ADVERTISEMENT

ಪಿಡಿಒ ಹುದ್ದೆ ಪರೀಕ್ಷೆ: ಗೊಂದಲ ಸೃಷ್ಟಿಸಿದ ಆರೋಪ; 12 ಮಂದಿ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2024, 23:05 IST
Last Updated 18 ನವೆಂಬರ್ 2024, 23:05 IST
FIR.
FIR.   

ಸಿಂಧನೂರು (ರಾಯಚೂರು ಜಿಲ್ಲೆ): ಕರ್ನಾಟಕ ಲೋಕಸೇವಾ ಆಯೋಗದಿಂದ ಭಾನುವಾರ ಸಿಂಧನೂರು ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ನಡೆದ ಪಿಡಿಒ ಹುದ್ದೆಗಳ ಪರೀಕ್ಷೆಯಲ್ಲಿ ಕೆಲ ಪರೀಕ್ಷಾರ್ಥಿಗಳು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಪ್ರತಿಭಟಿಸಿ ಗೊಂದಲ ಸೃಷ್ಟಿಸಿದ ಆರೋಪದ ಮೇಲೆ 12 ಪರೀಕ್ಷಾರ್ಥಿ ಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಪಶುಪತಿ ಎಂಬ ಪರೀಕ್ಷಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಶ್ನೆ ಪತ್ರಿಕೆಗಳನ್ನು ವಿತರಿಸುವ ಸಮಯದಲ್ಲಿ ಪಶುಪತಿ ಎಂಬ ಪರೀಕ್ಷಾರ್ಥಿ ಪ್ರಶ್ನೆ ಪತ್ರಿಕೆಯ ಬಂಡಲ್‌ ಮೊದಲೇ ತೆಗೆಯಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಿ, ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಕೂಗಿ ಉಳಿದ ಪರೀಕ್ಷಾರ್ಥಿಗಳನ್ನು ಪ್ರಚೋದಿಸಿದ್ದಾರೆ. ಸಿಂಧನೂರು–ಕುಷ್ಟಗಿ ಮುಖ್ಯ ಹೆದ್ದಾರಿಯಲ್ಲಿ ಕುಳಿತು ವಾಹನ ಸಂಚಾರ ತಡೆದು ಪ್ರತಿಭಟಿಸಿ, ಪರೀಕ್ಷೆ ನಡೆಸಲು ತೊಂದರೆ ನೀಡಿದ್ದಾರೆ. ಪಶುಪತಿಯ ಜೊತೆಗೆ ಸುರಪುರದ ಬಾಬು, ಅಯ್ಯನಗೌಡ, ಅಮಿತ್, ವೆಂಕಟೇಶ್, ರವಿಶಂಕರ್, ವಿಶ್ವರಾಧ್ಯ, ಬಸವರಾಜ್, ವೆಂಕಟೇಶ್, ರಾಘವೇಂದ್ರ, ಸಾಬರೆಡ್ಡಿ ಅವರು ಸಹ ಪರೀಕ್ಷಾ ಕೊಠಡಿಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಬಸವರಾಜ್ ತಡಕಲ್ ಅವರು ಶಹರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸ್ ಇನ್‌ಸ್ಪೆಕ್ಟರ್ ದುರುಗಪ್ಪ ಡೊಳ್ಳಿನ್ ತನಿಖೆ ಕೈಗೊಳ್ಳುತ್ತಿದ್ದಾರೆ.

ಇಂದು ಪ್ರತಿಭಟನೆ: ಪಿಡಿಒ ಹುದ್ದೆಗಳ ಪರೀಕ್ಷಾ ಕೇಂದ್ರದಲ್ಲಿ ಪಶ್ನೆ ಪತ್ರಿಕೆ ವಿತರಣೆಯಲ್ಲಿ ವಿಳಂಬ, ಸೋರಿಕೆ ಆಗಿದೆ ಎಂಬ ಗೊಂದಲದ ಬಗ್ಗೆ ತನಿಖೆ ನಡೆಸಬೇಕು ಹಾಗೂ ಪ್ರತಿಭಟಿಸಿದ ಪರೀಕ್ಷಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ದಲಿತ ವಿದ್ಯಾರ್ಥಿ ಪರಿಷತ್ ತಾಲ್ಲೂಕು ಘಟಕದಿಂದ ನವೆಂಬರ್‌ 19ರಂದು ಬೆಳಿಗ್ಗೆ 10.30 ಗಂಟೆಗೆ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ ಜಿಲ್ಲಾ ಘಟಕದ ಸಂಚಾಲಕ ಮೌನೇಶ ಜಾಲವಾಡಗಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.