ADVERTISEMENT

ರಾಯಚೂರು | ಗರಿಷ್ಠ ದಾಖಲಾತಿ: ‘ಅತಿಥಿ’ಗಳೇ ಆಧಾರ

ರಾಯಚೂರಿನ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು

ಚಂದ್ರಕಾಂತ ಮಸಾನಿ
ಬಾವಸಲಿ
Published 13 ಜೂನ್ 2024, 5:34 IST
Last Updated 13 ಜೂನ್ 2024, 5:34 IST
ರಾಯಚೂರಿನ ಸ್ಟೇಶನ್ ರಸ್ತೆಯಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಸರತಿ ಸಾಲಿನಲ್ಲಿ ನಿಂತಿರುವ ವಿದ್ಯಾರ್ಥಿನಿಯರು/ ಚಿತ್ರ: ಶ್ರೀನಿವಾಸ ಇನಾಮದಾರ್
ರಾಯಚೂರಿನ ಸ್ಟೇಶನ್ ರಸ್ತೆಯಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಸರತಿ ಸಾಲಿನಲ್ಲಿ ನಿಂತಿರುವ ವಿದ್ಯಾರ್ಥಿನಿಯರು/ ಚಿತ್ರ: ಶ್ರೀನಿವಾಸ ಇನಾಮದಾರ್   

ರಾಯಚೂರು: ಜಿಲ್ಲೆಯ ನಾಲ್ಕು ತಾಲ್ಲೂಕುಗಳ ವಿಶೇಷವಾಗಿ ಕುಗ್ರಾಮಗಳ ವಿದ್ಯಾರ್ಥಿನಿಯರಿಗೆ ರಾಯಚೂರಿನ ಸ್ಟೇಶನ್ ರಸ್ತೆಯಲ್ಲಿರುವ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಶಿಕ್ಷಣದ ಕೇಂದ್ರವಾಗಿದೆ. ಪ್ರತಿ ವರ್ಷ ಇಲ್ಲಿ ವಿದ್ಯಾರ್ಥಿನಿಯರು ವಾರಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಅರ್ಜಿ ಸಲ್ಲಿಸಿ ಪ್ರವೇಶ ಪಡೆಯುತ್ತಿದ್ದಾರೆ.

ಕಾಲೇಜಿನಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗವಿದೆ. ನಗರ, ರಾಯಚೂರು ತಾಲ್ಲೂಕು ಮಾತ್ರವಲ್ಲದೇ ಸಿರವಾರ, ಮಾನ್ವಿ, ಲಿಂಗಸೂಗೂರು, ದೇವದುರ್ಗ ತಾಲ್ಲೂಕಿನ ವಿದ್ಯಾರ್ಥಿನಿಯರೂ ಇಲ್ಲಿ ಪ್ರವೇಶ ಪಡೆದಿದ್ದಾರೆ.

ಕಲಾ ವಿಭಾಗದಲ್ಲಿಯೇ ಗರಿಷ್ಠ ಪ್ರವೇಶಾತಿ ಪಡೆಯುತ್ತಿರುವ ಕಾರಣ ‘ಎ‘, ‘ಬಿ‘ ಹಾಗೂ ‘ಸಿ‘ ವಿಭಾಗ ಮಾಡಲಾಗಿದೆ. ಪಿಯುಸಿ ಪ್ರಥಮ ವರ್ಷಕ್ಕೆ ಕಲಾ ವಿಭಾಗದಲ್ಲಿ ‘ಎ’ ವಿಭಾಗಕ್ಕೆ 117, ‘ಬಿ’ ವಿಭಾಗಕ್ಕೆ 68, ‘ಸಿ’ ವಿಭಾಗಕ್ಕೆ 42, ವಾಣಿಜ್ಯ ವಿಭಾಗದಲ್ಲಿ 68 ಹಾಗೂ ವಿಜ್ಞಾನ ವಿಭಾಗದಲ್ಲಿ 100 ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದಾರೆ. .ಪ್ರಥಮ ವರ್ಷ ಪ್ರವೇಶಾತಿ ಮುಂದುವರಿದಿರುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ADVERTISEMENT

ಈಗಾಗಲೇ ದ್ವಿತೀಯ ಪಿಯುಸಿಯಲ್ಲಿ ಒಟ್ಟು 733 ವಿದ್ಯಾರ್ಥಿನಿಯರು ಅಭ್ಯಾಸ ಮಾಡುತ್ತಿದ್ದು, ಈ ಪೈಕಿ ಕಲಾ ವಿಭಾಗದಲ್ಲಿ 466 , ವಿಜ್ಞಾನ ವಿಭಾಗದಲ್ಲಿ 138 ಹಾಗೂ ವಾಣಿಜ್ಯ ವಿಭಾಗದಲ್ಲಿ 122 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಜಿಲ್ಲಾ ಕೇಂದ್ರದಲ್ಲಿ ವಸತಿ ನಿಲಯದ ಸೌಕರ್ಯವಿರುವ ಕಾರಣ ಬೇರೆ ತಾಲ್ಲೂಕುಗಳ ವಿದ್ಯಾರ್ಥಿನಿಯರು ಈ ಕಾಲೇಜಿನಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. 

