ADVERTISEMENT

ಲಿಂಗಸುಗೂರು: ವರ್ಗಾವಣೆ ಕಾಯ್ದೆ ಫಜೀತಿ, 62 ಹುದ್ದೆಗಳಲ್ಲಿ 59 ಹುದ್ದೆ ಖಾಲಿ

ಪ್ರಜಾವಾಣಿ ವಿಶೇಷ
Published 13 ಆಗಸ್ಟ್ 2023, 6:21 IST
Last Updated 13 ಆಗಸ್ಟ್ 2023, 6:21 IST
ಲಿಂಗಸುಗೂರು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಕಟ್ಟಡದ ಹೊರ ನೋಟ
ಲಿಂಗಸುಗೂರು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಕಟ್ಟಡದ ಹೊರ ನೋಟ   

ನಂದಿಕೋಲಮಠ

***

ಲಿಂಗಸುಗೂರು: ಸ್ಥಳೀಯ ಸರ್ಕಾರಿ ಪಾಲಿಟೆಕ್ನಿಕ್‍ ಕಾಲೇಜಿನ ಸಿವಿಲ್‍, ಕಂಪ್ಯೂಟರ್‌ ಸೈನ್ಸ್, ಎಲೆಕ್ಟ್ರಾನಿಕ್‍ ಅಂಡ್ ಕಮ್ಯುನಿಕೇಷನ್‍, ಮೆಕ್ಯಾನಿಕಲ್‍, ಆಟೊಮೊಬೈಲ್‍ ಡಿಪ್ಲೊಮಾ ಕೋರ್ಸ್‍ಗಳಿಗೆ ಇರಬೇಕಾದ 62 ಬೋಧನಾ ಸಿಬ್ಬಂದಿ ಪೈಕಿ ಕೇವಲ ಮೂವರು ಬೋಧನಾ ಸಿಬ್ಬಂದಿ ಇದ್ದು, ಉಳಿದ 59 ಹುದ್ದೆಗಳು ಖಾಲಿ ಇರುವುದರಿಂದ ವಿದ್ಯಾರ್ಥಿಗಳ ಕಲಿಕೆಗೆ ತೀವ್ರ ಹಿನ್ನಡೆಯಾಗಿದೆ.

ADVERTISEMENT

ಆ 10ರವರೆಗೆ 7 ಜನ ಉಪನ್ಯಾಸಕರು ಇದ್ದರು. ತಾಂತ್ರಿಕ ಶಿಕ್ಷಣ ಇಲಾಖೆ ವರ್ಗಾವಣೆ ನಿಯಮಗಳಿಂದ ಇದ್ದ ಉಪನ್ಯಾಸಕರು ಬೇರೆಡೆ ವರ್ಗಾವಣೆಗೊಂಡಿದ್ದರಿಂದ ಪಾಲಿಟೆಕ್ನಿಕ್ ಕಾಲೇಜು ಬಹುತೇಕ ಖಾಲಿಯಾದಂತಾಗಿದೆ. ಅರೆಕಾಲಿಕ ಉಪನ್ಯಾಸಕರೇ ಪಾಠ, ಪ್ರಯೋಗ ನಡೆಸುತ್ತಿದ್ದಾರೆ.

ಡಿಪ್ಲೊಮಾ ಕೋರ್ಸ್‍ಗಳ ವಿವಿಧ ಬೋಧನಾ ವಿಷಯಗಳಿಗೆ ಸಂಬಂಧಿಸಿ 31 ಉಪನ್ಯಾಸಕ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ಈ ಪೈಕಿ ಕೇವಲ ಮೂವರು ಉಪನ್ಯಾಸಕರಿದ್ದು, ಅದರಲ್ಲಿ ಒಬ್ಬರು ಎಂ.ಟೆಕ್‍. ಓದಲು ಹೋಗಿದ್ದಾರೆ.

ಇನ್ನು ಸಿಸ್ಟಮ್‍ ಅನಾಲಿಸಿಸ್ಟ್‌, ಬೋಧಕರು, ಸಹಾಯಕ ಬೋಧಕರು, ಮೆಕ್ಯಾನಿಕ್‌, ಸಹಾಯಕರು ಸೇರಿ 31 ಹುದ್ದೆಗಳು ಮಂಜೂರು ಇವೆ. ಈ ಪೈಕಿ ಒಬ್ಬರು ಮಾತ್ರ ಕರ್ತವ್ಯದಲ್ಲಿದ್ದು ಉಳಿದ ಹುದ್ದೆಗಳು ಖಾಲಿ ಉಳಿದಿವೆ.

