ADVERTISEMENT

ಮುದಗಲ್‌ ಪಟ್ಟಣದಲ್ಲಿ ಫ್ಲೆಕ್ಸ್‌ ಹಾವಳಿ, ಸೌಂದರ್ಯಕ್ಕೆ ಧಕ್ಕೆ

ಶರಣ ಪ್ಪ ಆನೆಹೊಸೂರು
Published 5 ನವೆಂಬರ್ 2022, 7:33 IST
Last Updated 5 ನವೆಂಬರ್ 2022, 7:33 IST
ಮುದಗಲ್ ಪಟ್ಟಣದಲ್ಲಿ ದೀಪಾವಳಿ, ಕರ್ನಾಟಕ ರಾಜ್ಯೋತ್ಸವ ಹಬ್ಬಕ್ಕೆ ಶುಭಾಶಯ ಕೋರುವ ಮುಖಂಡರ ಫ್ಲೆಕ್ಸ್‌ಗಳು
ಮುದಗಲ್ ಪಟ್ಟಣದಲ್ಲಿ ದೀಪಾವಳಿ, ಕರ್ನಾಟಕ ರಾಜ್ಯೋತ್ಸವ ಹಬ್ಬಕ್ಕೆ ಶುಭಾಶಯ ಕೋರುವ ಮುಖಂಡರ ಫ್ಲೆಕ್ಸ್‌ಗಳು   

ಮುದಗಲ್: ಪಟ್ಟಣದಲ್ಲಿ ಎಲ್ಲೆಂದರಲ್ಲಿ ಫ್ಲೆಕ್ಸ್‌ಗಳನ್ನು ಹಾಕಲಾಗಿದ್ದು, ಇದರಿಂದಾಗಿ ಪಟ್ಟಣದ ಸೌಂದರ್ಯ ಹಾಳಾಗುತ್ತಿದೆ. ಜೊತೆಗೆ ವಾಹನ ಸವಾರರಿಗೆ ಮತ್ತು ಜನರ ಸುಗಮ ಸಂಚಾರಕ್ಕೂ ತೊಂದರೆಯಾಗುತ್ತಿದೆ.

ದಸರಾ, ದೀಪಾವಳಿ, ಕರ್ನಾಟಕ ರಾಜ್ಯೋತ್ಸವ ಹಬ್ಬಕ್ಕೆ ಶುಭಾಶಯ ಕೋರುವ ಫ್ಲೆಕ್ಸ್‌ಗಳು ಪ್ರಮುಖ ವೃತ್ತಗಳಲ್ಲಿ ಕಾಣುತ್ತಿವೆ. ಅನುಮತಿ ಪಡೆಯದೆ ಹಾಕಿದ ಫ್ಲೆಕ್ಸ್‌ಗಳ ಸಂಖ್ಯೆಯೇ ಜಾಸ್ತಿ ಸಂಖ್ಯೆಯಲ್ಲಿ ಇರುವುದರಿಂದ ಪುರಸಭೆಗೆ ನಿರೀಕ್ಷಿತ ಆದಾಯ ಬರುತ್ತಿಲ್ಲ.

ವಿವಿಧ ಹಬ್ಬಗಳು, ಶಾಸಕರು, ಮಾಜಿ ಶಾಸಕರು ಹಾಗೂ ವಿವಿಧ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಸೇರಿದಂತೆ ರಾಜಕೀಯ ಗಣ್ಯರ ಜನ್ಮದಿನಗಳ ಆಚರಣೆಗೆ, ಕಾರ್ಯಕ್ರಮಗಳ ಆಯೋ
ಜನೆಯ ಫ್ಲೆಕ್ಸ್‌ಗಳನ್ನು ಹಾಕಲಾಗುತ್ತದೆ.

