ADVERTISEMENT

ಸಿಂಧನೂರು | ಭತ್ತ ನಾಟಿಗೆ ರೈತರ ಸಿದ್ಧತೆ

ತುಂಗಭದ್ರಾ ಎಡದಂಡೆ ನಾಲೆಗೆ ನೀರು: ಜಮೀನು ಹದ ಮಾಡುವುದರಲ್ಲಿ ತೊಡಗಿದ ಅನ್ನದಾತ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 6:10 IST
Last Updated 24 ಜುಲೈ 2024, 6:10 IST
ಸಿಂಧನೂರು ತಾಲ್ಲೂಕಿನ ಇ.ಜೆ ಹೊಸಳ್ಳಿ ಗ್ರಾಮದ ರೈತರು ಜಮೀನು ಹದ ಮಾಡುತ್ತಿರುವುದು
ಸಿಂಧನೂರು ತಾಲ್ಲೂಕಿನ ಇ.ಜೆ ಹೊಸಳ್ಳಿ ಗ್ರಾಮದ ರೈತರು ಜಮೀನು ಹದ ಮಾಡುತ್ತಿರುವುದು   

ಸಿಂಧನೂರು: ತುಂಗಭದ್ರಾ ಎಡದಂಡೆ ನಾಲೆಗೆ ಎರಡು ದಿನಗಳ ಹಿಂದೆ ನೀರು ಹರಿಸಲಾಗಿದ್ದು, ಭತ್ತ ನಾಟಿಗೆ ರೈತರು ಸಿದ್ಧತೆ ಮಾಡಿಕೊಂಡಿದ್ದಾರೆ.

ನಂದ್ಯಾಲ ಸೋನಾ, ಜನನಿ, ಬಿ.ಪಿ.ಟಿ ಹಾಗೂ ಮತ್ತಿತರ ತಳಿಗಳ ಭತ್ತದ ಸಸಿಗಳನ್ನು ಈಗಾಗಲೇ ಹಾಕಲಾಗಿದ್ದು, ಈಗ ಆರ್.ಎನ್.ಆರ್. ತಳಿಯ ಸಸಿಗಳನ್ನು ಹಾಕುತ್ತಿದ್ದಾರೆ. ಕಳೆದ ವರ್ಷ ತಾಲ್ಲೂಕಿನಲ್ಲಿ 67 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿತ್ತು. ಈ ಬಾರಿಯೂ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆಯುವ ನಿರೀಕ್ಷೆ ಇದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ.

ಒಂದು ಎಕರೆ ಪ್ರದೇಶದಲ್ಲಿ ಭತ್ತದ ಸಸಿ ನಾಟಿ ಮಾಡಬೇಕಾದರೆ ಅದಕ್ಕೆ 25 ಕೆ.ಜಿ ಭತ್ತದ ಬೀಜ ಹಾಕಬೇಕಾಗುತ್ತದೆ ಎಂದು ಚಿರತ್ನಾಳ ಗ್ರಾಮದ ರೈತ ಶರಣಪ್ಪ ಹೇಳುತ್ತಾರೆ.

ADVERTISEMENT

ಭತ್ತದ ಸಸಿ ಹಾಕದ ಕೆಲ ಗ್ರಾಮಗಳ ರೈತರು ಕಾರಟಗಿ ಅಥವಾ ದಢೆಸುಗೂರು ಗ್ರಾಮಗಳಿಂದ ಸಸಿಗಳನ್ನು ತಂದು ನಾಟಿ ಮಾಡುತ್ತಾರೆ.

ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಸಸಿಗಳನ್ನು ಹಾಕಲಾಗಿದ್ದು, ಹೊಲಗಾಲುವೆಗಳಿಗೆ ನೀರು ಬರುವ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಕಾಲುವೆಗೆ ನೀರು ಬಂದಿರುವುದರಿಂದ ರೈತರು ಹೊಲ ಹದ ಮಾಡುವ ಮತ್ತು ಸಸಿಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಸಹಾಯಕ ಕೃಷಿ ನಿರ್ದೇಶಕ ನಜೀರ್ ಅಹ್ಮದ್,‘ಕಳೆದ ಬಾರಿ ಸುಗ್ಗಿ ಬೆಳೆಯನ್ನು ಮಾತ್ರ ಬೆಳೆದಿರುವ ರೈತರು ಜಮೀನು ಹದ ಮಾಡಿಕೊಂಡು ಸಸಿ ನಾಟಿಯ ಸಿದ್ಧತೆಯಲ್ಲಿದ್ದಾರೆ. ಕಳೆದ ವರ್ಷದಂತೆ ಈ ವರ್ಷವೂ 67 ಸಾವಿರ ಹೆಕ್ಟೇರ್ ಜಮೀನಿನಲ್ಲಿ ಭತ್ತ ಬೆಳೆಯುವ ನಿರೀಕ್ಷೆ ಇದೆ. ಬೇಸಿಗೆಯಲ್ಲಿ ಭತ್ತ ನಾಟಿ ಮಾಡದ ಕಾರಣ ಜಮೀನಿನಲ್ಲಿ ಉಪ್ಪಿನಾಂಶ ಹೆಚ್ಚಳವಾಗಿದೆ. ಆದ್ದರಿಂದ ರೈತರು ಭತ್ತದ ಸಸಿ ನಾಟಿ ಮಾಡುವಾಗ ಜಿಂಕ್‌ ಹಾಕಿದರೆ ಉಪ್ಪಿನಾಂಶ ನಿಯಂತ್ರಿಸಲು ಸಾಧ್ಯವಾಗುತ್ತದೆ. ಕಾರಣ ರೈತರು ತಪ್ಪದೆ ಜಿಂಕ್ ಹಾಕಬೇಕು’ ಎಂದು ಮನವಿ ಮಾಡಿದರು.

ತಾಲ್ಲೂಕಿನ ರೈತರಿಗೆ ಬೇಕಾಗುವಷ್ಟು ಭತ್ತದ ಬೀಜ, ರಾಸಾಯನಿಕ ಗೊಬ್ಬರದ ಸಂಗ್ರಹವಿದೆ. ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರ ಸಭೆ ನಡೆಸಿ ಕೊರತೆ ಇರುವ ಸಂಘಗಳಿಗೆ ರಾಸಾಯನಿಕ ಗೊಬ್ಬರವನ್ನು ಪೂರೈಕೆ ಮಾಡಲಾಗಿದೆ. ಹೀಗಾಗಿ ರೈತರಿಗೆ ಯಾವುದೇ ತೊಂದರೆವಿಲ್ಲ ಎಂದು ನಜೀರ್ ಅಹ್ಮದ್ ಪ್ರತಿಕ್ರಿಯಿಸಿದರು.

ಬೇಸಿಗೆ ಬೆಳೆ ಬೆಳೆಯದ ಕಾರಣಕ್ಕಾಗಿ ಭೂಮಿಯಲ್ಲಿ ಉಪ್ಪಿನಾಂಶ ತೇಲಿರುವುದು ದೃಢಪಟ್ಟಿದೆ. ಆದ್ದರಿಂದ ರೈತರು ಭತ್ತದ ಸಸಿ ನಾಟಿ ಮಾಡುವಾಗ ತಪ್ಪದೆ ಜಿಂಕ್ ಬಳಕೆ ಮಾಡಬೇಕು.
ನಜೀರ್ ಅಹ್ಮದ್, ಸಹಾಯಕ ಕೃಷಿ ನಿರ್ದೇಶಕ
ಸಿಂಧನೂರು ತಾಲ್ಲೂಕಿನ ಇ.ಜೆ ಹೊಸಳ್ಳಿ ಗ್ರಾಮದ ಜಮೀನೊಂದರಲ್ಲಿ ಬೆಳೆದಿರುವ ಭತ್ತದ ಸಸಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.