ADVERTISEMENT

ರಾಯಚೂರು: ಜಿಲ್ಲೆಯಲ್ಲಿ ಹಾಳು ಬಿದ್ದ ಹೆದ್ದಾರಿಗಳು

ಚಂದ್ರಕಾಂತ ಮಸಾನಿ
Published 21 ಅಕ್ಟೋಬರ್ 2024, 5:59 IST
Last Updated 21 ಅಕ್ಟೋಬರ್ 2024, 5:59 IST
ರಾಯಚೂರು ಜಿಲ್ಲೆಯ ಕವಿತಾಳದಲ್ಲಿ ಹಾದು ಹೋಗಿರುವ ಬೆಳಗಾವಿ–ರಾಯಚೂರು ಹೆದ್ದಾರಿಯ ದುಸ್ಥಿತಿ
ರಾಯಚೂರು ಜಿಲ್ಲೆಯ ಕವಿತಾಳದಲ್ಲಿ ಹಾದು ಹೋಗಿರುವ ಬೆಳಗಾವಿ–ರಾಯಚೂರು ಹೆದ್ದಾರಿಯ ದುಸ್ಥಿತಿ   

ರಾಯಚೂರು: ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿದ್ದರೂ ಒಂದೂ ಸಾರ್ವಜನಿಕ ಸಂಚಾರಕ್ಕೆ ಯೋಗ್ಯವಾಗಿಲ್ಲ. ಹೆದ್ದಾರಿಗಳಲ್ಲಿ ಒಂದಿಲ್ಲೊಂದು ಕಡೆ ಸಮಸ್ಯೆ ಇದೆ. ಕೆಲವು ಕಡೆ ಅಲ್ಲಲ್ಲಿ ಅವೈಜ್ಞಾನಿಕವಾಗಿ ರಸ್ತೆ ವಿಭಜಕ ನಿರ್ಮಿಸಿದ ಕಾರಣ ಹೆದ್ದಾರಿಗಳೇ ಕಿರಿದಾಗಿವೆ.

ಹೆದ್ದಾರಿಗಳ ಮಧ್ಯೆಯೇ ತಗ್ಗುಗಳು ಬಿದ್ದರೂ ಕೇಳುವವರಿಲ್ಲ. ಕೆಲವು ಕಡೆ ಹೆದ್ದರಿಯ ಒಂದು ಬದಿಗೆ ಕಿತ್ತುಕೊಂಡು ಹೋಗಿದೆ. ಹೆಚ್ಚು ವಾಹನ ಸಂಚಾರವಿರುವ ರಾಯಚೂರು–ಬೆಳಗಾವಿ ನಡುವಿನ ಹೆದ್ದಾರಿ ಸ್ಥಿತಿ ಅತಿ ಕೆಟ್ಟದಾಗಿದೆ. ಜಿಲ್ಲಾ ಕೇಂದ್ರದಿಂದ ಜಿಲ್ಲೆಯ ಗಡಿವರೆಗೆ ಲಿಂಗಸುಗೂರು ತಾಲ್ಲೂಕಿನ ಮುದಗಲ್‌ವರೆಗೂ 110 ರೋಡ್‌ ಹಂಪ್ಸ್‌ಗಳಿವೆ. ದೂರದ ಊರಿನ ಪ್ರಯಾಣಿಕರು ನಿಗದಿತ ಸಮಯಕ್ಕೆ ತಮ್ಮ ಊರಿಗೆ ತಲುಪಲು ಸಾಧ್ಯವಾಗದೇ ಸಮಸ್ಯೆ ಎದುರಿಸುತ್ತಿದ್ದಾರೆ.

ಹೆದ್ದಾರಿ ಅಲ್ಲಲ್ಲಿ ಕಿತ್ತುಕೊಂಡು ಹೋಗಿರುವ ಕಾರಣ ಪಂಕ್ಚರ್‌ ಆಗುವುದು ಹಾಗೂ ರಸ್ತೆ ಮಧ್ಯೆಯೇ ಕೆಟ್ಟು ನಿಲ್ಲುವುದು ಸಾಮಾನ್ಯವಾಗಿದೆ. ಹಾಳಾದ ಹೆದ್ದಾರಿಯಿಂದ ರಾಯಚೂರು ಮಾರ್ಗವಾಗಿ ಹೈದರಾಬಾದ್‌ಗೆ ಹೆಚ್ಚು ಬಸ್‌ಗಳು ಸಂಚರಿಸುತ್ತಿಲ್ಲ. ಎಲ್ಲವೂ ವಿಜಯಪುರ, ಕಲಬುರಗಿ, ಬೀದರ್‌ ಜಿಲ್ಲೆಯ ಹುಮಾನಾದ್‌ ಮಾರ್ಗವಾಗಿ ಹೋಗುತ್ತಿವೆ. ಇದೇ ಕಾರಣದಿಂದಾಗಿ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಡಕೋಟಾ ಬಸಗಳಂತೆ ಆಗಿವೆ.

