ADVERTISEMENT

ಲಿಂಗಸುಗೂರು | 'ವಿಚಾರಣೆ ನೆಪದಲ್ಲಿ ಕಿರುಕುಳ ಸಹಿಸುವುದಿಲ್ಲ'

ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಯೋಜನೆ ಪರಿಶೀಲನೆ (ಕೆಡಿಪಿ) ಸಭೆಯಲ್ಲಿ ಶಾಸಕ ವಜ್ಜಲ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 14:27 IST
Last Updated 30 ಅಕ್ಟೋಬರ್ 2024, 14:27 IST
ಲಿಂಗಸುಗೂರಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಮಾನಪ್ಪ ವಜ್ಜಲ ಮಾತನಾಡಿದರು
ಲಿಂಗಸುಗೂರಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಮಾನಪ್ಪ ವಜ್ಜಲ ಮಾತನಾಡಿದರು   

ಲಿಂಗಸುಗೂರು: ‘ಕಾನೂನು ಬಾಹಿರ ಚಟುವಟಿಕೆಗಳನ್ನು ಮಟ್ಟ ಹಾಕಬೇಕಾದ ಪೊಲೀಸ್‍ ಅಧಿಕಾರಿಗಳು ಅನಗತ್ಯ ದಂಡ, ಸುಳ್ಳು ಪ್ರಕರಣ ದಾಖಲಿಸುತ್ತ ಹೊರಟಿದ್ದಾರೆ. ವಿಚಾರಣೆ ನೆಪದಲ್ಲಿ ನಿರಪರಾಧಿಗಳಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಭವಿಷ್ಯದಲ್ಲಿ ಇದನ್ನು ಸಹಿಸಲಾಗದು’ ಎಂದು ಶಾಸಕ ಮಾನಪ್ಪ ವಜ್ಜಲ ಎಚ್ಚರಿಕೆ ನೀಡಿದರು.

ಬುಧವಾರ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಯೋಜನೆ ಪರಿಶೀಲನಾ (ಕೆಡಿಪಿ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಕ್ಷೇತ್ರದಲ್ಲಿ ಮಟ್ಕಾ, ಇಸ್ಪೀಟ್‍, ಮದ್ಯ ಅಕ್ರಮ ಮಾರಾಟ ಸೇರಿದಂತೆ ಜೂಜಾಟ, ಕಳ್ಳತನದಂಥ ಕಾನೂನು ಬಾಹಿರ ಚಟುವಟಿಕೆಗಳು ನಿಯಂತ್ರಣ ಮೀರಿವೆ. ಸರ್ಕಾರಕ್ಕೆ ಲೆಕ್ಕ ತೋರಿಸಲು ಸುಳ್ಳು ಪ್ರಕರಣ ಹಾಕಬೇಡಿ. ಕಾನೂನು ಬಾಹಿರ ಕೃತ್ಯ ಎಸಗುವ ವ್ಯಕ್ತಿ ಯಾರೇ ಆಗಿರಲಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಮುಖ್ಯ ರಸ್ತೆಗಳ ಮೇಲೆ ವಾಹನ ನಿಲುಗಡೆ ಮಾಡುತ್ತಿರುವುದರಿಂದ ಸುಗಮ ಸಂಚಾರಕ್ಕೆ ತೊಂದರೆ ಆಗುತ್ತಿರುವ ಬಗ್ಗೆ ಕಿಂಚಿತ್ತು ಕಾಳಜಿ ವಹಿಸುತ್ತಿಲ್ಲ. ವೃತ್ತಗಳಲ್ಲಿ ಸಿಗ್ನಲ್‍ ಮತ್ತು ಸಿಸಿ ಟಿವಿ ಕ್ಯಾಮೆರಾ ಅಳವಡಿಕೆಗೆ ಅನುದಾನ ನೀಡುವ ಭರವಸೆ ನೀಡಿದರೂ ಕಾರ್ಯ ನಡೆಯುತ್ತಿಲ್ಲ. ಲಿಂಗಸುಗೂರು ಕ್ಷೇತ್ರದಲ್ಲಿ ಬೇರೆ ಕಾನೂನುಗಳು ಕೆಲಸ ಮಾಡುತ್ತಿರುವ ಶಂಕೆ ಮೂಡುತ್ತಿದೆ. ಜನಸ್ನೇಹಿ ಪೊಲೀಸ್‍ ಅಧಿಕಾರಿಗಳಾಗಿ’ ಎಂದು ಸಲಹೆ ನೀಡಿದರು.

