ರಾಯಚೂರು: ರೈತರ ಆದಾಯವನ್ನು 2025ರ ಹೊತ್ತಿಗೆ ದ್ವಿಗುಣಗೊಳಿಸಲು ಸಾಧ್ಯವಿರುವ ಎಲ್ಲ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂಬುದು ಆಯೋಗದ ಚಿಂತನೆಯಾಗಿದೆ ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಹೇಳಿದರು.
ಜಿಲ್ಲಾಡಳಿತ ಕಚೇರಿಯಲ್ಲಿ ಜಿಲ್ಲೆಯ ಪ್ರಮುಖ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಮಾರುಕಟ್ಟೆ, ಖರೀದಿ ಹಾಗೂ ಬೆಲೆಗಳ ವಿಚಾರದ ಬಗ್ಗೆ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
ಒಬ್ಬ ರೈತ ತಿಂಗಳಿಗೆ ಎಷ್ಟು ಹಣ ಸಂಪಾದಿಸುತ್ತಾನೆ ಎಂಬುದನ್ನು ಅರಿತು, ಆರ್ಥಿಕ ಪ್ರಗತಿಗಾಗಿ ವಿಸ್ತರಿಸ ಬಹುದಾದ ಕೃಷಿ ಅಥವಾ ಪೂರಕ ಚಟು ವಟಿಕೆಗಳನ್ನು ನಡೆಸಲು ಸಾಧ್ಯವಾಗುವ ಅವಕಾಶಗಳನ್ನು ಕಲ್ಪಿಸಲು ಆಯೋಗ ಹೆಜ್ಜೆಯಿಟ್ಟಿದೆ. ಆರ್ಥಿಕಾಭಿವೃದ್ಧಿ ಸಾಕಾರಗೊಳಿಸುವ ಕಾರ್ಯಕ್ರಮಗಳನ್ನು ಜಾರಿಗೆತರಲು ಈ ರೀತಿಯ ಸಭೆ ನಡೆಸಲಾಗುತ್ತಿದೆ ಎಂದರು.
ಬಿತ್ತನೆ ಬೀಜ, ಬೆಳೆ ವಿಮೆ ಸಂಬಂಧಿಸಿದಂತೆ ರೈತರ ಮನೋಭಾವ ಬದಲಾಗಬೇಕು. ಬೆಳೆನಷ್ಟವಾದಲ್ಲಿ ಮಾತ್ರ ರೈತರಿಗೆ ಪರಿಹಾರ ದೊರೆಯ ಲಿದೆ. ಈ ವಿಷಯದಲ್ಲಿರುವ ಹಲವು ಗೊಂದಲ ನಿವಾರಿಸಲು ಆಯೋಗ ಪ್ರಯತ್ನಿಸಿದೆ ಎಂದು ತಿಳಿಸಿದರು.
ತೋಟಗಾರಿಕಾ ಪ್ರದೇಶವನ್ನು ಜಿಲ್ಲೆಯಲ್ಲಿ ಮತ್ತಷ್ಟು ವಿಸ್ತರಿಸಲು ಕ್ರಮ ಕೈಗೊಳ್ಳಬೇಕು. ತರಕಾರಿ ಬೆಳೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಈ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ನೀಡಿದರು.
ಮೀನುಗಾರಿಕೆ, ಪಶು ಸಂಗೋಪನೆ ಹಾಗೂ ರೇಷ್ಮೆ ಇಲಾಖೆಯಿಂದ ಕೃಷಿಗೆ ಪೂರಕ ಚಟುವಟಿಕೆಗಳನ್ನು ಕೈಗೊಂಡು ರೈತರ ಆರ್ಥಿಕಾಭಿವೃದ್ಧಿ ಮಾಡಲು ಸಾಧ್ಯವಿರುವ ಯೋಜನೆಗಳ ವಿವರಗಳನ್ನು ಒದಗಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯ ಕೃಷಿ ಭೂಮಿ, ಮಳೆಯ ಪ್ರಮಾಣ, ಬಿತ್ತನೆ ಬೀಜಗಳ ಸರಬರಾಜು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪ್ರಸ್ತಾಪಿಸಿದ ಅವರು, ಮತ್ತಷ್ಟು ಕೃಷಿ ಚಟುವಟಿಕೆ ವಿಸ್ತರಿಸಬಹುದಾದ ಸಾಧ್ಯತೆಗಳ ಬಗ್ಗೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಹಾಗೂ ರೈತರೊಂದಿಗೆ ಚರ್ಚಿಸಿದರು.
ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ, ವಿವಿಧ ಇಲಾಖೆಯ ಅಧಿಕಾರಿ ಗಳು ಹಾಗೂ ರೈತ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.