ರಾಯಚೂರು: ‘ಪ್ರಜಾವಾಣಿ’ ಸೋಮವಾರ ಆಯೋಜಿಸಿದ್ದ ಫೋನ್‌ಇನ್ ಕಾರ್ಯಕ್ರಮದಲ್ಲಿ ಕರೆ ಮಾಡಿದ್ದವರ ಮರಗಳ ಕುರಿತ ಪ್ರಶ್ನೆಗಳು ಬೇಸಿಗೆ ಬಿಸಿಲು ಬಿಸಿಲೂರಿನ ಜನರಿಗೆ ಮರಗಳ ಮಹತ್ವ ಮನಗಾಣಿಸಿದ್ದನ್ನ ಪ್ರತಿಫಲಿಸಿದವು.
ಕೃಷಿಗೆ ಯೋಗ್ಯವಲ್ಲದ ಜಮೀನು, ಬದುಗಳಲ್ಲಿ ಗಿಡ ಮರ ಬೆಳೆಸಿ ಅರಣ್ಯ ಕೃಷಿ ಮಾಡಿ ಆದಾಯ ಪಡೆಯುವ ಮಾರ್ಗಗಗಳ ಕುರಿತು ಅನೇಕ ರೈತರು ಮಾಹಿತಿ ಪಡೆದುಕೊಂಡರು.
ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಸುರೇಶಬಾಬು ಅವರು ಒಂದೂವರೆ ಗಂಟೆ ಕಾಲ ರೈತರ ಎಲ್ಲ ಪಶ್ನೆಗಳಿಗೂ ಉತ್ತರಿಸಿದರು. ರೈತರ ಹೊಲಗಳಿಗೂ ಭೇಟಿ ಕೊಟ್ಟು ಇನ್ನಷ್ಟು ಅನುಕೂಲ ಮಾಡಿಕೊಡುವ ಭರವಸೆ ನೀಡಿದರು.
* ನಮ್ಮದು 40 ಎಕರೆ ಜಮೀನು ಇದೆ. ಹೊಲದಲ್ಲಿ ಬೆಳೆಸಲು ಸಸಿಗಳನ್ನು ಕೊಡುವಿರಾ?- ಮಹಮ್ಮದ್ ಹುಸೇನ್, ಸಿರವಾರ
ಪ್ರಾದೇಶಿಕ ಅರಣ್ಯ ವಿಭಾಗದ ಕಚೇರಿಗೆ ಬಂದು ಹೆಸರು ನೋಂದಾಯಿಸಿದರೆ ನಿಮಗೆ ಬೇಕಿರುವ ಸಸಿಗಳನ್ನು ಪೂರೈಸಲಾಗುವುದು.
* ಸಾಗವಾನಿ ಸಸಿ ಬೇಕಿದೆ. ಉಚಿತವಾಗಿ ಪೂರೈಸುತ್ತಾರೆಯೇ?- ಚಂದ್ರಶೇಖರ ಪಾಟೀಲ, ಕೊಪ್ಪಳ ಜಿಲ್ಲೆಯ ಕಾರಟಗಿ
ಉಚಿತ ಎನ್ನುವುದು ಇಲ್ಲ. ಆದರೆ, ರೈತರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದಲೇ ಅತ್ಯಂತ ಕನಿಷ್ಠ ಬೆಲೆ ₹3ಗೆ ಒಂದು ಸಸಿಯನ್ನು ಮಾರಾಟ ಮಾಡಲಾಗುತ್ತಿದೆ. ಈಗ ಸಸಿ ನೆಟ್ಟು ಒಮ್ಮೆ ನೀರು ಹಾಕಿದರೆ ಸಾಕು. ಬೇಸಿಗೆಯಲ್ಲಿ ಒಣಗದಂತೆ ನೋಡಿಕೊಳ್ಳಿ. ನಿರ್ವಹಣೆಯ ತಾಪತ್ರೆಯೂ ಇರುವುದಿಲ್ಲ.
