ರಾಯಚೂರು: ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ , ನೆಹರು ಯುವಕ ಕೇಂದ್ರ ಹಾಗೂ ಯುವ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಇಲ್ಲಿಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಜಾನಪದ ಲೋಕವೇ ಅನಾವರಣಗೊಂಡಿತು.
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ತಂಡದ ವಿದ್ಯಾರ್ಥಿಗಳು ‘ಸುಗ್ಗಿ ಕಾಲ ಹಿಗ್ಗಿ ಬಂದಿತೋ...’ ಹಾಡಿಗೆ ಹೆಜ್ಜೆ ಹಾಕಿದರು. ಚಕ್ಕಡಿ, ಎತ್ತುಗಳು, ಮೊರ ಹಾಗೂ ಹಲಿಗೆಗಳನ್ನು ಹಿಡಿದು ಲಯಭದ್ದವಾದ ಹಾಡಿಗೆ ಅಚ್ಚುಕಟ್ಟಾಗಿ ಕುಣಿದರು. ಸಾಂಪ್ರದಾಯಿಕ ಉಡುಗೆ ಧರಿಸಿದ್ದ ಯುವಕ, ಯುವತಿಯರು ಮೈಚಳಿ ಬಿಟ್ಟು ನರ್ತಿಸಿ ಪ್ರೇಕ್ಷಕರ ಮನ ರಂಜಿಸಿದರು. ಸುಗ್ಗಿಯ ಕಣದಲ್ಲಿ ಕುಣಿಯುತ್ತ ಕೊನೆಯಲ್ಲಿ ಎತ್ತಿನ ಬಂಡಿಯಲ್ಲಿ ಸಾಗುವ ದೃಶ್ಯ ಪ್ರೇಕ್ಷಕರ ಹುಚ್ಚೆಬ್ಬಿಸಿತು.
ರಾಯಚೂರಿನ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ದೇವಮ್ಮ ನೇತೃತ್ವದ ಯುವತಿಯರ ತಂಡದ ಕಲಾವಿದರು ‘ಎಲ್ಲೋ ಕಾಣ ಎಲ್ಲೋ ಕಾಣೆ, ಯಲ್ಲಮ್ಮ ನಿನ್ನ....’ ಹಾಡಿಗೆ ಜೋಗತಿ ನೃತ್ಯ ಪ್ರದರ್ಶಿಸಿದರು. ಬಿಂದಿಗೆಗೆ ದೇವಿಯ ಮುಖವಾಡ ಹಾಕಿ ಕೊಂಡು ಕೈಯಲ್ಲಿ ಬೇವು, ಭಂಡಾರ ಹಾಗೂ ಹೂವು ಹಿಡಿದು ತೂರಿ ಮೈಮನ ತಣಿಯುವಂತೆ ಕುಣಿದರು.
ಸಿಂಧನೂರು ತಾಲ್ಲೂಕಿನ ವೀರಾಪುರದ ಯುವತಿಯರ ತಂಡ ಡೊಳ್ಳು ಕುಣಿತದ ಮೂಲಕ ಕಲಾ ಪ್ರದರ್ಶನ ನೀಡಿದರು. ಡೊಳ್ಳು ಬಾರಿಸುತ್ತ ಅದರ ಮೇಲೆ ಏಣಿ ಅಡ್ಡವಾಗಿಟ್ಟು ಕಲಾವಿದೆಯೊಬ್ಬರು ಸಾಹಸ ಪ್ರದರ್ಶಿಸಿದ್ದು ವಿಶೇಷವಾಗಿತ್ತು. ಕಿವಿಗಡಚ್ಚುವ ಹಾಗೆ ಅಬ್ಬರದೊಂದಿಗೆ ಡೊಳ್ಳು ಬಾರಿಸಿ ಪ್ರೇಕ್ಷಕರ ಮೈನವಿರೇಳಿಸುವಂತೆ ಮಾಡಿದರು. ಇಡೀ ಯುವತಿಯರ ತಂಡದಲ್ಲಿ ಒಬ್ಬನೇ ಯುವಕ ತಾಳ ಬಾರಿಸಿ ತಂಡವನ್ನು ಹುರಿದುಂಬಿಸಿದ್ದು ವಿಶೇಷವಾಗಿತ್ತು.
ಸಿಂಧನೂರಿನ ಕಾಮನಬಿಲ್ಲು ಸಾಂಸ್ಕೃತಿಕ ಕಲಾ ಸೇವಾಸ ಸಂಘದ ಯುವಕ, ಯುವತಿಯರು ಹಳದಿ ಕೆಂಪು ಪೋಷಾಕಿನಲ್ಲಿ ಕಂಸಾಳೆ ಬಾರಿಸುತ್ತ ವೇದಿಕೆ ಪ್ರವೇಶಿಸಿ ಗುಂಪಿನಲ್ಲಿ ಆಕರ್ಷಕ ಪ್ರದರ್ಶನ ನೀಡಿ ಕೊನೆಯಲ್ಲೂ ನಿಧಾನವಾಗಿ ಒಬ್ಬೊಬ್ಬರಾಗಿ ವೇದಿಕೆಯಿಂದ ನಿರ್ಗಮಿಸಿದ್ದು, ಪ್ರೇಕ್ಷಕರ ಗಮನ ಸೆಳೆಯಿತು.
