ಮಸ್ಕಿ: ತಾಲ್ಲೂಕಿನ ಬಳಗಾನೂರು, ಲಕ್ಷ್ಮಿ ಕ್ಯಾಂಪ್, ಗೌಡನಭಾವಿ, ಬೆಳ್ಳಿಗನೂರು ಸುತ್ತಮುತ್ತ ಶನಿವಾರ ಸಂಜೆ ಮಳೆಯಾಗಿದೆ. ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಭತ್ತ ಬೆಳೆ ನೆಲ್ಲಕಚ್ಚಿದ್ದು ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸಂಜೆ 5 ಗಂಟೆಯಿಂದ ಏಕಾಏಕಿ ಬಿರುಗಾಳಿಯಿಂದ ಕೂಡಿದ ಮಳೆ ಶುರುವಾಯಿತು. ಸತತ 1 ಗಂಟೆ ಸುರಿದ ಮಳೆಗೆ ರೈತರು ತತ್ತರಿಸಿದ್ದಾರೆ. ಕೈಗೆ ಬಂದ ಭತ್ತದ ಬೆಳೆ ನೆಲಕ್ಕುರುಳಿದ್ದರಿಂದ ರೈತರು ಕಂಗಾಲಾಗಿದ್ದಾರೆ.
ಭಾನುವಾರ ಬೆಳಿಗ್ಗೆ ಮಳೆಯಿಂದ ಬೆಳೆ ಹಾನಿಯಾದ ಗ್ರಾಮಗಳಿಗೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು. ದೂರವಾಣಿ ಮೂಲಕ ತಹಶೀಲ್ದಾರ್ ಅವರೊಂದಿಗೆ ಮಾತನಾಡಿದ ಅವರು ಕೂಡಲೇ ತಾಲ್ಲೂಕು ಆಡಳಿತ ಗ್ರಾಮ ಲೆಕ್ಕಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರಿಂದ ಭತ್ತ ಹಾಗೂ ಇನ್ನೀತರ ಬೆಳೆಗಳ ನಷ್ಟದ ಸಮೀಕ್ಷೆ ಕೈಗೊಂಡು ಸೂಕ್ತ ಪರಿಹಾರ ಕಲ್ಪಿಸಲು ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಮನವಿ ಮಾಡಿದರು.
ಬಿಜೆಪಿ ಮಂಡಲ ಅಧ್ಯಕ್ಷ ಶರಣಬಸವ ಸೊಪ್ಪಿಮಠ, ಮುಖಂಡರಾದ ಶೇಖರಪ್ಪ ಮೇಟಿ , ಸಂತೋಷ ಅಂಬ್ಲಿ, ಗೋವಿಂದ ರೆಡ್ಡಿ ಗೌಡನಬಾವಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿಕುಮಾರ ಬೆಳ್ಳಿಗನೂರು, ಅಮರೇಶ ಗೌಡನಬಾವಿ, ಬಸಪ್ಪ, ರಾಘವೇಂದ್ರ ಗುತ್ತೇದಾರ, ಮುದುಕಪ್ಪ ಹಳ್ಳಿ, ಬಿ. ತಿಕ್ಕಯ್ಯ, ರಾಜಶೇಖರ, ವೀರೇಶ ಸ್ವಾಮಿ, ಗಣೇಶ, ಬಸವರಾಜ ನಾಯಕ ಸೇರಿದಂತೆ ಬೆಳೆ ಹಾನಿಗೊಳಗಾದ ಗ್ರಾಮಗಳ ರೈತರು ಇದ್ದರು.
ಮಳೆಯಿಂದಾಗಿ ಹಾಳಾದ ಭತ್ತದ ಬೆಳೆಯ ಸರ್ವೇ ಮಾಡುವಂತೆ ಕಂದಾಯ ನಿರೀಕ್ಷಕರಿಗೆ ಸೂಚನೆ ನೀಡಲಾಗಿದೆ. ಸೋಮವಾರ ಗ್ರಾಮಗಳಿಗೆ ತೆರಳಿ ಸಮೀಕ್ಷೆ ನಡೆಸಿ ವರದಿ ಕೊಡಲಿದ್ದಾರೆ.ಮಲ್ಲಪ್ಪ ಯರಗೋಳ. ತಹಶೀಲ್ದಾರ ಮಸ್ಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.