* ನಮ್ಮ ಜಮೀನಿನಲ್ಲಿ ಗಿಡ ಬೆಳೆಸಲು ಸಿದ್ಧವಿದ್ದೇನೆ. ನೆರವಾಗುವಿರಾ?- ಪ್ರಭುಲಿಂಗ, ದೇವದುರ್ಗ ತಾಲ್ಲೂಕಿನ ಕೊಳೂರ
ನೀವು ಒಮ್ಮೆ ಅರಣ್ಯ ಇಲಾಖೆ ಕಚೇರಿಗೆ ತೆರಳಿ ನಿಖರವಾದ ಮಾಹಿತಿ ಕೊಟ್ಟರೆ ಸ್ಥಳಕ್ಕೆ ಇಲಾಖೆ ಸಿಬ್ಬಂದಿ ಭೇಟಿ ಕೊಟ್ಟು ಪರಿಶೀಲಿಸುವರು. ನಿಮಗೆ ಅಗತ್ಯವಿರುವ ಸಸಿಗಳನ್ನೂ ಒದಗಿಸಲಾಗುವುದು.
* ಸಾಗವಾನಿಯ 50 ಸಸಿ ಬೇಕಿದೆ. ಕೊಡುವಿರಾ?- ವೆಂಕಟೇಶ ಬಪ್ಪೂರ್, ಸಿಂಧನೂರು ತಾಲ್ಲೂಕಿನ ತುರ್ವಿಹಾಳ
ಕೃಷಿಗೆ ಅನುಪಯುಕ್ತವಾದ ಜಮೀನಿನಲ್ಲಿ ಸಾಗವಾನಿ ಬೆಳೆಯಬಹುದಾಗಿದೆ. 15ರಿಂದ 20 ವರ್ಷಗಳ ನಂತರ ಲಕ್ಷಾಂತರ ಆದಾಯ ಪಡೆಯಲು ಸಾಧ್ಯವಿದೆ. ನಮ್ಮ ಸಸ್ಯಕ್ಷೇತ್ರದಲ್ಲಿ ಸಮೃದ್ಧವಾಗಿ ಬೆಳೆದ ಒಂದು ವರ್ಷದ ಸಸಿಗಳನ್ನು ನೇರವಾಗಿ ಖರೀದಿಸಬಹುದಾಗಿದೆ.
* ನೀರಾವರಿ ಜಮೀನಿನಲ್ಲಿ ಯಾವ ಮರಗಳನ್ನು ಬೆಳೆಸಬಹುದು? ಶ್ರೀಗಂಧ ಬೆಳೆಸಲು ಅವಕಾಶ ಇದೆಯೇ?- ಹನುಮಂತಪ್ಪ, ಮಸ್ಕಿ ತಾಲ್ಲೂಕಿನ ಕನ್ನಾಳ
ನೀರಿಲ್ಲದ ಕಡೆಯೇ ಶ್ರೀಗಂಧ ಬೆಳೆಸಬಹುದಾಗಿದೆ. ಶ್ರೀಗಂಧ ಬೆಳೆಸಲು ಹಾಗೂ ಮಾರಾಟ ಮಾಡಲು ಇಲಾಖೆಯಿಂದ ಯಾವುದೇ ಅನುಮತಿಯ ಅಗತ್ಯವಿಲ್ಲ. ಅದು ಹೆಮ್ಮರವಾಗಿ ಬೆಳೆದ ನಂತರ ಮಾರಾಟ ಮಾಡಬಹುದು.
* ಪರಿಸರ ಜಾಗೃತಿಗಾಗಿ ಫೋನ್ ಇನ್ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ‘ಪ್ರಜಾವಾಣಿ’ಗೆ ಧನ್ಯವಾದಗಳು. ಎಂಟು ಗ್ರಾಮಗಳಲ್ಲಿ ಕೆಲಸ ಮಾಡಿದ್ದೇವೆ. ಉಚಿತ ಗಿಡಗಳನ್ನು ಕೊಟ್ಟರೆ ಬೆಳೆಸಲು ಸಿದ್ಧರಿದ್ದೇವೆ.- ಜಾನಪ್ಪ, ಮಸ್ಕಿ
* ಪರಿಸರ ಸಂರಕ್ಷಣೆಗೆ ಮುಂದೆ ಬರುವ ಹಾಗೂ ನಾಡನ್ನು ಹಸಿರು ಮಾಡಲು ಆಸಕ್ತಿ ತೋರಿಸುವ ಪರಿಸರ ಪ್ರೇಮಿಗಳಿಗೆ ಇಲಾಖೆ ಬೆನ್ನೆಲುಬಾಗಿ ನಿಲ್ಲಲು ಸಿದ್ಧವಿದೆ.