ADVERTISEMENT

ಪೊಲೀಸ್ ಠಾಣೆ, ಪುರಸಭೆ ಮುಂದೆ, ಮಸ್ಕಿ ರಸ್ತೆ, ಯೋಗೇಶಪ್ಪ ಅಂಗಡಿ ಮುಂಭಾಗ ಸೇರಿದಂತೆ ವಿವಿಧೆಡೆ ಸದಾ ಫ್ಲೆಕ್ಸ್‌ಗಳನ್ನು ಕಾಣ ಬಹುದಾಗಿದೆ. ಆದರೆ, ಅನುಮತಿ ಪಡೆಯುವವರ ಸಂಖ್ಯೆ ಬಹಳ ಕಡಿಮೆ. ಶುಭಾಶಯ ಕೋರುವ ಫ್ಲೆಕ್ಸ್‌ಗಳನ್ನು ಹಾಕುವ ಬಹುತೇಕರು ಅವುಗಳನ್ನು ಜನ್ಮದಿನ ಮುಗಿದ ನಂತರವೂ ತೆರವುಗೊಳಿಸುವ ಗೋಜಿಗೆ ಹೋಗುವುದಿಲ್ಲ. ಅವುಗಳನ್ನು ತಿಂಗಳುಗಟ್ಟಲೇ ಹಾಗೆಯೇ ಬಿಟ್ಟಿರುತ್ತಾರೆ. ಪುರಸಭೆ ಸಿಬ್ಬಂದಿಯೇ ಅವುಗಳನ್ನು ತೆರವುಗೊಳಿಸಬೇಕು.

ಪುರಸಭೆಗೆ ವರ್ಷಕ್ಕೆ ಫ್ಲೆಕ್ಸ್‌ಗಳಿಂದ ಕನಿಷ್ಟ ಆದಾಯ ಬಂದಿರುವುದೆ ಕಡಿಮೆ. ಅನಧಿಕೃತ ಹಾಕುವ ಅವುಗಳನ್ನು ತೆಗೆಯಲು ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಖರ್ಚಾಗುತ್ತದೆ. ಜನಪ್ರತಿನಿಧಿಗಳ ಹಿಂಬಾಲಕರು, ಪ್ರಭಾವಿಗಳು, ಸಂಘ–ಸಂಸ್ಥೆಯವರೇ ಹೆಚ್ಚಿನ ಪ್ರಮಾಣದಲ್ಲಿ ಹಾಕುವುದರಿಂದ ಅಧಿಕಾರಿಗಳು ಅವರ ವಿರುದ್ಧ ಕ್ರಮಕೈಗೊಳ್ಳಲು ಹೋಗುವುದಿಲ್ಲ.

ವಾಣಿಜ್ಯ ಉದ್ದೇಶದ ಫ್ಲೆಕ್ಸ್‌ಗಳು ಕೆಲವೆಡೆ ಹಾಕಲಾಗುತ್ತದೆ. ಇವುಗಳಲ್ಲಿ ಕೆಲವರು ಅನುಮತಿ ಪಡೆದು ಹಾಕಿದರೆ ಇನ್ನೂ ಕೆಲವರು ಅನುಮತಿ ಇಲ್ಲದೆ ಹಾಕುತ್ತಾರೆ. ಇವರಿಗೆ ಪುರಸಭೆಯ ಅನುಮತಿ ಪಡೆಯಬೇಕು ಎನ್ನುವುದು ಅನೇಕರಿಗೆ ತಿಳಿದಿಲ್ಲ. ಈ ಬಗ್ಗೆ ಪುರಸಭೆ ಜಾಗೃತಿ ಮೂಡಿಸಬೇಕು. ಆದರೆ, ಈ ಬಗ್ಗೆ ಮಾಹಿತಿ ಇರುವ ಪ್ರಭಾವಿಗಳು ತಮಗೆ ಯಾವುದೇ ನಿಯಮಾವಳಿಗಳು ಅನ್ವಯಿಸುವುದಿಲ್ಲ ಎನ್ನುವಂತೆ ವರ್ತಿಸುತ್ತಾರೆ.

’ಫ್ಲೆಕ್ಸ್‌ಗಳ ಪ್ರದರ್ಶನಕ್ಕೆ ಪುರಸಭೆ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ, ಮೇಲ್ವಿಚಾರಣೆ ಮಾಡಿದರೆ ಪಟ್ಟಣದ ಸೌಂದರ್ಯ ಕಾಪಾಡುವುದರ ಜತೆಗೆ ಪುರಸಭೆಗೆ ಆದಾಯವೂ ಬರುತ್ತದೆ. ಆದರೆ ಈಗ ಅಳವಡಿಸಿರುವ ಫ್ಲೆಕ್ಸ್‌ಗಳ ಪೈಕಿ ಶೇ 10ರಷ್ಟು ಕೂಡಾ ಅನುಮತಿ ಪಡೆದಿರುವುದಿಲ್ಲ‘ ಎಂದು ಪುರಸಭೆ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.