ರಾಯಚೂರು: ಶಕ್ತಿದೇವತೆಯ ಪೂಜೆಗೆ ಹೂವೇ ಭೂಷಣ. ನವರಾತ್ರಿ ಪ್ರಯುಕ್ತ ದೇವಿಗೆ ಒಂಬತ್ತು ದಿನವೂ ವಿಶೇಷ ಅಲಂಕಾರ ಮಾಡುತ್ತಿರುವ ಕಾರಣ ದೇವರಿಗೆ ಹೆಚ್ಚು ಹೂವು ಬಳಕೆಯಾಗುತ್ತಿದೆ. ಆಯುಧ ಪೂಜೆಗೂ ಹೂವು ಅಗತ್ಯವಿರುವುದರಿಂದ ಮಾರುಕಟ್ಟೆಯಲ್ಲಿ ಹೂವು, ಹಣ್ಣುಹಂಪಲಗಳ ಖರೀದಿ ಭರಾಟೆ ಜೋರಾಗಿದೆ.
ಚೆಂಡುಹೂವಿನ ಗಿಡ, ಬಾಳೆಗಿಡ, ಮಾವಿನ ಎಲೆ, ಹೂವಿನ ಸರಗಳು ಹಾಗೂ ಹೂವಿನ ವ್ಯಾಪಾರ ಜೋರಾಗಿ ನಡೆದಿದೆ. ಬೆಲೆ ಹೆಚ್ಚಳವನ್ನೂ ಲೆಕ್ಕಿಸದೇ ಗ್ರಾಹಕರು ಹೂವು, ಹಣ್ಣು ಖರೀದಿಸುತ್ತಿದ್ದಾರೆ. ಗುರುವಾರ ಗಣ್ಯರು, ಅಡತ ವ್ಯಾಪಾರಿಗಳು ಹಾಗೂ ವಾಹನಗಳ ಚಾಲಕರು ಬಾಳೆಗಳ ಜತೆ ಬಾಳೆ ಗೊನೆಗಳನ್ನು ಖರೀದಿಸಿದರು.
ತೀನಖಂದಿಲ್, ಮಹಾವೀರ ವೃತ್ತ ಬಳಿಯ ಮಾರುಕಟ್ಟೆಗಳಲ್ಲಿ ಹಲವು ಬಗೆಯ ಹಣ್ಣುಗಳನ್ನು ಮಾರಾಟಕ್ಕೆ ಇಡಲಾಗಿದ್ದು, ಶಕ್ತಿದೇವತೆಗಳ ಭಕ್ತರು ಪೂಜೆಗಾಗಿ ಐದರಿಂದ 11 ಬಗೆಯ ಹಣ್ಣುಗಳನ್ನು ಖರೀದಿಸಿ ಮನೆಗೆ ಒಯ್ದರು.
ಬಾಳೆಗಿಡ ಚಿಕ್ಕದು ಎರಡಕ್ಕೆ ₹ 50ರಿಂದ ₹ 80, ಐದು ಕಬ್ಬಿಗೆ ₹ 100 ಹಾಗೂ ಚೆಂಡು ಹೂವು ಪ್ರತಿ ಕೆಜಿಗೆ ₹100ರಂತೆ ಮಾರಾಟವಾಗುತ್ತಿದೆ. ವಾಹನಗಳ ಮಾಲೀಕರು ಹಾಗೂ ಚಾಲಕರು ಚೌಕಾಶಿ ಮಾಡಿ ಬಾಳೆಗಿಡ, ಕಬ್ಬು ಹಾಗೂ ಹೂವಿನ ಸರಗಳನ್ನು ಖರೀದಿಸಿದರು.
ಸ್ಟೇಷನ್ ರಸ್ತೆಯಲ್ಲಿ ವಾಹನಗಳಲ್ಲಿ ಮಾರಾಟಕ್ಕೆ ತಂದಿದ್ದ ಕಬ್ಬು, ಬಾಳೆಗಿಡಗಳನ್ನು ಜನರು ಖರೀದಿ ಮಾಡಿದರು, ಶುಕ್ರವಾರ ಆಯುಧ ಪೂಜೆ ಹಾಗೂ ಶನಿವಾರ ವಿಜಯ ದಶಮಿ ಆಚರಣೆಗೆ ಸಿದ್ಧತೆ ಮಾಡಿಕೊಂಡರು.
