ರಾಯಚೂರು: ಕಳೆದ ವಾರಕ್ಕೆ ಹೋಲಿಸಿದರೆ ಈ ವಾರವೂ ತರಕಾರಿ ಬೆಲೆ ಮತ್ತೆ ಹೆಚ್ಚಾಗಿದೆ. ನಿತ್ಯ ಉಪಾಹಾರ ಹಾಗೂ ಭೋಜನಕ್ಕೆ ಅಗತ್ಯವಿರುವ ತರಕಾರಿಗಳ ಬೆಲೆ ಏರಿ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ.
ಬೆಳ್ಳುಳ್ಳಿ, ಈರುಳ್ಳಿ, ಆಲೂಗಡ್ಡೆ ಹಾಗೂ ಟೊಮೆಟೊ ಇಲ್ಲದೇ ಅಡುಗೆ ಸ್ವಾದ ಹೆಚ್ಚಿಸಲು ಸಾಧ್ಯವಿಲ್ಲ. ಇವು ಜನಸಾಮಾನ್ಯರಿಗೆ ಅಷ್ಟೇ ಅಲ್ಲ; ಹೋಟೆಲ್, ಟಿಫನ್ ಸೆಂಟರ್, ಖಾನಾವಳಿ ಹಾಗೂ ರೆಸ್ಟೋರಂಟ್‌ಗಳಿಗೂ ಬಿಸಿ ಮುಟ್ಟಿಸಿವೆ.
ಪ್ರತಿ ಕ್ವಿಂಟಲ್‌ಗೆ ನುಗ್ಗೆಕಾಯಿ ₹4 ಸಾವಿರ, ಬೆಳ್ಳುಳ್ಳಿ ₹3 ಸಾವಿರ, ಈರುಳ್ಳಿ, ಆಲೂಗಡ್ಡೆ, ಗಜ್ಜರಿ, ಬೀಟ್‌ರೂಟ್, ಬೆಂಡೆಕಾಯಿ, ಟೊಮೆಟೊ, ಚವಳೆಕಾಯಿ, ತೊಂಡೆಕಾಯಿ ಹಾಗೂ ತುಪ್ಪದ ಹಿರೇಕಾಯಿ ಬೆಲೆ ₹1 ಸಾವಿರ ಹೆಚ್ಚಾಗಿದೆ.
ಮೆಣಸಿನಕಾಯಿ, ಬೀನ್ಸ್, ಹಿರೇಕಾಯಿ ಹಾಗೂ ಡೊಣಮೆಣಸಿನಕಾಯಿ ಬೆಲೆ ಸ್ಥಿರವಾಗಿದೆ. ಅಲ್ಲದೇ ಬಹುತೇಕ ಸೊಪ್ಪಿನ ಬೆಲೆಯೂ ಸ್ಥಿರವಾಗಿದೆ. ಪ್ರತಿ ಕ್ವಿಂಟಲ್‌ಗೆ ಹೂಕೋಸು ₹2 ಸಾವಿರ, ಬದನೆಕಾಯಿ ₹1500, ಎಲೆಕೋಸು, ಸೌತೆಕಾಯಿ ಬೆಲೆ ₹1 ಸಾವಿರ ಇಳಿದಿದೆ.
ಮಹಾರಾಷ್ಟ್ರದ ನಾಸಿಕ್‌ನಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಆವಕವಾಗಿದೆ. ಮಹಾರಾಷ್ಟ್ರದಲ್ಲಿ ಕೆಲವು ಕಡೆ ಅಧಿಕ ಮಳೆಯಾಗಿರುವ ಕಾರಣ ಈರುಳ್ಳಿ, ಬೆಳ್ಳುಳ್ಳಿ ನೀರು ಪಾಲಾಗಿದೆ. ಬೇಡಿಕೆ ಹೆಚ್ಚಾಗಿ ಸಹಜವಾಗಿಯೇ ಇವುಗಳ ಬೆಲೆ ಏರಿದೆ. ಬೆಳಗಾವಿ ಜಿಲ್ಲೆಯಿಂದ ಹಸಿ ಮೆಣಸಿನಕಾಯಿ, ಕೊತ್ತಂಬರಿ, ಮೆಂತೆ ಸೊಪ್ಪು ಇಲ್ಲಿಯ ತರಕಾರಿ ಸಗಟು ಮಾರುಕಟ್ಟೆಗೆ ಬಂದಿದೆ.
ಹಿರೇಕಾಯಿ, ಗಜ್ಜರಿ, ಅವರೆಕಾಯಿ, ಸೋರೆಕಾಯಿ, ಸೌತೆಕಾಯಿ, ಎಲೆಕೋಸು, ಹೂಕೋಸು ಹಾಗೂ ಸೊಪ್ಪು ಹೊರ ಜಿಲ್ಲೆಗಳಿಂದ ಬಂದಿದ್ದು, ಗ್ರಾಹಕರ ಕೈಗೆಟಕುವ ಬೆಲೆಯಲ್ಲಿ ಇವೆ.
‘ಬೆಳಗಾವಿಯ ತರಕಾರಿ ಸಗಟು ಮಾರುಕಟ್ಟೆಯಲ್ಲೂ ತರಕಾರಿ ಬೆಲೆ ಹೆಚ್ಚಾಗಿದೆ. ಅಲ್ಲಿಯ ಮೆಣಸಿನಕಾಯಿ ಕಲಬುರಗಿ, ಹುಮನಾಬಾದ್ ಮಾರ್ಗವಾಗಿ ಹೈದರಾಬಾದ್ ಹೋಗುತ್ತಿದೆ. ರಾಯಚೂರು ಜಿಲ್ಲೆಗೆ ಕಡಿಮೆ ಪ್ರಮಾಣದಲ್ಲಿ ಬಂದಿದೆ’ ಎಂದು ತರಕಾರಿ ವ್ಯಾಪಾರಿ ಕೆ.ಶಶಿಕುಮಾರ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.