ADVERTISEMENT

ಬಹುತೇಕ ಇಲಾಖೆ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡುವುದರ ಜೊತೆಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವಷ್ಟು ಸಿದ್ಧತೆ ಮಾಡಿಕೊಳ್ಳದೆ ಸಭೆಗೆ ಬರುತ್ತಿದ್ದಾರೆ. ಇನ್ನೂ ಕೆಲ ಅಧಿಕಾರಿಗಳು ಸಭೆಗೆ ಬರುವುದಿಲ್ಲ. ಜಲಜೀವನ್‍ ಮಿಷನ್ ಯೋಜನೆಯಡಿ ಕೆಲ ಗ್ರಾಮಗಳಲ್ಲಿ ಕೆಲಸವೇ ಆರಂಭಗೊಂಡಿಲ್ಲ. ಕಾಮಗಾರಿ ಮುಗಿದಿರುವ ಬಗ್ಗೆ ನಾಮಫಲಕ ಅಳವಡಿಸಲಾಗಿದೆ. ಕ್ಷೇತ್ರದಲ್ಲಿ ಏನು ನಡೆಯುತ್ತಿದೆ. ಎತ್ತ ಸಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಮೂರು ಬಾರಿ ಶಾಸಕನಾಗಿ ಆಯ್ಕೆಗೊಂಡಿರುವ ನನಗೆ ಇಷ್ಟೊಂದು ಆಟವಾಡಿಸುತ್ತಿದ್ದೀರಿ. ಕೆಲಸ ಮಾಡಲು ಇಷ್ಟ ಇಲ್ಲದ ಅಧಿಕಾರಿಗಳು ಜಾಗ ಖಾಲಿ ಮಾಡಬಹುದು. ಸಾರ್ವಜನಿಕ ಆಸ್ಪತ್ರೆ, ಶಾಲಾ–ಕಾಲೇಜು, ವಸತಿ ನಿಲಯಗಳಿಗೆ ಅಗತ್ಯ ಸೌಲಭ್ಯ ನೀಡಿ ಉತ್ತಮ ಸೇವೆ ನೀಡಲು ಮುಂದಾಗಿ. ಬೇಕಾಗುವ ಅನುದಾನ ನೀಡಲು ಸಿದ್ಧರಿದ್ದೇವೆ. ನೀರಾವರಿ ಪ್ರದೇಶದಲ್ಲಿ ಕೊನೆ ಭಾಗದ ರೈತರಿಗೆ ನೀರು ತಲುಪಿಸಲು ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ಸೂಚಿಸಿದರು.

ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ಸ್ವಚ್ಛತೆ, ನಿತ್ಯ ಶುದ್ಧ ಕುಡಿಯು ನೀರು ಪೂರೈಕೆ, ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ಸಿಗುತ್ತಿಲ್ಲ. ಮುದಗಲ್ ಕೋಟೆ ಸೇರಿದಂತೆ ಸರ್ಕಾರಿ ನಿವೇಶನಗಳ ಒತ್ತುವರಿ ತೆರವಿಗೆ ಮುಂದಾಗಬೇಕು. ಕ್ಷೇತ್ರದ 21 ಕೆರೆ ಭರ್ತಿಗೆ ಯಾವೊಂದು ಇಲಾಖೆ ಮುಂದಾಗದೆ ಹೋಗಿರುವುದು ವಿಪರ್ಯಾಸ. ಅಧಿಕಾರಿಗಳ ಈ ವರ್ತನೆ ಅಭಿವೃದ‍್ದಿಗೆ ಮಾರಕವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಮಾತನಾಡಿ, ‘ತಾಲ್ಲೂಕಿನ ಬಹುತೇಕ ಕುಡಿಯುವ ನೀರು ಬಳಕೆಯ ಕೊಳವೆಬಾವಿಗಳ ಅಂತರ್ಜಲ ಫ್ಲೋರೈಡ್‍ ಅಂಶ ಒಳಗೊಂಡಿವೆ. ಕಾರಣ ಪ್ರತಿಯೊಂದು ಕೊಳವೆಬಾವಿ ಪರೀಕ್ಷೆಗೆ ಒಳಪಡಿಸಬೇಕು. ಎಸ್‌ಎಸ್‌ಎಲ್‌ಸಿ ಮಕ್ಕಳ ಗುಣಮಟ್ಟದ ಫಲಿತಾಂಶಕ್ಕೆ ವಿಶೇಷ ಯೋಜನೆ ರೂಪಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ತಹಶೀಲ್ದಾರ್ ಶಂಸಾಲಂ ನಾಗಡದಿನ್ನಿ ಹಾಜರಿದ್ದರು. ತಾಲ್ಲೂಕಿನ ವಿವಿಧ ಇಲಾಖೆಗಳು ಮುಖ್ಯಸ್ಥರು ಸಭೆಯಲ್ಲಿ ಹಾಜರಿದ್ದರು.

ಅಧಿಕಾರಿಗಳಲ್ಲಿ ಮುನಿಸು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಜರುಗಿದ ಕೆಡಿಪಿ ಸಭೆಯಲ್ಲಿ ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಸಭಾಂಗಣದಲ್ಲಿ ಆಸೀನರಾಗಿದ್ದರು. ಏಕಾಏಕಿ ಕೃಷ್ಣ ಭಾಗ್ಯ ಜಲ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಸುರೇಂದ್ರ ರೆಡ್ಡಿ ಅವರನ್ನು ಮಾತ್ರ ವೇದಿಕೆಗೆ ಆಹ್ವಾನಿಸಿದ್ದು ಕೆಲ ಅಧಿಕಾರಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.