ಕವಿತಾಳ: ಇಲ್ಲಿಗೆ ಸಮೀಪದ ಪಾಮನಕಲ್ಲೂರು ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ದಾಸ್ತಾನು ಮುಗಿದ ಕಾರಣ ಸೋಮವಾರ ವಿವಿಧ ಹಳ್ಳಿಗಳಿಂದ ಬಿತ್ತನೆ ಬೀಜಕ್ಕಾಗಿ ಬಂದ ರೈತರು ದಿನಪೂರ್ತಿ ಕಾದು ಕುಳಿತುಕೊಳ್ಳುವಂತಾಯಿತು. ಬಿಸಿಲಿನಲ್ಲಿ ಕಾದು ನಿಂತ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅಂದಾಜು 6500 ಹೆಕ್ಟೇರ್ ತೊಗರಿ, 600 ಹೆಕ್ಟೇರ್ ಸಜ್ಜೆ ಮತ್ತು 2 ಸಾವಿರ ಹೆಕ್ಟೇರ್ ಸೂರ್ಯಕಾಂತಿ ಬಿತ್ತನೆ ಗುರಿ ಹೊಂದಿದ ಕೃಷಿ ಇಲಾಖೆ ಅಧಿಕಾರಿಗಳು 150 ಕ್ವಿಂಟಲ್ ತೊಗರಿ, 6 ಕ್ವಿಂಟಲ್ ಸಜ್ಜೆ ಮತ್ತು 4 ಕ್ವಿಂಟಲ್ ಸೂರ್ಯಕಾಂತಿ ಬಿತ್ತನೆ ಬೀಜಕ್ಕೆ ಬೇಡಿಕೆ ಸಲ್ಲಿಸಿದ್ದರು. ಅದರಲ್ಲಿ 50 ಕ್ವಿಂಟಲ್ ತೊಗರಿ, 1.80 ಕ್ವಿಂಟಲ್ ಸಜ್ಜೆ ಮತ್ತು 2.10 ಕ್ವಿಂಟಲ್ ಸೂರ್ಯಕಾಂತಿ ಬಿತ್ತನೆ ಬೀಜ ಪೂರೈಸಲಾಗಿದೆ. ಎರಡು ದಿನಗಳಿಂದ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ.
ಬೀಜ ವಿತರಣೆ ಮಾಹಿತಿ ಮೇರೆಗೆ ಸೋಮವಾರ ಬೆಳಿಗ್ಗೆ ಪಾಮನಕಲ್ಲೂರು ಸೇರಿ ವಟಗಲ್, ಪರಸಾಪುರ, ಹರ್ವಾಪುರ ಮತ್ತಿತರ ಹಳ್ಳಿಗಳಿಂದ ಆಗಮಿಸಿದ ರೈತರಿಗೆ ಕೇಂದ್ರದಲ್ಲಿ ಲಭ್ಯವಿದ್ದ ಅಲ್ಪ ಪ್ರಮಾಣದ ಸೂರ್ಯಕಾಂತಿ ಬೀಜ ವಿತರಣೆ ಮಾಡಲಾಯಿತು. ನಂತರ ರಾಯಚೂರಿನಿಂದ ಬಿತ್ತನೆ ಬೀಜ ಬರುತ್ತಿದ್ದು, ವಿತರಣೆ ಮಾಡುವುದಾಗಿ ಅಧಿಕಾರಿಗಳು ಹೇಳಿದ ಹಿನ್ನೆಲೆಯಲ್ಲಿ ರೈತರು ಅನಿವಾರ್ಯವಾಗಿ ಕಾದು ಕುಳಿತುಕೊಳ್ಳುವಂತಾಯಿತು.
‘ಗಂಡು ಮಕ್ಕಳು ದುಡಿಯಲು ಬೆಂಗಳೂರಿಗೆ ಹೋಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲ. ಕೆಲಸ ಬಿಟ್ಟು, ಊಟ ಮಾಡದೆ ತೊಗರಿ ಬೀಜಕ್ಕಾಗಿ ಬೆಳಿಗ್ಗೆಯಿಂದ ಕಾದು ಕುಳಿತಿದ್ದೇವೆ’ ಎಂದು ಬಸ್ಸಮ್ಮ ಮತ್ತು ಆದಮ್ಮ ಅಸಮಾಧಾನ ವ್ಯಕ್ತಪಡಿಸಿದರು.
‘ಕೆಲಸ ಬಿಟ್ಟು ಬಂದಿದ್ದೇವೆ. ಬೀಜ ಬಂದ ನಂತರ ತೆಗೆದುಕೊಂಡು ಹೋಗುವುದು ಅನಿವಾರ್ಯ. ಅಧಿಕಾರಿಗಳು ಮೊದಲೇ ಮಾಹಿತಿ ನೀಡಿದ್ದರೆ ಮತ್ತೊಂದು ದಿನ ಬರುತ್ತಿದ್ದೆವು’ ಎಂದು ಪರಸಾಪುರ ಗ್ರಾಮದ ರೈತ ಗುಂಡಪ್ಪಗೌಡ ಹೇಳಿದರು.
‘ರಾಯಚೂರಿನಿಂದ ಬಿತ್ತನೆ ಬೀಜ ಬರಬೇಕಿದೆ ದಾರಿಯಲ್ಲಿ ಅಲ್ಲಲ್ಲಿ ಬೇಡಿಕೆ ಇದ್ದರೆ ಪೂರೈಸುವುದರಿಂದ ಲಾರಿ ಬರುವುದು ವಿಳಂಬವಾಗಿದೆ. ದಾಸ್ತಾನು ಬಂದ ತಕ್ಷಣ ರೈತರಿಗೆ ಬೀಜ ವಿತರಿಸಲಾಗುವುದು’ ಎಂದು ಸಹಾಯಕ ಕೃಷಿ ಅಧಿಕಾರಿ ಬಸವರಾಜ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.