ADVERTISEMENT

ಬಾಲ್ಯದಲ್ಲೇ ಉತ್ತಮ ಕಲಿಕೆ ಅಗತ್ಯ: ಪ್ರೊ.ಶೇಖರ್‌

ರೇಸ್ ಚಾಣಕ್ಯ ಶಾಲೆಯಲ್ಲಿ ‘ಅಭಿವ್ಯಕ್ತ 2021-22’ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 16:20 IST
Last Updated 22 ಡಿಸೆಂಬರ್ 2021, 16:20 IST
ರಾಯಚೂರಿನ ರೇಸ್ ಚಾಣಕ್ಯ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ‘ಅಭಿವ್ಯಕ್ತಿ 2021–22’ ಅಂತರ್ ಶಾಲಾ ಸ್ಪರ್ಧೆಗಳ ಸಮಾರಂಭವನ್ನು ನಿವೃತ್ತ ಪ್ರಾಧ್ಯಾಪಕ ಶೇಖರ್‌ ಅರ್ಕಸಾಲಿ ಉದ್ಘಾಟಿಸಿದರು
ರಾಯಚೂರಿನ ರೇಸ್ ಚಾಣಕ್ಯ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ‘ಅಭಿವ್ಯಕ್ತಿ 2021–22’ ಅಂತರ್ ಶಾಲಾ ಸ್ಪರ್ಧೆಗಳ ಸಮಾರಂಭವನ್ನು ನಿವೃತ್ತ ಪ್ರಾಧ್ಯಾಪಕ ಶೇಖರ್‌ ಅರ್ಕಸಾಲಿ ಉದ್ಘಾಟಿಸಿದರು   

ರಾಯಚೂರು: ಕಲ್ಯಾಣ ಕರ್ನಾಟಕ ಭಾಗವು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕಾಗಿದೆ. ಬಾಲ್ಯದಲ್ಲಿಯೇ ಮಕ್ಕಳಿಗೆ ಉತ್ತಮ ಕಲಿಕೆಯ ವ್ಯವಸ್ಥೆ ಆಗಬೇಕಿದೆ ಎಂದು ನಿವೃತ್ತ ಪ್ರಾಧ್ಯಾಪಕ ಶೇಖರ್‌ ಅರ್ಕಸಾಲಿ ಸಲಹೆ ನೀಡಿದರು.

ನಗರದ ರೇಸ್ ಚಾಣಕ್ಯ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ‘ಅಭಿವ್ಯಕ್ತಿ 2021–22’ ಅಂತರ್ ಶಾಲಾ ಸ್ಪರ್ಧೆಗಳ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಶಾಲೆಗಳಲ್ಲಿ ಶಿಕ್ಷಕರು ಪಾಠದ ಜೊತೆಗೆ ಮಕ್ಕಳಿಗೆ ಭಾಷೆಯ ಪ್ರೀತಿ, ಮಾತನಾಡುವ ಶೈಲಿ ಮತ್ತು ಸ್ಪಷ್ಟ ಉಚ್ಚಾರಣೆಯನ್ನು ಕಲಿಸಬೇಕು. ಆಗ ಮಕ್ಕಳಲ್ಲಿನ ಕೌಶಲ್ಯ ಅಭಿವೃದ್ಧಿ ಹೊಂದುತ್ತದೆ. ಶಾಲೆಗಳು ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದಾಗ ಈ ಭಾಗದ ಪ್ರತಿಭೆಗಳನ್ನು ಕಾಣುವುದಕ್ಕೆ ಸಾಧ್ಯವಾಗುತ್ತದೆ ಎಂದರು.

