ಹಟ್ಟಿ ಚಿನ್ನದಗಣಿ: ಹಟ್ಟಿ ಪಟ್ಟಣದ ಕ್ಯಾಂಪ್ ಪ್ರದೇಶದಲ್ಲಿ ಅಧಿಸೂಚಿತ ಪ್ರದೇಶ ಸಮಿತಿ ವತಿಯಿಂದ ನಿರ್ಮಿಸಿದ ಕುಡಿಯುವ ನೀರು ಶುದ್ಧೀಕರಣ ಘಟಕಗಳು ನಿರುಪಯುಕ್ತವಾಗಿವೆ ಎಂದು ಮಾನವ ಬಂದುತ್ವ ವೇದಿಕೆ ಪದಾಧಿಕಾರಿ ಲಾಲು ಬಂಡಾರಿ ಆರೋಪ ಮಾಡಿದ್ದಾರೆ.
2022-23ನೇ ಸಾಲೀನ 15ನೇ ಹಣಕಾಸು ಯೋಜನೆ ಅಡಿಯಲ್ಲಿ ₹70 ಲಕ್ಷ ವೆಚ್ಚದಲ್ಲಿ 5 ಶುದ್ದ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿತ್ತು. ಆದರೆ, 4 ಮಾತ್ರ ನಿರ್ಮಿಸಲಾಗಿದೆ. ಎರಡು ವರ್ಷ ಕಳೆದರೂ ಕಾರ್ಮಿಕರಿಗೆ ಉಪಯೋಗವಾಗಬೇಕಿದ್ದ ಘಟಕ ನೀರುಪಯುಕ್ತವಾಗಿ ಬಿದ್ದಿವೆ ಎನ್ನುತ್ತಾರೆ ಕಾರ್ಮಿಕರು.
ನದಿ ನೀರನ್ನೆ ಶುದ್ಧೀಕರಿಸಿ ಸರಬರಾಜು ಮಾಡಬೇಕು ಎಂಬ ನಿಯಮ ಇದೆ. ಆದರೆ, ಗುತ್ತಿಗೆ ಪಡೆದ ಗುತ್ತಿಗೆದಾರ, ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಸರ್ಕಾರದ ಹಣವನ್ನು ಲೂಟಿ ಮಾಡಿದ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ, ಸರ್ಕಾರದ ಹಣವನ್ನು ಮರಳಿ ಪಡೆಯಬೇಕು ಎನ್ನುತ್ತಾರೆ ಇಲ್ಲಿನ ಜನರು.
ಈಗಾಗಲೇ ನಾಲ್ಕು ಘಟಕಗಳನ್ನು ನಿರ್ಮಾಣ ಮಾಡಲಾಗಿದೆ ಇನ್ನುಳಿದ ಒಂದು ಘಟಕದ ಅನುದಾನ ಖರ್ಚು ಮಾಡದೇ ಹಾಗೆಯೇ ಉಳಿದ್ದಿದ್ದು, ಇದು ಯಾರ ಪಾಲಾಗಿದೆ ಎಂಬುವುದು ಇಂದಿಗೂ ತಿಳಿಯದಾಗಿದೆ. ಅಧಿಕಾರಿಗಳನ್ನು ವಿಚಾರಿಸಿದರೆ ಹಾರಿಕೆ ಉತ್ತರ ನೀಡುತ್ತಾರೆ. ಇಂತಹ ಅಧಿಕಾರಿಗಳಿಂದ ಅಭಿವೃದ್ಧಿ ಅಸಾಧ್ಯ ಎನ್ನುತ್ತಾರೆ ಕಾಲೋನಿ ನಿವಾಸಿಗಳು.
ಹಟ್ಟಿ ಚಿನ್ನದಗಣಿ ಕಂಪನಿಯು ಯಾವುದೇ ಯೋಜನೆ ಇಲ್ಲದೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಅನುಮತಿ ನೀಡಿದ್ದು ಜನರಲ್ಲಿ ಅನುಮಾನ ಮೂಡಿದೆ. ನೀರೇ ಇಲ್ಲದ ಸ್ಧಳದಲ್ಲಿ ಘಟಕಗಳನ್ನು ನಿರ್ಮಣ ಮಾಡಲಾಗಿದೆ. ನೀರು ಪೂರೈಕೆ ಮಾಡಲು ಯಾವ ಕ್ರಮ ಕೈಗೊಳ್ಳಬೇಕು ಎಂಬುವುದನ್ನು ಅರಿಯದ ಅಧಿಕಾರಿಗಳು ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಸರ್ಕಾರದ ಹಣವನ್ನು ಗುತ್ತಿಗೆದಾರ ಲೂಟಿ ಮಾಡುತ್ತಿದ್ದಾರೆ. ಇಂತವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎನ್ನುತ್ತಾರೆ ಕಾರ್ಮಿಕರು.
ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾರ್ಮಿಕರಿಗೆ ಉಪಯೋಗವಾಗಬೇಕಿದ್ದ ಶುದ್ಧ ಕುಡಿಯುವ ನೀರಿನ ಘಟಕ ಜನರಿಗೆ ಉಪಯೋಗಕ್ಕೆ ಬರುವಂತೆ ಮಾಡಿಕೊಡಬೇಕು ಎನ್ನುತ್ತಾರೆ ಕಾರ್ಮಿಕ ಮುಖಂಡರು ಒತ್ತಾಯಿಸಿದ್ದಾರೆ.
ಸರ್ಕಾರ ಹಣವನ್ನು ಗುತ್ತಿಗೆದಾರ ಹಾಗೂ ಅಧಿಕಾರಿಗಳು ಸೇರಿಕೊಂಡು ಕೊಳ್ಳೆ ಹೊಡೆಯುವ ಹುನ್ನಾರ ನಡೆಸಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ದ ಸೂಕ್ತ ತನಿಖೆಗೆ ಆಗಬೇಕಾಗಿದೆಲಾಲು ಬಂಡಾರಿ ಸಮಾಜ ಸೇವಕ
5 ರಲ್ಲಿ 4 ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗಿದೆ. ಇನ್ನೊಂದನ್ನು ನಿರ್ಮಾಣ ಮಾಡಲಾಗುವುದು. ಈಗಾಗಲೇ ಕುಡಿಯುವ ನೀರಿನ ಘಟಕವನ್ನು ಗಣಿ ಕಂಪನಿಗೆ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗಿದೆ. ಅವುಗಳ ನಿರ್ವಹಣೆ ಗಣಿ ಆಡಳಿತ ಮಂಡಳಿ ಮಾಡಬೇಕಿದೆಜಗನ್ನಾಥ ಅಧಿಸೂಚಿತ ಪ್ರದೇಶ ಮುಖ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.