ADVERTISEMENT

ಸಿಂಧನೂರು ಜಿಲ್ಲೆ ರಚನೆ ಈಗ ಸಾಧ್ಯವಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಸಿಂಧನೂರು ದಸರಾ ಮಹೋತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 15:23 IST
Last Updated 4 ಅಕ್ಟೋಬರ್ 2024, 15:23 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಸಿಂಧನೂರು: ‘ಹೈದರಾಬಾದ್ ಕರ್ನಾಟಕ್ಕೆ ಒಂದು ಸಚಿವಾಲಯ ಮಾಡಲಾಗುವುದು. ಆದರೆ, ಸಿಂಧನೂರು ಜಿಲ್ಲೆ ರಚಿಸಲು ಈಗ ಸಾಧ್ಯವಿಲ್ಲ‘ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇಲ್ಲಿಯ ಸರ್ಕಾರಿ ಪದವಿ ಕಾಲೇಜಿನ ಆವರಣದಲ್ಲಿ ಆಯೋಜಿಸಿರುವ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ ಸಂದರ್ಭದಲ್ಲೇ ಕಲ್ಯಾಣ ಕರ್ನಾಟಕ್ಕೆ ಒಂದು ಸಚಿವಾಲಯ ರಚಿಸುವ ಬಗ್ಗೆ ಹೇಳಿರುವೆ. ಹೊಸ ಜಿಲ್ಲೆ ಮಾಡುವುದು ಅಷ್ಟು ಸುಲಭವಲ್ಲ. ಸಿಂಧನೂರಲ್ಲಿ ಇರುವ ಕೆಲವು ಲೋಪಗಳನ್ನು ಸರಿಪಡಿಸಲಾಗುವುದು. ಸಿಂಧನೂರು ಜಿಲ್ಲೆ ರಚಿಸಲು ಸಾಧ್ಯವಾಗದು. ಆದರೂ ಮೊದಲು ವರದಿ ತರಿಸಿಕೊಂಡು ಪರಿಶೀಲಿಸಲಾಗುವುದು‘ ಎಂದು ತಿಳಿಸಿದರು.

ADVERTISEMENT

‘ಸಿಂಧನೂರು ದಸರಾ ಮಹೋತ್ಸವದಲ್ಲಿ ಎಲ್ಲ ಜಾತಿ ಧರ್ಮವರು ಭಾಗವಹಿಸಿರುವುದು ಸಂತಸ ತಂದಿದೆ. ಎರಡು ಕಿ.ಮೀ ಸೌಹಾರ್ದ ನಡೆಗೆಯನ್ನು ಮಾಡಿದ್ದಾರೆ. ಸೌಹಾರ್ದ ಹಾಗೂ ಪ್ರೀತಿ ಗೌರವದಿಂದ ಬದುಕುವುದು ಅಗತ್ಯ‘ ಎಂದು ಹೇಳಿದರು.

‘ಚಾಮುಂಡೇಶ್ವರಿ ಅವತಾರವೇ ಅಂಬಾದೇವಿ. ಒಂಬತ್ತು ದಿನ ನವರಾತ್ರಿ ಉತ್ಸವ ಹಾಗೂ 10ನೇ ದಿನ ದಸರಾ ಮಹೋತ್ಸವ ನಡೆಯುತ್ತದೆ. ಮಹಿಳೆ, ಯುವಕರು, ಕಲೆ ಹೀಗೆ ಒಂಬತ್ತು ದಿನ ಕಾರ್ಯಕ್ರಮ ಆಯೋಜಿಸಲಾಗಿದೆ. ಕೊನೆಯ ದಿನ ಆನೆಯ ಮೇಲೆ ಅಂಬಾದೇವಿ ಮೆರವಣಿಗೆ ನಡೆಯಲಿದೆ. ಪಕ್ಷಭೇದ ಮರೆತು ಹಬ್ಬ ಆಚರಿಸುತ್ತಿರುವುದು ಸಂತೋಷದ ವಿಚಾರವಾಗಿದೆ‘ ಎಂದು ತಿಳಿಸಿದರು.

