣ್ಣಕ್ಕೆ ₹80 ಇದ್ದು ಬಹುತೇಕ ಸಮಗ್ರಿಗಳ ಬೆಲೆ ಏರಿಕೆಯಾಗಿದೆ ಎಂದು ರೈತ ನಾಗೇಶ ಚೌರೆ ತಿಳಿಸಿದರು.

ಕಾರಹುಣ್ಣಿಮೆ ರೈತರಿಗೆ ಪ್ರಮುಖ ಹಬ್ಬ ಇದನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುವ ಮೂಲಕ ಈ ವರ್ಷದ ಮಳೆ ಚೆನ್ನಾಗಿ ಬಂದು ಉತ್ತಮ ಫಸಲು ದೊರೆಯಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇವೆ
ಮಹದೇವ ಮಹಾಜನ ಬೇಲೂರ ಗ್ರಾಮದ ರೈತ
ಭಾರತ ಕೃಷಿ ಪ್ರಧಾನ ದೇಶವಾಗಿರುವುದರಿಂದ ರೈತರ ಹಬ್ಬಗಳನ್ನು ವಿಶಿಷ್ಟವಾಗಿ ಆಚರಣೆ ಮಾಡಲಾಗುತ್ತದೆ. ಕಾರಹುಣ್ಣಿಮೆ ರೈತ ಮತ್ತು ಎತ್ತುಗಳ ಮಧ್ಯೆ ಇರುವ ಬಾಂಧವ್ಯವನ್ನು ವೃದ್ಧಿಸುತ್ತದೆ
ಶರದ ಗಂದಗೆ ಅಳವಾಯಿ ಗ್ರಾಮದ ರೈತ
ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಬಿಡುವು ನೀಡಿದ್ದರಿಂದ ಬಿತ್ತನೆಗೆ ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆಯಾದರೆ ರೈತರಿಗೆ ಚಿಂತೆ ಕಾಡುವುದಿಲ್ಲ
ಸತೀಶ ನಿಂಬಾಳ್ಕರ ಪ್ರಗತಿ ಪರ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.