ರಾಯಚೂರು: ಆನೆಗೊಂದಿ ನಡುಗಡ್ಡೆಯ ನವಬೃಂದಾವನಗಳಲ್ಲಿ ಒಂದಾದ ವ್ಯಾಸರಾಜ ಗುರುಸಾರ್ವಭೌಮರ ಮೂಲ ಬೃಂದಾವನವನ್ನು ನಾಶಗೊಳಿಸಿದ ದುಷ್ಕರ್ಮಿಗಳನ್ನು ಸರ್ಕಾರ ಮತ್ತು ಜಿಲ್ಲಾಡಳಿತ ತನಿಖೆಯಿಂದ ಪತ್ತೆಹಚ್ಚಿ ಶಿಕ್ಷಿಸಬೇಕು ಎಂದು ಮಂತ್ರಾಲಯದ ಶ್ರೀ ರಾಘವೇಂದ್ರ ಮಠದ ಸುಬುಧೇಂದ್ರ ತೀರ್ಥ ಸ್ವಾಮೀಜಿ ಒತ್ತಾಯಿಸಿದರು.
ಮಂತ್ರಾಲಯದಿಂದ ಆನೆಗೊಂದಿಗೆ ತೆರಳುವ ಮಾರ್ಗಮಧ್ಯೆ ರಾಯಚೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಹಿಂದು ಸಂಸ್ಕೃತಿಯ ಶ್ರದ್ಧಾಕೇಂದ್ರದ ಮೇಲಿನ ಅಪಚಾರ ಖಂಡನೀಯ. ಹಿಂದು ಸಮಾಜಕ್ಕೆ ಅದರಲ್ಲೂ ಮಾಧ್ವ ಸಮಾಜಕ್ಕೆ ಇಂದು ಕರಾಳ ದಿನವಾಗಿ ಮಾರ್ಪಟ್ಟಿದೆ. ಸುದ್ದಿ ತಿಳಿದ ತಕ್ಷಣ ವ್ಯಾಕುಲಗೊಂಡು ಅನ್ನ ತ್ಯಜಿಸಿ ಆನೆಗೊಂದಿಗೆ ಪ್ರಯಾಣಿಸಲು ತೀರ್ಮಾಸಿದ್ದೇನೆ’ ಎಂದರು.
ಪ್ರತಿಯೊಬ್ಬರೂ ಈ ದುಷ್ಕೃತ್ಯ ಖಂಡಿಸಬೇಕು ಹಾಗೂ ಶಾಂತಿಯುತವಾಗಿ ಪ್ರತಿಭಟಿಸಬೇಕು ಎಂದು ಕರೆ ನೀಡಿದ ಅವರು, ಮೂಲ ಬೃಂದಾವನದ ಪುನರ್ ನಿರ್ಮಾಣಕ್ಕೆ ಅಗತ್ಯವಾಗುವ ಧಾರ್ಮಿಕ ವಿಧಿವಿಧಾನಗಳ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು. ಹಿಂದು ಶ್ರದ್ಧಾ ಕೇಂದ್ರಗಳಿಗೆ ಸಿಸಿಟಿವಿ ಸೇರಿದಂತೆ ಇತರೆ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು.
ಇದನ್ನೂ ಓದಿ:ತನಿಖೆಗೆ ಉತ್ತರಾದಿಮಠದ ಸತ್ಯಾತ್ಮತೀರ್ಥರ ಆಗ್ರಹ
ಮಠಗಳ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಸಂಕುಚಿತ ಮನೋಭಾವ ಇಟ್ಟುಕೊಂಡಿಲ್ಲ. ಎಲ್ಲ ಸ್ವಾಮೀಜಿಗಳು ಮುಕ್ತ ಮನಸ್ಸಿನಿಂದ ಈ ದುಷ್ಕೃತ್ಯದ ಬಗ್ಗೆ ಚರ್ಚಿಸಲು ಆನೆಗೊಂದಿಯಲ್ಲಿ ಸೇರುತ್ತಿದ್ದೇವೆ. ಉತ್ತರಾದಿಮಠ ಮತ್ತು ವ್ಯಾಸರಾಜಮಠದ ಸ್ವಾಮಿಗಳು ಮತ್ತು ಭಕ್ತರುಅಲ್ಲಿಗೆ ಬರುತ್ತಿದ್ದಾರೆ. ಬೃಂದಾವನಗಳನ್ನು ಸುರಕ್ಷಿತವಾಗಿ ಕಾಪಾಡಲು ಮಂತ್ರಾಲಯ ಮಠದಿಂದ ಎಲ್ಲ ರೀತಿಯ ನೆರವು, ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ನ್ಯಾಯಾಲಯದಲ್ಲಿರುವ ವಿಷಯವನ್ನು ಹೊರಗೆ ಮಾತನಾಡುವುದಿಲ್ಲ. ಆದರೆ, ಶ್ರದ್ಧಾಕೇಂದ್ರದ ಮೇಲೆ ನಡೆದ ದುಷ್ಕೃತ್ಯವನ್ನು ಎಲ್ಲ ಸ್ವಾಮೀಜಿಗಳು ಖಂಡಿಸಿ, ಚರ್ಚಿಸುತ್ತೇವೆ. ಭಕ್ತರು ಕೂಡಾ ಆನೆಗೊಂದಿಗೆ ಬಂದು ಶ್ರಮದಾನ ಮಾಡಬೇಕು. ಅಲ್ಲಿನ ಪರಿಸರದ ಸ್ವಚ್ಛತೆ ಹಾಗೂ ಪುನರ್ ನಿರ್ಮಾಣ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.