ಸಿಂಧನೂರು: ರೈತರೊಬ್ಬರಿಂದ 20 ಕ್ವಿಂಟಲ್ ಮಾತ್ರ ಜೋಳ ಖರೀದಿ ಮಿತಿಯ ಷರತ್ತು ತೆಗೆಯಬೇಕು ಹಾಗೂ ರಸಗೊಬ್ಬರದ ಬೆಲೆ ಏರಿಕೆ ಇಳಿಕೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕ ಸೋಮವಾರ ತಾಲ್ಲೂಕಿನ ಪೋತ್ನಾಳ ಕ್ರಾಸ್‍ನಲ್ಲಿ ಸಿಂಧನೂರು-ರಾಯಚೂರು ಹೆದ್ದಾರಿಯಲ್ಲಿ ಸಂಚಾರ ತಡೆದು ಪ್ರತಿಭಟಿಸಿತು.
ಅತಿವೃಷ್ಟಿಯಿಂದ ಬೆಳೆಹಾನಿಯಾಗಿ ರೈತರು ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರ ನೆರವಿಗೆ ಬರಬೇಕಾದ ರಾಜ್ಯ ಸರ್ಕಾರ ರೈತರೊಬ್ಬರಿಂದ 20 ಕ್ವಿಂಟಲ್ ಮಾತ್ರ ಜೋಳ ಖರೀದಿ ಮಿತಿ ನಿರ್ಬಂಧ ಹಾಕಿರುವುದು ಅವೈಜ್ಞಾನಿಕವಾಗಿದೆ ಎಂದರು.
ಒಂದು ಎಕರೆ ಜಮೀನಿನಲ್ಲಿ 25 ರಿಂದ 30 ಕ್ವಿಂಟಲ್ ಜೋಳ ಬೆಳೆಯುತ್ತದೆ. ಆದರೆ ಕೇವಲ 20 ಕ್ವಿಂಟಲ್ ಖರೀದಿ ಕೇಂದ್ರದಲ್ಲಿ ಖರೀದಿಸಿದರೆ, ಇನ್ನುಳಿದ ಜೋಳ ಮಾರಾಟವಾಗದೆ, ಸಾಲ ತೀರಿಸಲಾಗದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಖರೀದಿ ಮಿತಿ ತೆಗೆದು, ರೈತರು ಬೆಳೆದ ಸಂಪೂರ್ಣ ಜೋಳವನ್ನು ಖರೀದಿ ಕೇಂದ್ರದಲ್ಲಿ ಖರೀದಿಸಬೇಕು ಎಂದು ರಾಜ್ಯ ಘಟಕದ ಕಾರ್ಯದರ್ಶಿ ಅಮೀನಪಾಷಾ ದಿದ್ದಿಗಿ ಒತ್ತಾಯಿಸಿದರು.
ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಕೊಡುವಂತೆ ಅನೇಕ ಬಾರಿ ಹೋರಾಟ ನಡೆಸಿ ಮನವಿ ಸಲ್ಲಿಸಿದಾಗ್ಯೂ ಸ್ಪಂದಿಸದ ಸರ್ಕಾರ ರಸಗೊಬ್ಬರದ ಬೆಲೆ ಕೇವಲ ಆರು ತಿಂಗಳಲ್ಲಿ 1100 ಇದ್ದ ಡಿಎಪಿ ಬೆಲೆ ₹ 1250, 20-20-0-13
₹ 1450 ಆಗಿದೆ. ಅದೇ ರೀತಿ ₹ 900 ಇದ್ದ ಪೊಟಾಷ್ ಬೆಲೆ ₹ 1500, 10-26 ಬೆಲೆ ₹ 1600 ಆಗಿದೆ. ರಸಗೊಬ್ಬರದ ಬೆಲೆಗಳ ಏರಿಕೆಯಿಂದಲೂ ರೈತರು ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಸಗೊಬ್ಬರ ಬೆಲೆ ಇಳಿಕೆ ಮಾಡಬೇಕು ನಿರ್ಲಕ್ಷ್ಯ ವಹಿಸಿದರೆ ರಾಜ್ಯಾದ್ಯಂತ ದೊಡ್ಡ ಮಟ್ಟದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನಾ ಸ್ಥಳಕ್ಕೆ ಬಂದ ಗ್ರೇಡ್-2 ತಹಶೀಲ್ದಾರ್ ಚಂದ್ರಶೇಖರ ಬಂದು ಮನವಿ ಪತ್ರ ಸ್ವೀಕರಿಸಿದರು. ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಹಂಚಿನಾಳ, ಮುಖಂಡರಾದ ಶರಣಪ್ಪ, ಅನಿತಾ, ಸತ್ಯನಾರಾಯಣ, ಬಸನಗೌಡ ಪಾಟೀಲ್ ಹುಲುಗುಂಚಿ, ಜಗದೀಶ್ ಪಾಟೀಲ್, ಸಿದ್ದನಗೌಡ, ಸಜ್ಬಲಿಸಾಬ, ಶರಣೇಗೌಡ, ಬಸವಲಿಂಗಪ್ಪ, ಬಸನಗೌಡ, ಪೀರಸಾಬ, ಮೌಲಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.