* ನಮ್ಮ ತೋಟದಲ್ಲಿ 500 ಶ್ರೀಗಂಧದ ಮರಗಳಿವೆ. ಕಳ್ಳರಿಂದ ರಕ್ಷಣೆ ಪಡೆಯಲು ಏನು ಮಾಡಬೇಕು?- ಮಲ್ಲಿಕಾರ್ಜುನ, ಮುದಗಲ್
* ನಿಮ್ಮ ಸಮೀಪದ ಪೊಲೀಸ್ ಠಾಣೆಗೆ ದೂರು ಕೊಟ್ಟರೆ ಅವರು ಎಫ್‌ಐಆರ್ ದಾಖಲಿಸುತ್ತಾರೆ. ಪೊಲೀಸರು ತನಿಖೆ ನಡೆಸುತ್ತಾರೆ. ಶ್ರೀಗಂಧದ ಮರಗಳು ದೊಡ್ಡಾಗಿ ಬೆಳೆದಿದ್ದರೆ ಯೋಗ್ಯ ಬೆಲೆ ದೊರಕುವಂತಾಗಲು ಖರೀದಿಸುವವರ ವಿಳಾಸ ಕೊಡಲಾಗುವುದು.
* ಶ್ರೀಗಂಧವನ್ನು ಕಪ್ಪು ಮಣ್ಣಿನಲ್ಲಿ ಬೆಳೆಸಬಹುದೇ?- ಮಹಮ್ಮದ್ ರಫಿ, ಸಿಂಧನೂರು ತಾಲ್ಲೂಕಿನ ಬೆಣಿಗನೂರು
ಕಡಿಮೆ ನೀರಿರುವ ಪ್ರದೇಶದಲ್ಲಿ ಶ್ರೀಗಂಧ ಚೆನ್ನಾಗಿ ಬೆಳೆಯುತ್ತದೆ. 20 ವರ್ಷಕ್ಕೆ ನಿರೀಕ್ಷೆಗೂ ಮೀರಿ ಆದಾಯ ತಂದುಕೊಡುತ್ತದೆ.
* ಗ್ರಾಮೀಣ ಪ್ರದೇಶಗಳಲ್ಲಿ ವಾಸವಾಗಿರುವ ಜನರಿಗೆ ಅರಣ್ಯ ಇಲಾಖೆಯು ಉಚಿತ ಸಸಿ ಕೊಡುವ ಬಗ್ಗೆ ಮಾಹಿತಿ ಇಲ್ಲ. ಎಲ್ಲೆಡೆ ಪ್ರಚಾರ ಮಾಡಿ.- ಚೆನ್ನಬಸಪ್ಪ, ಮಾನ್ವಿ ತಾಲ್ಲೂಕಿನ ಅರೋಳಿ
ಇಲಾಖೆ ನಿರಂತರವಾಗಿ ಜಾಗೃತಿ ಕಾರ್ಯಕ್ರಮ ಆಯೋಜಿಸುತ್ತಿದೆ. ಫೋನ್‌ಇನ್ ಕಾರ್ಯಕ್ರಮವೂ ಅದರ ಭಾಗವೇ ಆಗಿದೆ.
* ಕೆಂಪು ಮಣ್ಣಿನ 32 ಗುಂಟೆ ಜಾಗ ಇದೆ. ಸಾಗವಾನಿ ಬೆಳೆಸಬಹುದೇ?- ಹುಸೇನಸಾಬ್, ಕವಿತಾಳ
ಸಾಗವಾನಿ ಜೊತೆಗೆ ಹುಣಸೆ ಮರ ಬೆಳೆಸಬಹುದಾಗಿದೆ. ಸಾಗುವಾನಿ ದೀರ್ಘಾವಧಿಯಲ್ಲಿ ಲಾಭ ಕೊಟ್ಟರೆ, ಹುಣಸೆ ಮರ ಕಡಿಮೆ ಅವಧಿಯಲ್ಲೇ ಫಲಕೊಡಲು ಶುರುಮಾಡುತ್ತದೆ. ಶುಭ ಕಾರ್ಯವನ್ನು ಇಂದಿನಿಂದಲೇ ಆರಂಭಿಸಿರಿ.
* ಬದುಗಳಲ್ಲಿ ಸಾಗವಾನಿ ಬೆಳೆಸಿದರೆ ಕೃಷಿಗೆ ತೊಂದರೆಯಾಗುವುದಿಲ್ಲವೆ?- ಶಿವಶರಣಯ್ಯ, ಲಿಂಗಸುಗೂರು ತಾಲ್ಲೂಕಿನ ಭೂಪೂರ.
