ಕವಿತಾಳ: ಮಸ್ಕಿ ತಾಲ್ಲೂಕಿನ ವಟಗಲ್ ಗ್ರಾಮದ ಸುತ್ತಮುತ್ತಲಿನ ಜಮೀನುಗಳಲ್ಲಿ ಬೆಳೆದ ತೊಗರಿ ಬೆಳೆಗೆ ಅಲ್ಲಲ್ಲಿ ನೆಟೆರೋಗ ಕಾಣಿಸಿಕೊಂಡಿದ್ದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಬೇರುಗಳು ಕೊಳೆತು, ಎಲೆಗಳು ಬಿಳಿ ಬಣ್ಣಕ್ಕೆ ತಿರುಗಿ, ಗಿಡಗಳು ಒಣಗಿ ನೆಲಕ್ಕೆ ಬೀಳುತ್ತಿದ್ದು ಇಡೀ ಜಮೀನಿಗೆ ರೋಗ ಹರಡುವ ಭೀತಿ ರೈತರನ್ನು ಕಾಡುತ್ತಿದೆ.
‘4.8 ಎಕರೆ ಜಮೀನಿನಲ್ಲಿ ತೊಗರಿ ಬಿತ್ತನೆ ಮಾಡಿದ್ದು, ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ಮತ್ತು ಕೂಲಿ ಕಾರ್ಮಿಕರು ಸೇರಿದಂತೆ ಇದುವರೆಗೂ ಅಂದಾಜು ₹ 60 ಸಾವಿರ ಖರ್ಚು ಮಾಡಿದ್ದೇನೆ, ಇದೀಗ ಬೆಳೆ ಕೈಕೊಡುತ್ತಿರುವ ಪರಿಣಾಮ ದಿಕ್ಕು ತೋಚದಂತಾಗಿದೆ’ ಎಂದು ರೈತ ವಿಜಯ ಕಡತಲ್ ಆತಂಕ ವ್ಯಕ್ತಪಡಿಸಿದರು.
‘ಇರುವ 4.22 ಎಕರೆ ಜಮೀನಿನಲ್ಲಿ ಸಂಪೂರ್ಣ ತೊಗರಿ ಬಿತ್ತನೆ ಮಾಡಿದ್ದು ಮಳೆ ಕೊರತೆಯಿಂದ ಮೂರು ತಿಂಗಳಿಂದ ಬೆಳೆ ಕಾಪಾಡಿಕೊಳ್ಳಲು ಹೆಣಗಿದ್ದೇವೆ. ಇದೀಗ ಬೆಳೆಗೆ ರೋಗ ಹರಡುತ್ತಿರುವುದು ಸಮಸ್ಯೆ ತಂದೊಡ್ಡಿದೆ. ರೈತ ಸಂಪರ್ಕ ಕೇಂದ್ರದಲ್ಲಿಯೇ ಬಿತ್ತನೆ ಬೀಜ ಖರೀದಿಸಿ ಕೃಷಿ ಅಧಿಕಾರಿಗಳ ಸಲಹೆಯಂತೆ ಸಕಾಲದಲ್ಲಿ ರಸಗೊಬ್ಬರ ಮತ್ತು ಕ್ರಿಮಿನಾಶಕ ಸಿಂಪಡಣೆ ಮಾಡಿದ್ದರೂ ರೋಗ ನಿಯಂತ್ರಣ ಆಗುತ್ತಿಲ್ಲ. ಅಧಿಕಾರಿಗಳು ಬೆಳೆ ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸಲು ಕ್ರಮ ಜರುಗಿಸಬೇಕು’ ಎಂದು ರೈತ ಯಾಕೂಬ್ ಒತ್ತಾಯಿಸಿದರು.
‘ಪ್ರತಿ ವರ್ಷ ತೊಗರಿ ಒಂದೇ ಬೆಳೆಯನ್ನು ಬಿತ್ತನೆ ಮಾಡುವುದರಿಂದ ಕೆಲವು ಕಡೆ ನೆಟೆರೋಗ ಕಾಣಿಸಿಕೊಂಡಿದೆ, ಬೇರು, ಕಾಂಡ ಕೊಳೆಯುವುದರಿಂದ ಗಿಡ ಒಣಗುತ್ತಿದೆ. ಆರಂಭಿಕ ಹಂತದಲ್ಲಿ ರೋಗ ಪತ್ತೆಯಾದರೆ ನಿಯಂತ್ರಣ ಸಾಧ್ಯ. ಈ ಹಂತದಲ್ಲಿ ಬೆಳೆ ಕಾಪಾಡುವುದು ಕಷ್ಟಕರ‘ ಎಂದು ಪಾಮನಕಲ್ಲೂರು ರೈತ ಸಂಪರ್ಕ ಕೇಂದ್ರ ಸಹಾಯಕ ಕೃಷಿ ಅಧಿಕಾರಿ ಬಸವರಾಜ ಹೇಳಿದರು.
ಮಳೆ ಕೊರತೆಯಿಂದ ಬೇರೆ ಬೆಳೆಗಳು ಕೈ ಕೊಟ್ಟಿವೆ, ಇದೀಗ ತೊಗರಿ ಬೆಳೆಯೂ ಬಾರದಿದ್ದರೆ ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ..–ವಿಜಯ ಕಡತಲ್, ರೈತ
‘ಬಿತ್ತನೆಗೆ ಮುಂಚೆ ಜಮೀನು ಹದಗೊಳಿಸುವ ಸಮಯದಲ್ಲಿ ತಿಪ್ಪೆ ಗೊಬ್ಬರದ ಜತೆ ಟ್ರೈಕೋಡರ್ಮಾ ಶಿಲೀಂಧ್ರ ನಾಶಕ ಬಳಸುವುದು ಮತ್ತು ಪ್ರತಿ ವರ್ಷ ಬೆಳೆ ಪುನರಾವರ್ತನೆ ಆಗದಂತೆ ಬೇರೆ ಬೆಳೆ ಬೆಳೆಯಬೇಕು..–ಬಸವರಾಜ, ಕೃಷಿ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.