ADVERTISEMENT

ಬಯ್ಯಾಪುರ ವಸತಿ ಶಾಲೆಯಲ್ಲಿ ಅವ್ಯವಸ್ಥೆ: ರೈತ ಸಂಘ ಆರೋಪ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 14:40 IST
Last Updated 24 ಅಕ್ಟೋಬರ್ 2024, 14:40 IST
ಲಿಂಗಸುಗೂರಲ್ಲಿ ಗುರುವಾರ ರೈತ ಸಂಘದ ಪದಾಧಿಕಾರಿಗಳು ಬಯ್ಯಾಪುರದ ಕಸ್ತೂರಬಾಗಾಂಧಿ ಬಾಲಕೀಯರ ವಸತಿ ಶಾಲೆ ಅವ್ಯವಸ್ಥೆ ವಿರೋಧಿಸಿ ಉಪ ವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟರ್‌ಗೆ ದೂರು ಸಲ್ಲಿಸಿದರು
ಲಿಂಗಸುಗೂರಲ್ಲಿ ಗುರುವಾರ ರೈತ ಸಂಘದ ಪದಾಧಿಕಾರಿಗಳು ಬಯ್ಯಾಪುರದ ಕಸ್ತೂರಬಾಗಾಂಧಿ ಬಾಲಕೀಯರ ವಸತಿ ಶಾಲೆ ಅವ್ಯವಸ್ಥೆ ವಿರೋಧಿಸಿ ಉಪ ವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟರ್‌ಗೆ ದೂರು ಸಲ್ಲಿಸಿದರು   

ಲಿಂಗಸುಗೂರು: ತಾಲ್ಲೂಕಿನ ಬಯ್ಯಾಪುರ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಯ ಹಾಸ್ಟೆಲ್‌ ಕಟ್ಟಡ ದುರಸ್ತಿ ನೆಪದಲ್ಲಿ ಚಾವಣಿ ಸಂಪೂರ್ಣ ತೆಗೆದು ಹಾಕಲಾಗಿದೆ. ಇದರಿಂದ ಮಕ್ಕಳು ಪರದಾಡುವಂತಾಗಿದೆ ಎಂದು ರಾಜ್ಯ ರೈತ ಸಂಘ ಆರೋಪಿಸಿದೆ.

ಗುರುವಾರ ಉಪ ವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟರ್‌ ಅವರಿಗೆ ದೂರು ನೀಡಿ ಸಂಘವು, ‘ಅನಾಥ, ಶಾಲೆ ಬಿಟ್ಟ, ಬಡ ಮಕ್ಕಳೇ ಹೆಚ್ಚಾಗಿರುವ ವಸತಿ ಶಾಲೆ ರಜೆ ಮುಗಿದು ಇದೀಗ ಆರಂಭಗೊಂಡಿದೆ. ಮಕ್ಕಳು ಶಾಲೆಗೆ ಬಂದರೆ, ವಸತಿ ಸಮಸ್ಯೆ ಮುಂದಿಟ್ಟು ಮಕ್ಕಳನ್ನು ಮುಖ್ಯ ಶಿಕ್ಷಕರು ವಾಪಸ್‌ ಕಳುಹಿಸುತ್ತಿದ್ದಾರೆ’ ಎಂದು ಗಮನ ಸೆಳೆದರು.

‘ವಸತಿ ಕೊಠಡಿಗಳ ಜೊತೆಗೆ ಅಡುಗೆ ಕೋಣೆ, ಶೌಚಾಲಯ, ಸ್ನಾನಗೃಹಗಳನ್ನು ತೆರವುಗೊಳಿಸಲಾಗಿದೆ. ರಜೆ ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸದ ಕಾರಣ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ಮಕ್ಕಳ ಶೈಕ್ಷಣಿಕ ಬದುಕಿನ ಜೊತೆಗೆ ಆಟವಾಡುತ್ತಿರುವ ಶಾಲಾ ಮುಖ್ಯಸ್ಥರು ಹಾಗೂ ಗುತ್ತಿಗೆದಾರ ಏಜೆನ್ಸಿ ಎಂಜಿನಿಯರ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಬಡ ಮಕ್ಕಳ ಕಲಿಕೆಗೆ ಅನುಕೂಲ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಪುತ್ರಗೌಡ ಪಾಟೀಲ, ತಾಲ್ಲೂಕು ಘಟಕದ ಅಧ್ಯಕ್ಷ ದುರ್ಗಾ ಪ್ರಸಾದ, ಸಂಚಾಲಕ ಅಮರೇಶ ಮೇಟಿ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.