ADVERTISEMENT

ಜಾನಪದ ಕಲೆ, ಸಾಹಿತ್ಯ ಪೋಷಿಸಿ: ಶಾಸಕ ಪ್ರತಾಪಗೌಡ ಪಾಟೀಲ್

ಜಾನಪದ ಕಲಾ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2022, 12:47 IST
Last Updated 31 ಮಾರ್ಚ್ 2022, 12:47 IST
ಮಸ್ಕಿಯಲ್ಲಿ ಗುರುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಹುರೂಪಿ ಚೌಡಯ್ಯ ಹಗಲು ವೇಷಗಾರರ ಸಂಘದ ಸಹಯೋಗದೊಂದಿಗೆ ನಡೆದ ಜಾನಪದ ಕಲಾ ಸಂಭ್ರಮ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿದರು
ಮಸ್ಕಿಯಲ್ಲಿ ಗುರುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಹುರೂಪಿ ಚೌಡಯ್ಯ ಹಗಲು ವೇಷಗಾರರ ಸಂಘದ ಸಹಯೋಗದೊಂದಿಗೆ ನಡೆದ ಜಾನಪದ ಕಲಾ ಸಂಭ್ರಮ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿದರು   

ಮಸ್ಕಿ: ಟಿ.ವಿ. ಮೊಬೈಲ್ ನಂತಹ ಆಧುನಿಕ ಯುಗದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಜಾನಪದ ಕಲೆ ತನ್ನ ಸ್ವಂತಿಕೆ ಉಳಿಸಿಕೊಂಡಿದೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.

ಪಟ್ಟಣದ ಗಚ್ಚಿನಮಠದಲ್ಲಿ ಬಹುರೂಪಿ ಚೌಡಯ್ಯ ಹಗಲುವೇಷಗಾರರ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಯಚೂರು ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಡೆದ ಜಾನಪದ ಕಲಾ ಸಂಭ್ರಮ- 2022 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳ ತತ್ವಪದ, ಶೋಬಾನ ಪದ ಸೇರಿದಂತೆ ಅನೇಕ ಹಾಡುಗಳು ಜಾನಪದವನ್ನು ಉಳಿಸಿವೆ. ಇದನ್ನು ಎಲ್ಲರೂ ಪಾಲಿಸಬೇಕು ಎಂದರು.

ADVERTISEMENT

ಜಾನಪದ ಕಲಾವಿದರಿಗೆ ಗುರುತಿನ ಚೀಟಿ ನೀಡುವ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರೊಂದಿಗೆ ಚರ್ಚಿಸಿ ಚೀಟಿ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ಮಾತನಾಡಿ, ‘ಕಲಾವಿದರು ದುಶ್ಚಟಗಳನ್ನು ಬಿಟ್ಟು ಕಲೆಯನ್ನು ತಮ್ಮ ಕಾಯಕವನ್ನು ಮಾಡಿಕೊಂಡರೆ ಅವಕಾಶಗಳು ಮನೆ ಬಾಗಿಲಿಗೆ ಬರುತ್ತವೆ’ ಎಂದರು.

ಜಾನಪದ ಅಕಾಡೆಮಿ ಸದಸ್ಯ ನಾರಾಯಣಪ್ಪ ಮಾಡಸಿರವಾರ, ಡಾ.ಶಿವಶರಣಪ್ಪ ಇತ್ಲಿ, ಸಾಹಿತಿ ಸಿ.ದಾಸಪ್ಪ, ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಜಂಬಣ್ಣ ಹಸಮಕಲ್, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಆದಪ್ಪ ಹೆಂಬಾ, ಬಹುರೂಪಿ ಚೌಡಯ್ಯ ಹಗಲು ವೇಷಗಾರರ ಸಂಘದ ಅಧ್ಯಕ್ಷ ಅಮರೇಶ ಹಸಮಕಲ್ ಇತರರು ಇದ್ದರು.

ಡೊಳ್ಳು ಕುಣಿತ, ಹಲಿಗೆ ಮೇಳಾ, ತತ್ವ ಪದ, ಗೀಗಿಪದ, ಹಗಲು ವೇಷಗಾರರ ತಂಡ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಪ್ರದರ್ಶನ ನೀಡಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.