ಸಾಗವಾನಿ ಮರಗಳು ಎತ್ತರವಾಗಿ ಬೆಳೆಯುತ್ತವೆ. ಬೇರುಗಳೂ ಆಳವಾಗಿ ಇಳಿಯುತ್ತವೆ. ನೆರಳು ಸಹ ಹೆಚ್ಚು ಬೀಳುವುದಿಲ್ಲ. ಬದುಗಳ ಮೇಲೆಯೇ ಮರ ಬೆಳೆಸಬಹುದಾಗಿದೆ.
ಆದನಗೌಡ ಪಾಟೀಲ, ಮಸ್ಕಿ ತಾಲ್ಲೂಕಿನ ವಟಗಲ್ ಬಸವರಾಜ, ಲಿಂಗಸುಗೂರು ತಾಲ್ಲೂಕಿನ ಗುರಗುಂಟಾದ ರಜಾಕ್, ಭಾವಿದೊಡ್ಡಿಯ ಮಾನಯ್ಯ, ಈಶ್ವರ, ರಾಯಚೂರಿನ ಅಪ್ಪನದೊಡ್ಡಿ, ಷಡಕ್ಷರಿ ಮಸ್ಕಿ, ಜೀವನ ಮಾನ್ವಿ, ಹೊನ್ನೇಶಕುಮಾರ, ದೇವದುರ್ಗ ತಾಲ್ಲೂಕಿನ ಗಬ್ಬೂರು, ಕೃಷಿ ಕೂಲಿಕಾರ್ಮಿಕರ ಸಂಘದ ಬಸವರಾಜ, ಶರಣಪ್ಪ, ಮಸ್ಕಿ ತಾಲ್ಲೂಕಿನ ಗುಡಿಹಾಳದ ಶರಣಪ್ಪ, ಸಿಂಧನೂರು ತಾಲ್ಲೂಕಿನ ಒಳ್ಳಬಳ್ಳಾರಿಯ ಬಸವರಾಜ, ಕವಿತಾಳದ ರಾಘವೇಂದ್ರ ಅವರೂ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು.
‘₹ 1.5 ಲಕ್ಷ ಆದಾಯ ಗಳಿಸಿದ್ದೇನೆ’
‘ಅರಣ್ಯ ಇಲಾಖೆಯಿಂದ ಪಡೆದ 100 ಲಿಂಬೆ ಸಸಿ ಹಾಗೂ 100 ಶ್ರೀಗಂಧದ ಸಸಿಗಳನ್ನು ನಮ್ಮ ಹೊಲದಲ್ಲಿ ಬೆಳೆಸಿದ್ದೇನೆ. ಲಿಂಬೆ ಗಿಡಗಳು ದೊಡ್ಡದಾಗಿ ಬೆಳೆದು ಫಲ ನೀಡುತ್ತಿವೆ. ಆಗಲೇ ನನಗೆ ₹ 1.5 ಲಕ್ಷ ಆದಾಯ ಕೈಸೇರಿದೆ. ಇದಕ್ಕಾಗಿ ಇಲಾಖೆಗೆ ಧನ್ಯವಾದಗಳು’ ಎಂದು ಕವಿತಾಳದ ರೈತ ಮಲಾಂದ್ರಗೌಡರ ಹೇಳಿದರು. ಶ್ರೀಗಂಧದ ಸಸಿಗಳು ಚೆನ್ನಾಗಿ ಬೆಳೆದಿದ್ದು 10 ವರ್ಷಗಳಲ್ಲಿ ಉತ್ತಮ ಆದಾಯ ಬರುವ ನಿರೀಕ್ಷೆ ಇದೆ ಎಂದು ಖುಷಿ ಹಂಚಿಕೊಂಡರು. ‘ಇಲಾಖೆ ನೆರವಿನಿಂದ ಸಾಧನೆ ತೋರಿದ ವಿಷಯವನ್ನು ನಿಮ್ಮ ಸುತ್ತಮುತ್ತಲಿನ ರೈತರೊಂದಿಗೆ ಹಂಚಿಕೊಳ್ಳಬೇಕು. ಇದರಿಂದ ಸಾಮೂಹಿಕವಾಗಿ ಹೆಚ್ಚಿನ ಆದಾಯ ಪಡೆಯಲು ಸಾಧ್ಯವಾಗಲಿದೆ. ಬೆಳೆಗಳಿಗೂ ಹೆಚ್ಚಿನ ರಕ್ಷಣೆ ದೊರೆಯಲಿದೆ’ ಎಂದು ಡಿಸಿಎಫ್ ಸುರೇಶ ಬಾಬು ಹೇಳಿದರು.