ರಾಯಚೂರಿನ ಸರ್ಕಾರಿ ಪದವಿ ಕಾಲೇಜಿನ ಬಿಎ ದ್ವಿತೀಯ ವರ್ಷದ ವಿದ್ಯಾರ್ಥಿನಿ ಸಂಗೀತಾ ಪ್ರಕಾಶ ಅವರು ಹೊಸದಾಗಿ ಮದುವೆಯಾಗಿ ಗಂಡನ ಮನೆಗೆ ತೆರಳಿದ ಯುವತಿಯ ತವರಿನ ಪ್ರೇಮ ಆಧರಿಸಿ ‘ಬಳೆಗಾರ ಚಂದಪ್ಪ ಹೋಗಿ ಬಾ ನೀ ತವರಿಗೆ...’ ಹಾಡಿಗೆ ವಿಶಿಷ್ಠ ವೇಷದಲ್ಲಿ ಕಲೆಯ ಪ್ರದರ್ಶನ ನೀಡಿದರು.
ಸಿಂಧನೂರು ಹಾಗೂ ರಾಯಚೂರಿನ ಯುವಕ ಯುವತಿಯರೇ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. 67 ಯುವತಿಯರು ಹಾಗೂ 33 ಯುವಕರು ಯುವಜನೋತ್ಸವದಲ್ಲಿ ಭಾಗವಹಿಸಿದ್ದರು. ಗಾಯನ, ಸಮೂಹ ಗಾಯನ, ಜಾನಪದ ನೃತ್ಯ, ಜಾನಪದ ಗೀತೆ, ಚಿತ್ರಕಲೆ ಹಾಗೂ ಕವನ ರಚನೆ ಸ್ಪರ್ಧೆಯಲ್ಲೂ ಪಾಲ್ಗೊಂಡು ಉತ್ಸಾಹ ಮೆರೆದರು.
‘ಯುವ ಪ್ರತಿಭೆ ಬೆಳಕಿಗೆ ತರಲು ವೇದಿಕೆಗಳು ಅಗತ್ಯ’
ರಾಯಚೂರು: ‘ಯುವ ಜನತೆಯಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹಾಕಲು ಯುವ ಜನೋತ್ಸವದಂತಹ ವೇದಿಕೆ ಸೂಕ್ತವಾಗಿದೆ. ಕಾಲೇಜು ವಿದ್ಯಾರ್ಥಿಗಳು ಇಂತಹ ಸ್ಪರ್ಧೆಗಳಲ್ಲಿ ಪಾಲ್ಗೊಂಡು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬೆಳೆಯಬೇಕು’ ಎಂದು ಸಣ್ಣ ನೀರಾವರಿ ಸಚಿವ ಎನ್. ಎಸ್. ಬೋಸರಾಜು ತಿಳಿಸಿದರು.
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಶನಿವಾರ ಜಿಲ್ಲಾ ಮಟ್ಟದ ಯುವ ಜನೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ‘ಯುವಕರಲ್ಲಿನ ಪ್ರತಿಭೆಯನ್ನು ಗುರುತಿಸಿ ಬೆಳಕಿಗೆ ತರಲು ಶಿಕ್ಷಣ ಇಲಾಖೆ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಪ್ರತಿ ವರ್ಷವೂ ಇಂತಹ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಯುವಜನರು ಇದರ ಪೂರ್ಣ ಲಾಭ ಪಡೆದುಕೊಳ್ಳಬೇಕು’ ಎಂದು ಹೇಳಿದರು.
‘ವಿಜ್ಞಾನ ತಂತ್ರಜ್ಞಾನ ಇಲಾಖೆಯಿಂದ ವಿಜ್ಞಾನದ ಮಹತ್ವ ಅರಿಯಲು ರಾಜ್ಯದಾದ್ಯಂತ ಶಾಲಾ ಮಕ್ಕಳಿಗೆ ಟೆಲಿಸ್ಕೋಪ್‌ಗಳನ್ನು ವಿತರಿಸಲಾಗುತ್ತಿದೆ. ಅಲ್ಲದೆ ಕೆಕೆ ಆರ್‌ಡಿಬಿಯಿಂದ ನಾಲ್ಕು ವಿಜ್ಞಾನದ ಮೊಬೈಲ್ ವ್ಯಾನ್ ಗಳನ್ನು ನೀಡಲಾಗುತ್ತಿದೆ. ಮೋಬೈಲ್ ವ್ಯಾನ್‌ಗಳು ಶಾಲೆಗಳಿಗೆ ತೆರಳಿ ವಿಜ್ಞಾನದ ಮಹತ್ವ ಮತ್ತು ಮಾಹಿತಿ ನೀಡಲಿವೆ’ ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎ.ಎನ್.ಸದಾಶಿವಪ್ಪ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವೀರೇಶ ನಾಯಕ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.