ADVERTISEMENT

ರೇಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೊಂಡ ಕೃಷ್ಣಮೂರ್ತಿ ಮಾತನಾಡಿ, ರೇಸ್ ಚಾಣಕ್ಯ ಶಾಲೆಯಲ್ಲಿ ವಿನೂತನ ಕಾರ್ಯಕ್ರಮ ಆಯೋಜಿಸಿರುವುದು ಅಭಿನಂದನೀಯ. ಮಕ್ಕಳ ಪ್ರತಿಭೆಗಳಿಗೆ ಇದೊಂದು ಉತ್ತಮ ವೇದಿಕೆ ಎಂದರು.

ಡಾ.ಶ್ರೀಲತಾ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಕಂಠಪಾಠ ಮಾಡಿದ್ದನ್ನು ಹೇಳದೆ ಪಾಠ ಮಾಡಿದ ವಿಷಯವನ್ನೇ ನಿರರ್ಗಳವಾಗಿ ಮಾತನಾಡುವುದನ್ನು ಕಲಿಯಬೇಕು. ಆಗಲೇ ಪ್ರತಿಭೆ ಹೊರ ಬರಲು ಸಾಧ್ಯವಾಗುತ್ತದೆ, ಕಲಿಕೆಯು ವಿದ್ಯಾರ್ಥಿಗಳ ಬದುಕಿಗೆ ಸಹಕಾರಿ ಆಗುತ್ತದೆ ಎಂದು ಹೇಳಿದರು.

ನಗರದ ಪೂರ್ವ ವಲಯದ ಸಮೂಹ ಸಂಪನ್ಮೂಲ ವ್ಯಕ್ತಿ ಟಿ.ವೀರೇಶ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ವಿವಿಧ ಮೇಳಗಳು ನಡೆಯುತ್ತಿವೆ. ಆದರೆ ಖಾಸಗಿ ಶಾಲೆಗಳಲ್ಲಿಯೂ ಅಂತರ್ ಶಾಲೆಗಳ ಸ್ಪರ್ಧಾತ್ಮಕ ಕಾರ್ಯಕ್ರಮಗಳ ನಡೆಯುತ್ತಿರುವುದು ಸಂತೋಷದ ವಿಷಯ ಎಂದು ಹೇಳಿದರು.

ರೇಸ್ ಚಾಣಕ್ಯ ಶಾಲೆಯ ಚೇರ್ಮನ್ ಡಾ.ವಿ. ಶ್ರೀಧರ ರೆಡ್ಡಿ ಮಾತನಾಡಿ, ಶಾಲೆಯ ಮೂಲಕ ನಗರದ ವಿವಿಧ ಶಾಲಾ ಮಕ್ಕಳ ಪ್ರತಿಯನ್ನು ಉತ್ತೇಜಿಸಲು ಅಭಿವ್ಯಕ್ತ 21-22 ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಈ ಸ್ಪರ್ಧೆಯಲ್ಲಿ 16 ಶಾಲೆಗಳ ಮಕ್ಕಳು ಭಾಗವಹಿಸಿದ್ದಾರೆ ಎಂದರು. ರೇಸ್ ಶಿಕ್ಷಣ ಸಂಸ್ಥೆಯ ಸಹ ಕಾರ್ಯದರ್ಶಿ ವಿಜ್ಞಾನ ವೆಂಕಟೇಶ ಮಾತನಾಡಿದರು.

ಕಾರ್ಯದರ್ಶಿ ವೆಂಕಟಕೃಷ್ಣ, ಡಾ.ಶೇಖರ ಆರ್., ರೇಸ್ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಕೆ.ಭೀಮಾಶಂಕರ, ಎಸ್. ಪ್ರಸಾದ, ಜಿ.ಆರ್.ಲಕ್ಷ್ಮೀಶೆಟ್ಟಿ ನಾಗರಾಜ ಇದ್ದರು.

ಚಾಣಕ್ಯ ಶಾಲೆಯ ಮುಖ್ಯಗುರು ಪರಿಮಳಾ ರೆಡ್ಡಿ, ಶಿಕ್ಷಕಿ ಆಸ್ರಾ ಮತ್ತು ಪ್ರಿಯಾಂಕ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.