ಜಿಂಕೆ ಹಾವಳಿ ತಡೆಯಿರಿ
ರಾಯಚೂರು ತಾಲ್ಲೂಕಿನ ಚಿಕ್ಕಸುಗೂರು ಪರಿಸರದಲ್ಲಿ ಕೃಷ್ಣಮೃಗ ಹಾಗೂ ಜಿಂಕೆಗಳ ಹಾವಳಿ ಹೆಚ್ಚಾಗಿದೆ. ಹೊಲಗಳಲ್ಲಿನ ಬೆಳೆ ತಿಂದು ಹಾಕುತ್ತಿವೆ. ಬೆಳೆ ಹಾನಿಯಾದ ರೈತರಿಗೆ ಪರಿಹಾರ ಕೊಟ್ಟು ರೈತರಿಗೆ ನ್ಯಾಯ ಒದಗಿಸಬೇಕು ಎಂದು ಚಿಕ್ಕಸುಗೂರಿನ ನಾಗರಾಜ ಪಾಟೀಲ ಮನವಿ ಮಾಡಿದರು.
‘ಎರಡನೇ ವರ್ಷ ಪ್ರೋತ್ಸಾಹ ಧನ ಬಂದಿಲ್ಲ’
‘ಪ್ರೋತ್ಸಾಹಧನ ಯೋಜನೆ ಅಡಿಯಲ್ಲಿ ಪ್ರಾದೇಶಿಕ ಅರಣ್ಯ ವಿಭಾಗದಿಂದ ಮೂರು ವರ್ಷಗಳ ಹಿಂದೆ ನಮ್ಮ ಹೊಲದಲ್ಲಿ ಅನೇಕ ಸಸಿ ನೆಟ್ಟು ಬೆಳೆಸಿದ್ದೇನೆ. ಮೊದಲ ವರ್ಷ ಇಲಾಖೆಯಿಂದ ಪ್ರೋತ್ಸಾಹಧನ ಕೊಟ್ಟಿದ್ದಾರೆ. ಎರಡನೇ ವರ್ಷ ಹಣ ಬಿಡುಗಡೆ ಮಾಡಿಲ್ಲ’ ಎಂದು ಕವಿತಾಳದ ಮಲಾಂದ್ರಗೌಡರ ತಿಳಿಸಿದರು. ‘ಪ್ರಾದೇಶಿಕ ಅರಣ್ಯ ವಿಭಾಗದ ಕಚೇರಿ ಅಧಿಕಾರಿಗೆ ಅನೇಕ ಬಾರಿ ಮನವಿ ಮಾಡಿದ್ದೇನೆ. ಯಾವುದೇ ಉತ್ತರ ಬಂದಿಲ್ಲ. ಬಾಕಿ ಉಳಿದ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು’ ಎಂದು ಮನವಿ ಮಾಡಿದರು.
‘ಬ್ಯಾಂಕ್ ಠೇವಣಿ ಮಾದರಿಯಲ್ಲಿ ಗಿಡಗಳನ್ನು ಬೆಳೆಸಿ’
ಶ್ರೀಗಂಧ ಹಾಗೂ ಸಾಗುವಾನಿ ಸಸಿಗಳನ್ನು ಅರಣ್ಯ ಇಲಾಖೆಯೇ ಪೂರೈಸುತ್ತದೆ. ರೈತರು ಹೊಲಗಳ ಬದುಗಳಲ್ಲಿ ಹಾಗೂ ಕೃಷಿಗೆ ಯೋಗ್ಯವಲ್ಲದ ಭೂಮಿಯಲ್ಲೂ ಬೆಳೆಸಬಹುದು. ಒಮ್ಮೆ ಗಿಡ ನೆಟ್ಟು ಬೆಳೆಸಿ 15 ವರ್ಷಗಳ ನಂತರ ಮಾರಾಟ ಮಾಡಿ ಲಕ್ಷಾಂತರ ಆದಾಯ ಗಳಿಸಬಹುದು. ಮಕ್ಕಳ ಹೆಸರಲ್ಲಿ ನೆಟ್ಟರೂ ಅವರು ಪದವಿ ಪೂರ್ಣಗೊಳಿಸುವ ವೇಳೆಗೆ ನಿರೀಕ್ಷೆಗೂ ಮೀರಿದ ಆದಾಯ ಕೈಸೇರಲಿದೆ. ಇದರಿಂದ ಮಕ್ಕಳ ಭವಿಷ್ಯ ರೂಪಿಸಲು ಸಾಧ್ಯವಾಗಲಿದೆ ಎಂದು ಸುರೇಶ ಬಾಬು ಸಲಹೆ ನೀಡಿದರು. ಕೃಷಿ ಅರಣ್ಯ ಪ್ರೋತ್ಸಾಹ ಕಾರ್ಯಕ್ರಮದ ಅಡಿ ನೋಂದಾಯಿತ ಫಲಾನುಭವಿಗಳಿಗೆ ಪ್ರತಿ ಬದುಕುಳಿದ ಸಸಿಗೆ ಮೊದಲ ವರ್ಷ ₹ 35 ಎರಡನೇ ವರ್ಷ ₹ 40 ಹಾಗೂ ಮೂರನೇ ವರ್ಷ ₹ 50 ಪ್ರೋತ್ಸಾಹ ಕೊಡಲಾಗುತ್ತಿದೆ ಎಂದು ತಿಳಿಸಿದರು.