‘2013ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿ 371ಜೆ ಸೇರ್ಪಡೆ ಮಾಡಲಾಯಿತು. ಹೈದರಾಬಾದ್‌ ಕರ್ನಾಟಕಕ್ಕೆ ವಿಶೇಷ ಸೌಲಭ್ಯದಡಿ ಅವಕಾಶ ಕಲ್ಪಿಸಲಾಗಿದೆ. ಸಂವಿಧಾನಕ್ಕೆ ತಿದ್ದುಪಡಿ ಮಾಡಿದ ಸಂದರ್ಭದಲ್ಲಿ ನಾನು ರಾಜ್ಯದ ಮುಖ್ಯಮಂತ್ರಿಯಾಗಿದ್ದೆ. ಮಲ್ಲಿಕಾರ್ಜುನ ಖರ್ಗೆ ಹಾಗೂ ಧರ್ಮಸಿಂಗ್‌ ಅವರ ಸತತ ಪ್ರಯತ್ನದಿಂದ ಇದು ಸಾಧ್ಯವಾಯಿತು. ಇದಕ್ಕೆ ನೆರವಾದ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರನ್ನೂ ಮರೆಯಲು ಸಾಧ್ಯವಿಲ್ಲ’ ಎಂದರು.

‘ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟದಲ್ಲಿ 57 ವಿಷಯಗಳಲ್ಲಿ 47 ವಿಷಯಗಳು ಹೈದರಾಬಾದ್‌ ಕರ್ನಾಟಕದ ಯೋಜನೆಗಳಿಗೆ ಒಂದೇ ಕಂತಿನಲ್ಲಿ ₹ 11,770 ಕೋಟಿ ಕೊಟ್ಟಿದ್ದೇವೆ. ಇಷ್ಷು ಮೊತ್ತದ ಯೋಜನೆಗಳಿಗೆ ಹಿಂದೆ ಯಾವ ಸರ್ಕಾರವೂ ನೀಡಿಲ್ಲ‘ ಎಂದು ತಿಳಿಸಿದರು.

‘ಆರ್ಥಿಕ ತಜ್ಞ ಗೋವಿಂದರಾವ್ ನೇತೃತ್ವದ ಸಮಿತಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಮಾಹಿತಿ ಸಂಗ್ರಹಿಸಲಿದೆ. ನಂಜುಂಡಪ್ಪ ವರದಿ ಹಾಗೂ 371ಜೆ ಅಡಿಯಿಂದ ಎಷ್ಟು ಅನುಕೂಲವಾಗಲಿದೆ ಎನ್ನುವ ಕುರಿತು ಸಮೀಕ್ಷೆ ನಡೆಸಿ ವರದಿ ಸಲ್ಲಿಸಲಿದೆ. ಈ ವರದಿ ಆಧರಿಸಿ ಸರ್ಕಾರ ಮತ್ತೆ ಅನುದಾನ ಕೊಡಲಿದೆ‘ ಎಂದು ಹೇಳಿದರು.

‘ಕಲ್ಯಾಣ ಕರ್ನಾಟಕದ ಖಾಲಿ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು. ಈ ಭಾಗ ಹಳೆಯ ಮೈಸೂರು ಭಾಗದಷ್ಟೇ ಅಭಿವೃದ್ಧಿಯಾಗಬೇಕು‘ ಎಂದು ತಿಳಿಸಿದರು.

‘ಪ್ರಜಾಪ್ರಭುತ್ವದಲ್ಲಿ ಟೀಕೆ ಹಾಗೂ ಭಿನ್ನಮತ ಇರುವುದೇ ಜೀವಾಳ. ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಎನ್ನುವುದು ಸುಳ್ಳು‘ ಎಂದು ಹೇಳಿದರು.