ಐದು ವಿವಿಧ ಡಿಪ್ಲೋಮಾ ಕೋರ್ಸ್‍ಗಳಿಗೆ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಈ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಉಪನ್ಯಾಸಕರು ಸೇರಿದಂತೆ ಮೂವರು ಬೋಧನಾ ಸಿಬ್ಬಂದಿ ಇದ್ದಾರೆ. ಪ್ರಾಚಾರ್ಯ ಹುದ್ದೆಯೂ ಖಾಲಿ ಇದ್ದು, ಹಿರಿಯ ಉಪನ್ಯಾಸಕ ವೀರೇಶ ಎರಡು ದಿನಗಳ ಹಿಂದೆ ಪ್ರಭಾರ ಪ್ರಾಚಾರ್ಯರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ರಾಯಚೂರು, ದೇವದುರ್ಗ, ಲಿಂಗಸುಗೂರಗಳಲ್ಲಿ ಈಗಾಗಲೆ ಸರ್ಕಾರಿ ಪಾಲಿಟೆಕ್ನಿಕ್‍ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಈಗ ಪುನಃ ಅರಕೇರ ಮತ್ತು ಮಸ್ಕಿ ಪಟ್ಟಣಗಳಿಗೆ ಹೊಸ ಪಾಲಿಟೆಕ್ನಿಕ್‍ ಕಾಲೇಜು ಮಂಜೂರು ಮಾಡಿದ್ದು ಹುದ್ದೆಗಳ ಮಂಜೂರಾತಿ ನೀಡಿಲ್ಲ.

ಸ್ಥಳೀಯ ಸರ್ಕಾರಿ ಪಾಲಿಟೆಕ್ನಿಕ್‍ ಕಾಲೇಜಿಗೆ ಬೋಧನೆ ಮತ್ತು ಪ್ರಾಯೋಗಿಕ ತರಬೇತಿ ನೀಡಲು ಸುಸಜ್ಜಿತ ಕಟ್ಟಡ, ಗ್ರಂಥಾಲಯ, ಪ್ರಯೋಗಾಲಯಗಳಿವೆ. ವಿದ್ಯಾರ್ಥಿನಿಯರಿಗಾಗಿ ಸುಸಜ್ಜಿತ ವಸತಿ ನಿಲಯ ವ್ಯವಸ್ಥೆ ಇದ್ದರೂ ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿದೆ. ಶಾಸಕರು, ಸಂಸದರು, ವಿಧಾನಪರಿಷತ್‌ ಸದಸ್ಯರು ಮಂಜೂರಾದ ಹುದ್ದೆಗಳ ಭರ್ತಿಗೆ ಮುಂದಾಗಬೇಕು ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.

ಪ್ರಭಾರ ಪ್ರಾಚಾರ್ಯ ವಿರೇಶ ಮಾತನಾಡಿ, ‘ನಾನು ಎಲೆಕ್ಟ್ರಾನಿಕ್ಸ್‌ ಅಂಡ್‍ ಕಮ್ಯುನಿಕೇಷನ್‍ ವಿಭಾಗದ ಉಪನ್ಯಾಸಕ ಹುದ್ದೆಗೆ ಬಂದಿರುವೆ. ಇರುವ ಮೂವರಲ್ಲಿ ಹಿರಿಯ ಉಪನ್ಯಾಸಕನಾಗಿದ್ದರಿಂದ ಪ್ರಾಚಾರ್ಯ ಹುದ್ದೆ ವಹಿಸಿಕೊಂಡಿರುವೆ. ಅರೆಕಾಲಿಕ ಉಪನ್ಯಾಸಕರ ಸೇವೆ ಪಡೆದುಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಪ್ರಾಮಾಣಿಕ ಪ್ರಯತ್ನಕ್ಕೆ ನೀಲ ನಕ್ಷೆ ಸಿದ್ಧಪಡಿಸಿಕೊಂಡಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.