ರಾಯಚೂರು: ‘ಜನಸಂಖ್ಯೆ ನಿಯಂತ್ರಣದಲ್ಲಿರಬೇಕಾದರೆ, ಕುಟುಂಬ ಕಲ್ಯಾಣ ಯೋಜನೆಯ ಕೆಲವು ತಾತ್ಕಾಲಿಕ ಹಾಗೂ ಶಾಶ್ವತ ವಿಧಾನಗಳನ್ನು ಅನುಸರಿಸಬೇಕು. ಕ್ಷೇತ್ರ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯ ಸಿಬ್ಬಂದಿ ಕುಟುಂಬ ಯೋಜನಾ ವಿಧಾನಗಳ ಮನವರಿಕೆ ಮಾಡಬೇಕು‘ ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಹೇಳಿದರು.
ಇಲ್ಲಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಲಯದಲ್ಲಿ ಆಯೋಜಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಭಾರತದ ಜನಸಂಖ್ಯೆ 142 ಕೋಟಿ ತಲುಪಿದೆ. ರಾಜ್ಯ ಜನಸಂಖ್ಯೆಯೂ 6 ಕೋಟಿಗೆ ಏರಿದೆ. ಜನಸಂಖ್ಯೆ ಹೆಚ್ಚಾದಂತೆ ದೇಶ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುತ್ತದೆ. ಸಾಮಾಜಿಕ, ಶೈಕ್ಷಣಿಕ, ವಸತಿ ಸೇರಿದಂತೆ ಮೂಲ ಸೌಲಭ್ಯದಿಂದ ಹಿಂದುಳಿಯುತ್ತವೆ’ ಎಂದು ತಿಳಿಸಿದರು.
‘ಕುಟುಂಬದಲ್ಲಿ ಸದಸ್ಯರ ಹೆಚ್ಚು ಇದ್ದಲ್ಲಿ ಕುಟುಂಬ ನಿರ್ವಹಣೆಯೂ ಕಷ್ಟವಾಗುತ್ತದೆ. ಕುಟುಂಬದ ಸಂಖ್ಯೆ ಹಿತಮಿತವಾಗಿರಬೇಕು. ನಾವಿಬ್ಬರು ನಮಗೊಬ್ಬರೆಯಾಗುವಂತೆ ಆರೋಗ್ಯ ಶಿಕ್ಷಣ ನೀಡಬೇಕು‘ ಎಂದರು.
ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸುರೇಂದ್ರಬಾಬು ಮಾತನಾಡಿ, ‘ಶಸ್ತ್ರ ಚಿಕಿತ್ಸೆ ಮಹಿಳೆಯರಷ್ಟೆ ಅಲ್ಲ ಪುರುಷರು ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಬಹುದು. ಯಾವುದೇ ಗಾಯವಿಲ್ಲದೇ ಒಂದೇ ದಿನದಲ್ಲಿ ಶಸ್ತ್ರಚಿಕಿತ್ಸೆ ಮಾಡಿಕೊಂಡು ಮನೆಗೆ ತೆರಳಬಹುದು’ ಎಂದು ತಿಳಿಸಿದರು.
ಮಾನಸಿಕ ತಜ್ಞರು ಹಾಗೂ ಭಾರತೀಯ ಕುಟುಂಬ ಯೋಜನಾ ಸಂಘದ ಡಾ. ವಿ.ಎ. ಮಾಲಿ ಪಾಟೀಲ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಮಹ್ಮದ್ ಶಾಕೀರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯಶಂಕರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಗಣೇಶ, ಜಿಲ್ಲಾ ಕುಷ್ಠ ರೋಗ ನಿಯಂತ್ರಣಾಧಿಕಾರಿ ಡಾ.ನಂದಿತಾ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರಗೌಡ ಪಾಟೀಲ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಂಗರಾವ್ ಕುಲಕರ್ಣಿ ಐಕೂರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸರೋಜಾ, ರೆಡ್ ಕ್ರಾಸ್ ಸಂಸ್ಥೆಯ ದಂಡಪ್ಪ ಬಿರಾದಾರ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಆಲಿಯಾಖಾನ್, ಸೇರಿದಂತೆ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಇದ್ದರು.
