ಲಿಂಗಸುಗೂರು: ತಾಲ್ಲೂಕಿನ ಗುರುಗುಂಟಾ ಹೋಬಳಿಯ ಹೆಸರೂರು, ಗೋನವಾರ, ಬಸ್ಸಾಪುರ ಸೇರಿ ಸುತ್ತಮುತ್ತಲ ಪ್ರದೇಶಗಳ ರೈತರು ಮತ್ತು ಸರ್ಕಾರಿ ಜಮೀನುಗಳಲ್ಲಿ ವಿಂಡ್ ಪವರ್ ಕಂಪನಿಗಳು ಗಾಳಿ ಟರ್ಬೈನ್ ಅಳವಡಿಕೆ ಹೆಸರಲ್ಲಿ ರೈತರಿಗೆ ವಂಚನೆ ಮಾಡುತ್ತಿವೆ. ಕಡಿವಾಣ ಹಾಕಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.
ಉಪ ವಿಭಾಗಾಧಿಕಾರಿ ಶಿಂಧೆ ಅವಿನಾಶ ಸಂಜೀವನ್ ಅವರಿಗೆ ಮನವಿ ಸಲ್ಲಿಸಿದ ಪದಾಧಿಕಾರಿಗಳು,‘ಮೈಕ್ರೊ ಲ್ಯಾಬ್ಸ್ ಮತ್ತು ಮೈಸೂರು ಮರ್ಕಂಟೈಲ್ ಕಂಪನಿ ಮಧ್ಯವರ್ತಿಗಳ ಸಹಯೋಗದಲ್ಲಿ ನಿರೀಕ್ಷಿತ ಪರಿಹಾರ ನೀಡದೆ ವಂಚಿಸುತ್ತಿವೆ. ಸರ್ಕಾರಿ ಜಮೀನುಗಳಲ್ಲಿ ಅನುಮತಿ ಪಡೆಯದೆ ಟರ್ಬೈನ್ ಅಳವಡಿಸುತ್ತಿವೆ’ ಎಂದು ದೂರಿದರು.
ರೈತರ ಮತ್ತು ಸರ್ಕಾರಿ ಜಮೀನುಗಳಲ್ಲಿ ಗಾಳಿ ಟರ್ಬೈನ್ ಜೋಡಣೆಗೆ ತೋಡುತ್ತಿರುವ ಆಳವಾದ ಗುಂಡಿಗಳಲ್ಲಿನ ಕಲ್ಲು ಹೊರ ತೆಗೆಯಲು ಅಕ್ರಮವಾಗಿ ಮದ್ದು ಗುಂಡು, ಜಿಲೆಟಿನ್ ಕಡ್ಡಿ ಬಳಸಲಾಗುತ್ತಿದೆ. ಕಂದಾಯ, ಗ್ರಾಮ ಪಂಚಾಯಿತಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ಪಡೆದಿರುವುದಿಲ್ಲ. ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರದ ನಿಯಮಗಳಡಿ ಗರಿಷ್ಠ ಭೂ ಪರಿಹಾರ ಕೊಡಿಸಬೇಕು. ದಾಖಲೆಗಳನ್ನು ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದೆ ಹೋದಲ್ಲಿ ಕಾನೂನು ಹೋರಾಟ ನಡೆಸಲು ತೀರ್ಮಾನಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮುಖಂಡರಾದ ಬಸವರಾಜ ನಕ್ಕುಂದಿ, ಅರುಣಕುಮಾರ ಹೆಸರೂರು, ಶಶಿಧರ ಹೊಸಮನಿ, ರಾಮಣ್ಣ ಹೊನ್ನಳ್ಳಿ, ಶಿವಕುಮಾರ ಅಸ್ಕಿಹಾಳ, ಹನುಮಂತ ಜಾಲಿಬೆಂಚಿ, ಅಮರೇಶ ಗುಡದನಾಳ, ಗಂಗಾಧರ ದೇವರಗಡ್ಡಿ, ಮಲ್ಲಿಕಾರ್ಜುನ ಮಂದಲಗುಡ್ಡ, ಪ್ರದೀಪ, ನಾಗರಾಜ ಬಲ್ಲೆದರ್, ಶರಣಪ್ಪ ಜಾಲಹಳ್ಳಿ ಹಾಗೂ ಮಹಾಂತೇಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.