371(ಜೆ) ಸಮರ್ಪಕ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಬದ್ಧ: ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ‘371ಜೆ ಸಮರ್ಪಕ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ. ₹11770 ಕೋಟಿ ಯನ್ನು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮಂಜೂರು ಮಾಡಿದ್ದಾರೆ’ ಎಂದು ತಿಳಿಸಿದರು.

‘ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ 5500 ಹುದ್ದೆಗಳಿಗೆ ನೇಮಕಾತಿ ಮಾಡಲಾಗಿದೆ. ಒಂದು ವರ್ಷದಲ್ಲಿ 15 ಸಾವಿರ ಹುದ್ದೆಗಳಿಗೆ ನೇಮಕ ಮಾಡಲಿದೆ. ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಯಂತೆ 50 ಸಾವಿರ ಹುದ್ದೆಗಳಿಗೆ ನೇಮಕಾತಿ ಮಾಡಲಿದೆ‘ ಎಂದು ಹೇಳಿದರು.

ರಾಜ್ಯ ಕೈಗಾರಿಕಾ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಂಪನಗೌಡ ಬಾದರ್ಲಿ ಅಧ್ಯಕ್ಷತೆ ವಹಿಸಿದ್ದರು. 371ಜೆ ಅಡಿಯಲ್ಲಿ ನೇಮಕಗೊಂಡ ಡಿವೈಎಸ್‌ಪಿ ವೆಂಟಕೇಶ ಉಗಿಬಂಡಿ ಸೇರಿದಂತೆ 10 ಕೆಎಎಸ್‌ ಅಧಿಕಾರಿಗಳು ಹಾಗೂ 371ಜೆ ಹೋರಾಟದಲ್ಲಿ ಪಾಲ್ಗೊಂಡಿದ್ದ ರಜಾಕ್‌ ಉಸ್ತಾದ ಸೇರಿದಂತೆ ಪ್ರಮುಖರನ್ನು ಸನ್ಮಾನಿಸಲಾಯಿತು.

ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಡಗಡಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್.ಬಸನಗೌಡ ತುರ್ವಿಹಾಳ, ಕೊಪ್ಪಳ ಸಂಸದ ಕೆ.ರಾಜಶೇಖರ ಬಸವರಾಜ ಹಿಟ್ನಾಳ, ಶಾಸಕರಾದ ಜಿ.ಹಂಪಯ್ಯ ನಾಯಕ, ಮಾನಪ್ಪ ವಜ್ಜಲ್, ಬಾಲಕೃಷ್ಣ, ಬಿ.ಎಂ.ನಾಗರಾಜ, ನಾಗರಾಜ ಸಿರಗುಪ್ಪ, ವಿಧಾನ ಪರಿಷತ್ ಸದಸ್ಯರಾದ ಎ.ವಸಂತಕುಮಾರ, ಶರಣಗೌಡ ಪಾಟೀಲ ಬಯ್ಯಾಪೂರ, ಬಸನಗೌಡ ಬಾದರ್ಲಿ, ಚಂದ್ರಶೇಖರ ಪಾಟೀಲ, ವೆಂಟರಾವ್‌ ನಾಡಗೌಡ, ರಾಘವೇಂಧ್ರ ಹಿಟ್ನಾಳ್, ಅಮರೇಗೌಡ ಭಯ್ಯಾಪುರ, ವಿರೂಪಾಕ್ಷಪ್ಪ, ಬಸವರಾಜ ಇಟಗಿ, ಜಿಲ್ಲಾಧಿಕಾರಿ ನಿತೀಶ್ ಕೆ, ಜಿಲ್ಲಾ ಪಂಚಾಯಿಸಿ ಸಿಇಒ ರಾಹುಲ್ ತುಕಾರಾಮ್ ಪಾಂಡ್ವೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.