ಕುಷ್ಠರೋಗ ಜಾಗೃತಿ ತೀವ್ರಗೊಳಿಸಿ:
‘ಜು.17 ರಿಂದ ಆಗಸ್ಟ್ 2ರವರೆಗೆ ನಡೆಯುವ ಕ್ಷಯರೋಗ ಪತ್ತೆ ಹಚ್ಚುವ ಆಂದೋಲನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕ್ಷಯ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ ಹೇಳಿದರು.
ಇಲ್ಲಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಲಯದಲ್ಲಿ ಜಿಲ್ಲಾ ಟಾಸ್ಕ್ ಫೋರ್ಸ ಸಭೆಯ ಅಧ್ಯಕ್ಷತೆ ವಹಿಸಿ ಕ್ಷಯ ರೋಗದ ಕುರಿತಾದ ಜಾಗೃತಿ ಮೂಡಿಸುವ ಪೋಸ್ಟರ್‍ಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸುರೇಂದ್ರಬಾಬು ಮಾತನಾಡಿ, ‘ನಮ್ಮ ಇಲಾಖೆಯ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಸಾರ್ವಜನಿಕರಿಗೆ ಎರಡು ವಾರಕ್ಕಿಂತ ಕೆಮ್ಮು ರಾತ್ರಿ ಸಮಯದಲ್ಲಿ ಜ್ವರ ಬರುವುದು ತೂಕ ಕಡಿಮೆಯಾಗುವುದು ಹಸಿವುಯಾಗದಿರುವದು ಇಂತಹ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಹತ್ತಿರ ಕರೆದುಕೊಂಡು ಹೋಗಿ ಸೂಕ್ತ ಚಿಕಿತ್ಸೆ ನೀಡಲಾಗುವುದು‘ ಎಂದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಮಹ್ಮದ್ ಶಾಕೀರ್ ಮೊಹಿದ್ದೀನ್ ಮಾತನಾಡಿ, ‘ಕ್ಷಯರೊಗದ ತ್ವರಿತ ಪತ್ತೆಗಾಗಿ ಎಲ್ಲಾ ಜಿಲ್ಲಾ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಗೆ ಸಿಬಿಎನ್‍ಎಎಟಿ ಯಂತ್ರಗಳನ್ನು ಪೂರೈಸಲಾಗಿದೆ. ಕ್ಷಯರೋಗಿಯು ಕೆಮ್ಮುವಾಗ, ಸೀನುವಾಗ ಕರವಸ್ತ್ರದಿಂದ ಬಾಯಿ ಮತ್ತು ಮೂಗನ್ನು ಮಚ್ಚಿಕೊಳ್ಳಬೇಕು’ ಎಂದರು.
ಜಿಲ್ಲೆಯಲ್ಲಿ ಜು.17 ರಿಂದ ನಡೆಯುವ ಕ್ಷಯರೋಗ ಪತ್ತೆ ಹಚ್ಚುವ ಆಂದೋಲನ ಕಾರ್ಯಕ್ರಮದಲ್ಲಿ ಒಟ್ಟು 370 ತಂಡಗಳು ಇದರಲ್ಲಿ 194 ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯ ಶಂಕರ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರಗೌಡ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಗಣೇಶ, ಜಿಲ್ಲಾ ಕುಷ್ಠ ರೋಗ ನಿಯಂತ್ರಣಾಧಿಕಾರಿ ಡಾ.ನಂದಿತಾ, ಬನದೇಶ, ಡಾ. ಚಂದ್ರಶೇಖರ ಸ್ವಾಮಿ, ಡಾ.ಅಯ್ಯನಗೌಡ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.