ADVERTISEMENT

ಬಳ್ಳಾರಿಯಲ್ಲಿ ಕರ್ನೂಲ್‌ ಸೇರ್ಪಡೆಗೆ ಟಿಡಿಪಿ ಹೋರಾಟ

​ಪ್ರಜಾವಾಣಿ ವಾರ್ತೆ
Published 3 ಜನವರಿ 2020, 2:23 IST
Last Updated 3 ಜನವರಿ 2020, 2:23 IST
ನಕ್ಷೆ (Map Courtesy: Google Maps)
ನಕ್ಷೆ (Map Courtesy: Google Maps)   

ರಾಯಚೂರು: ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯನ್ನು ಬಳ್ಳಾರಿಯೊಂದಿಗೆ ಸೇರ್ಪಡೆಗೊಳಿಸಬೇಕು ಎಂದು ತೆಲುಗು ದೇಶದ ಪಕ್ಷ (ಟಿಡಿಪಿ) ಮಂತ್ರಾಲಯ ಘಟಕದ ಮುಖಂಡ ಪಿ.ತಿಕ್ಕರೆಡ್ಡಿ ನೇತೃತ್ವದಲ್ಲಿ ಮಂತ್ರಾಲಯ ಸೇರಿದಂತೆ ವಿವಿಧೆಡೆ ಗುರುವಾರ ಪ್ರತಿಭಟನೆ ಆರಂಭಿಸಲಾಗಿದೆ.

ಆಂಧ್ರಪ್ರದೇಶ ರಾಜಧಾನಿ ಕೇಂದ್ರವನ್ನು ಮೂರು ಕಡೆಗಳಲ್ಲಿ ವಿಂಗಡನೆ ಮಾಡಿರುವುದಕ್ಕೆ ಅಸಮಾಧಾನ ತಾಳಿರುವ ತೆಲುಗುದೇಶಂ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದು, ಕರ್ನೂಲ್‌ 1956 ರವರೆಗೂ ಬಳ್ಳಾರಿ ವಿಭಾಗದಲ್ಲಿಯೇ ಇತ್ತು. ಈಗಲೂ ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಇಲ್ಲಿನ ಜನರು ಮೈಗೂಡಿಸಿಕೊಂಡಿದ್ದಾರೆ. ತುಂಗಭದ್ರಾ ಡ್ಯಾಂನಿಂದ ಈ ಭಾಗಕ್ಕೆ ನೀರಾವರಿ ಅನುಕೂಲವೂ ಇದೆ. ಕೂಡಲೇ ಕರ್ನೂಲ್‌ನ್ನು ಕರ್ನಾಟಕಕ್ಕೆ ಸೇರ್ಪಡೆಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

‘ಆಂಧ್ರಪ್ರದೇಶದ ಸಹವಾಸವೇ ಬೇಡ. ನಮಗೆ ಬೆಂಗಳೂರು ರಾಜಧಾನಿಯಾಗಿದ್ದರೆ ಹೆಚ್ಚು ಅನುಕೂಲ. ದೂರದ ವಿಶಾಖಪಟ್ಟಣ ರಾಜಧಾನಿಗೆ ಹೋಗಿ ಬರುವುದಕ್ಕೆ ಎರಡು ದಿನಗಳು ಬೇಕಾಗುತ್ತದೆ. ಆಂಧ್ರಪ್ರದೇಶದಲ್ಲಿ ಮೂರು ರಾಜಧಾನಿಗಳನ್ನು ಮಾಡುವುದರಿಂದ ಜನರು ನೆಮ್ಮದಿಯಿಂದ ಇರುವುದಕ್ಕೆ ಸಾಧ್ಯವಾಗುವುದಿಲ್ಲ’ ಎಂದು ಪಿ.ತಿಕ್ಕರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಕರ್ನೂಲ್‌ನಲ್ಲಿ ಹೈಕೋರ್ಟ್‌ ಮಾಡುವುದಾಗಿ ಮುಖ್ಯಮಂತ್ರಿ ಜಗನಮೋಹನ್‌ ಹೇಳುತ್ತಿದ್ದಾರೆ. ಅದು ಅಷ್ಟು ಸುಲಭವೂ ಇಲ್ಲ. ಹೈಕೋರ್ಟ್‌ ಆಗುವುದರಿಂದ ಜನಸಾಮಾನ್ಯರಿಗೆ ಅನುಕೂಲವಿಲ್ಲ, ಅಭಿವೃದ್ಧಿಯೂ ಆಗುವುದಿಲ್ಲ. ಮಕ್ಕಳ ವಿದ್ಯಾಭ್ಯಾಸ ಮತ್ತು ನೀರಾವರಿ ದೃಷ್ಟಿಯಿಂದ ಕರ್ನಾಟಕವೇ ಅನುಕೂಲಕರವಾಗಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.