ಅರಣ್ಯ ಇಲಾಖೆಯಿಂದ ಸಾರ್ವಜನಿಕರಿಗೆ ಉಚಿತ ಸಸಿ ವಿತರಣೆ
ಜಿಲ್ಲೆಯ 7 ತಾಲ್ಲೂಕುಗಳಲ್ಲೂ ಒಟ್ಟು 7 ಸಸ್ಯ ಕ್ಷೇತ್ರಗಳಿವೆ. ಇಲ್ಲಿ ಸಾರ್ವಜನಿಕರಿಗೆ ರೈತರಿಗೆ ಸಂಘ–ಸಂಸ್ಥೆಗಳಿಗೆ ರಿಯಾಯಿತಿ ದರದಲ್ಲಿ ವಿತರಣೆ ಮಾಡುವ ಸಲುವಾಗಿ ಆಯಾ ಪ್ರದೇಶಗಳಿಗೆ ಹೊಂದಿಕೊಳ್ಳುವ ಆಯ್ದ ಜಾತಿಯ 6" x 9" ಮತ್ತು 8" x 12" ಪಾಲಿಥೀನ್ ಚೀಲಗಳಲ್ಲಿ ಸಸಿಗಳನ್ನು ಬೆಳೆಸಿ ವಿತರಿಸಲಾಗುತ್ತದೆ. ಒಂದು ವರ್ಷದ ಸಸಿಗಳನ್ನು ಕ್ರಮವಾಗಿ ₹ 3 ಹಾಗೂ ₹ 6 ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಪ್ರಸ್ತುತ ಸಸ್ಯ ಕ್ಷೇತ್ರದಲ್ಲಿ ಒಟ್ಟು 1.15 ಲಕ್ಷ ಸಸಿಗಳು ಲಭ್ಯ ಇವೆ. ಸಸಿ ನೆಡಲು ಇದು ಸಕಾಲವಾಗಿದೆ. ಸಮೀಪದ ಸಸ್ಯಕ್ಷೇತ್ರಕ್ಕೆ ಭೇಟಿ ನೀಡಿ ರಿಯಾಯಿತಿ ದರದಲ್ಲಿ ಖರಿದೀಸಬಹುದಾಗಿದೆ.
ಯರಗೇರಾದಲ್ಲಿ ಸಸ್ಯ ಸಂತೆ
ಸಾಮಾಜಿಕ ಅರಣ್ಯ ವಿಭಾಗದ ವತಿಯಿಂದ ರಾಯಚೂರು ತಾಲ್ಲೂಕಿನ ಯರಗೇರಾದಲ್ಲಿ ಮಂಗಳವಾರ ಸಸ್ಯಸಂತೆ ಏರ್ಪಡಿಸಲಾಗಿದೆ. ಸಾಗವಾನಿ ಮಹಾಗನಿ ಶ್ರೀಗಂಧ ಹಾಗೂ ಸೀತಾಫಲ ಸಸಿಗಳು ರಿಯಾಯಿತಿ ದರದಲ್ಲಿ ದೊರೆಯಲಿವೆ. ಅಧಿಕ ಪ್ರಮಾಣದಲ್ಲಿ ಸಸಿಗಳ ಅಗ್ಯವಿದ್ದರೆ ಅರಣ್ಯ ಇಲಾಖೆಯ ನರ್ಸರಿಗೆ ಭೇಟಿ ಕೊಡಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.