ಉಪನ್ಯಾಸಕರ ಕೊರತೆ: ಕಳೆದ ವರ್ಷದ ಫಲಿತಾಂಶ ನೋಡುವುದಾದರೆ 633 ವಿದ್ಯಾರ್ಥಿಗಳು ಪರೀಕ್ಷೆ ಬರೆದವರ ಪೈಕಿ 420 ಅಭ್ಯಾರ್ಥಿಗಳು ಪಾಸ್ ಆಗಿದ್ದಾರೆ. ಇದರಲ್ಲಿ 42 ಡಿಸ್ಟಿಂಕ್ಷನ್, 269 ಪ್ರಥಮ ಶ್ರೇಣಿ, ಉಳಿದ ವಿದ್ಯಾರ್ಥಿಗಳು ದ್ವಿತೀಯ ಹಾಗೂ ಸಾಮಾನ್ಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಕಲಾ ವಿಭಾಗದಲ್ಲಿ ಶೇಕಡ 58, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ತಲಾ ಶೇಕಡ 60 ಫಲಿತಾಂಶ ಬಂದಿದೆ.

ಕಾಲೇಜಿನಲ್ಲಿ ರಾಜ್ಯಶಾಸ್ತ್ರ 2, ಇಂಗ್ಲಿಷ್, ಕನ್ನಡ, ಉರ್ದು ಹಾಗೂ ಜೀವಶಾಸ್ತ್ರದ ತಲಾ ಒಂದು ಸೇರಿ ಒಟ್ಟು 6 ಉಪನ್ಯಾಸಕರ ಕೊರತೆ ಇದೆ. ಪ್ರತಿ ವರ್ಷ ಅತಿಥಿ ಉಪನ್ಯಾಸಕರನ್ನೇ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಬಾರಿ ಒಂದು ವಾರವಾದರೂ ನೇಮಕ ಮಾಡಿಲ್ಲ. ಶಾಶ್ವತ ಉಪನ್ಯಾಸಕರ ನೇಮಕವಾಗದ ಕಾರಣ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಪರಿಣಾಮ ಬೀರುತ್ತಿದೆ. ಅಲ್ಲದೇ ನೇಮಕಾತಿ ಮಾಡಿಕೊಳ್ಳುವ ಸಂಬಂಧ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರ ನಡುವೆ ಆಗಾಗ ಹಗ್ಗಜಗ್ಗಾಟ ನಡೆಯುತ್ತದೆ. ರಾಜಕೀಯ ಹಸ್ತಕ್ಷೇಪದಿಂದ ಈ ಹಿಂದೆ ವಿವಾದಗಳು ಸೃಷ್ಟಿಯಾಗಿರುವುದನ್ನು ಮರೆಯುವಂತಿಲ್ಲ.

16 ಅತಿಥಿ ಉಪನ್ಯಾಸಕರು ಬೇಕು: ಕಾಲೇಜಿನಲ್ಲಿ 20 ಹುದ್ದೆಗಳು ಇವೆ. 12 ಕಾಯಂ ಉಪನ್ಯಾಸಕರು ಇದ್ದಾರೆ. 8 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಬೋಧನೆ ಮಾಡಲು 16 ಅತಿಥಿ ಉಪನ್ಯಾಸಕರ ಅಗತ್ಯವಿದೆ. ಸುಸಜ್ಜಿತವಾದ ಪ್ರಯೋಗಾಲಯ ಹಾಗೂ ಗ್ರಂಥಾಲಯ ಸೌಲಭ್ಯವಿದೆ. ಕಾಲೇಜಿನಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ಎಂಜಿನಿಯರ್, ಉಪನ್ಯಾಸಕ, ಹೆಡ್‌ಮಾಸ್ಟರ್, ‍ಪೊಲೀಸ್ ಹಾಗೂ ವಿವಿಧ ಇಲಾಖೆಗಳಲ್ಲಿ ಎಫ್‌ಡಿಎ, ಎಸ್‌ಡಿಎ ಆಗಿದ್ದಾರೆ.

ರಾಯಚೂರಿನ ಸ್ಟೇಶನ್ ರಸ್ತೆಯಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡ / ಚಿತ್ರ: ಶ್ರೀನಿವಾಸ ಇನಾಮದಾರ್

‘ಕಾಲೇಜಿನ ಉಪನ್ಯಾಸಕರ ಕೊರತೆ ನೀಗಿಸಲು ಅತಿಥಿ ಉಪನ್ಯಾಸಕರ ನೇಮಕದ ಕುರಿತು ಪದವಿ ಪೂರ್ವ ಕಾಲೇಜು ಇಲಾಖೆಯ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ. ಶೀಘ್ರವೇ ನೇಮಕ ಮಾಡುವ ಭರವಸೆ ನೀಡಿದ್ದಾರೆ’ ಎಂದು ಕಾಲೇಜಿನ ಪ್ರಾಚಾರ್ಯ ಗೋಪಾಲನಾಯಕ ತಿಳಿಸಿದರು.

ರಾಯಚೂರಿನ ಸ್ಟೇಶನ್ ರಸ್ತೆಯಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕೊಠಡಿಗಳು

ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿಗಳಿದ್ದರೂ ಇಲ್ಲಿರುವುದು 10 ಶೌಚಾಲಯಗಳು. ಅದರಲ್ಲಿ ಎರಡು ಹಾಳಾಗಿದ್ದು, ಬಳಸಲು ಯೋಗ್ಯವಿಲ್ಲ. ಹೆಚ್ಚುವರಿಯಾಗಿ ನಾಲ್ಕು ಶೌಚಾಲಯಗಳ ನಿರ್ಮಾಣಕ್ಕೆ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.