ಕಳೆದ ವಾರಕ್ಕಿಂತ ಈ ವಾರ ಹಣ್ಣಿನ ಬೆಲೆಗಳಲ್ಲಿ ಸಹಜವಾಗಿ ಹೆಚ್ಛಳವಾಗಿದೆ. ಬೇಡಿಕೆ ಇದ್ದಾಗ ಮಾರುಕಟ್ಟೆಗೆ ಬರುವ ಹಣ್ಣುಗಳ ಬೆಲೆ ಹೆಚ್ಚಾಗಿರುತ್ತದೆ. ಹಬ್ಬದ ಸಂದರ್ಭದಲ್ಲಿ ತುಸು ಲಾಭ ಪಡೆಯುವ ಉದ್ದೇಶದಿಂದ ವ್ಯಾಪಾರಸ್ಥರು ಸಹ ಕೊಂಚ ಬೆಳೆ ಏರಿಸಿದ್ದಾರೆ. ಹೀಗಾಗಿ ಸಹಜವಾಗಿ ಹಣ್ಣು ಹಂಪಲಗಳ ಬೆಲೆಯಲ್ಲಿ ಹೆಚ್ಚಳವಾಗಿದೆ ಎಂದು ಹಣ್ಣಿನ ವ್ಯಾಪಾರಿ ವೀರೇಶ ಹೇಳಿದರು.
ಹಣ್ಣುಗಳು– ಕಳೆದ ವಾರ–ವಾರ
(ರೂಪಾಯಿಗಳಲ್ಲಿ)
ಸೇಬು 100 -100
ಮೊಸಂಬಿ 80-80
ಸಂತ್ರಾ 100-200
ದಾಳಿಂಬೆ 180-200
ಅಂಜೂರು 200-180
ಚಿಕ್ಕು 120-150
ಬಾಳೆಹಣ್ಣು 100–120
ಸೀತಾಫಲ 50-100
ದ್ರಾಕ್ಷಿ 50-60
ಅಂಜೂರು 200-180
ಬಾಳೆಹಣ್ಣು 50 ಡಜನ್
ಪೇರಲ ಹಣ್ಣು 100-120
ಕುಂಬಳ ಕಾಯಿ 80-120
ಮಾರುಕಟ್ಟೆಗೆ ಕಳೆ ತಂದ ಹೂವು
ಮಳೆ ಕೊರತೆ ಬೆಳೆಗೆ ನೀರಿಲ್ಲದೇ ರೈತರು ಸಂಕಷ್ಟದಲ್ಲಿದ್ದರೂ ಆಯುಧ ಪೂಜೆಗೆ ಅಗತ್ಯ ಪೂಜಾ ಸಾಮಗ್ರಿಗಳನ್ನು ಖರೀದಿಸಿದರು. ಸಿರವಾರ ಮಾರುಕಟ್ಟೆಯಲ್ಲಿ ಒಂದು ಮಾರು ಸೇವಂತಿ ಮಾಲೆ ದರ ₹100ದಿಂದ ₹200ಕ್ಕೆ ಏರಿಕೆ ಮಲ್ಲಿಗೆ ₹80 ಯಿಂದ ₹150 ಹೂವಿನ ಹಾರ ₹60 ರಿಂದ ₹150 ಪಂಚರಂಗಿ ಸರ ₹150 ರಿಂದ ₹ 400 ಗುಲಾಬಿ ಮಾಲೆ ₹250 ರಿಂದ ₹500ಕ್ಕೆ ಏರಿಕೆಯಾಗಿದೆ. ಬಾಳೆಹಣ್ಣು ಡಜನ್ ಗೆ ₹ 50 ಏಲಕ್ಕಿ ಬಾಳೆಹಣ್ಣು ಕೆಜಿ ₹100 ಕರಿ ದ್ರಾಕ್ಷಿ ಮತ್ತು ಹಸಿರು ದ್ರಾಕ್ಷಿ ₹160 ಕೆಜಿ ಮೊಸಂಬಿ ಕೆಜಿಗೆ ₹100 ಒಂದು ಸೇಬಿಗೆ ₹20 ದಾಳಿಂಬೆಗೆ ₹30 ರಿಂದ ₹40ರಂತ ಮಾರಾಟವಾಗುತ್ತಿದೆ. ಶ್ರೀಮಂತರು ಬಾಳೆ ಗೊನೆಗಳನ್ನೇ ಖರೀದಿಸಿ ಒಯ್ಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.