ADVERTISEMENT

ಲಿಂಗಸುಗೂರು ತಾಲ್ಲೂಕಿನ ಹೊನ್ನಳ್ಳಿ ಸಮೀಪದ ಜೇವರಗಿ –ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಗುಂಡಿ ಬಿದ್ದಿದೆ. ಸಂಬಂಧಪಟ್ಟ ಅಧಿಕಾರಿಗಳು ಹೆದ್ದಾರಿ ದುರಸ್ತಿ ಮಾಡಲು ಸಿದ್ಧರಿಲ್ಲ. ಹೀಗಾಗಿ ಸಾರ್ವಜನಿಕರೇ ರಸ್ತೆ ಮಧ್ಯೆ ಧ್ವಜ ನೆಟ್ಟು ವಾಹನ ಚಾಲಕರಿಗೆ ಎಚ್ಚರಿಕೆ ನೀಡಿದ್ದಾರೆ.

ಹೆದ್ದಾರಿಯಲ್ಲಿ ದೂಳೇ ದೂಳು

ಕವಿತಾಳ: ಪಟ್ಟಣದ ಮೂಲಕ ಹಾಯ್ದು ಹೋದ ಹೈದರಾಬಾದ್ ಬೆಳಗಾವಿ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದೆ. ಇಲ್ಲಿನ ಹೊಸ ಬಸ್ ನಿಲ್ದಾಣದಿಂದ ವಸತಿ ನಿಲಯದ ವರೆಗೆ ಅವೈಜ್ಞಾನಿಕವಾಗಿ ನಿರ್ಮಿಸಿದ ರಸ್ತೆ ವಿಭಜಕ ಅವಾಂತರಗಳನ್ನು ಸೃಷ್ಟಿಸುತ್ತಿದ್ದು ಈ ರಸ್ತೆಯಲ್ಲಿ ಸಂಚರಿಸುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಅಚ್ಚರಿಗೆ ಕಾರಣವಾಗಿದೆ.

ಕೋಟಿ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ವಿಭಜಕ ಅಪೂರ್ಣವಾಗಿದ್ದು ರಸ್ತೆ ಬದಿಯಲ್ಲಿ ವಾಹನಗಳ ಸಂಚಾರದಿಂದ ವಿಪರೀತ ದೂಳು ಹರಡುತ್ತಿದೆ . ಹೀಗಾಗಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಮಳಿಗೆಗಳ ವ್ಯಾಪಾರಸ್ಥರು ಮತ್ತು ಅಂಗಡಿ ಮಾಲೀಕರ ಗೋಳು ಹೇಳತೀರದಾಗಿದೆ. ದೂಳಿನಿ'ದಾಗಿ ವ್ಯಾಪಾರ ವಹಿವಾಟಿನ ಮೇಲೆ ಪರಿಣಾಮ ಬೀರಿದೆ ಎನ್ನುತ್ತಾರೆ ವರ್ತಕರು. ಏಖ ಮುಖ ಸಂಚಾರ ವ್ಯವಸ್ಥೆಯಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ ಮತ್ತು ವಾಹನಗಳು ವಿಭಜಕಕ್ಕೆ ಡಿಕ್ಕಿ ಹೊಡೆದು ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಿವೆ .

ರಸ್ತೆ ಬದಿ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ರಸ್ತೆ ವಿಸ್ತರಣೆ ಮಾಡುವ ಮೂಲಕ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಎಂದು ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಮೌನೇಶ ಹಿರೇಕುರಬರ ಒತ್ತಾಯಿಸುತ್ತಾರೆ.

ವಿಪರೀತ ದೂಳಿನಿಂದ ಅಂಗಡಿಗಳಲ್ಲಿ ವಸ್ತುಗಳು ಹಾಳಾಗುತ್ತಿವೆ ಇನ್ನೊಂದೆಡೆ ರಸ್ತೆ ಬದಿ ಹಣ್ಣು ಮಾರಾಟ ಮಾಡುವುದು ಮತ್ತು ಹೋಟೆಲ್ ಗಳಲ್ಲಿ ದೂಳು ವ್ಯಾಪಿಸಿ ಶ್ವಾಶಕೋಶ ಸಂಬಂಧಿಸಿದ ಕಾಯಿಲೆಯ ಭೀತಿ ಕಾಡುತ್ತಿದೆ, ಮುಖ್ಯ ರಸ್ತೆಯಲ್ಲಿ ಓಡಾಡಬೇಕಾದರೆ ಮೂಗು ಮುಚ್ಚಿಕೊಂಡು ಹೋಗಬೇಕಿದೆ ಎಂದು ವರ್ತಕ ಲಕ್ಷ್ಮೀಕಾಂತ ಇಲ್ಲೂರು, ತಾಯಪ್ಪ ಹೋಟೆಲ್, ದೇವೇಂದ್ರ ಬಾಗೋಡಿ ಹೇಳುತ್ತಾರೆ.

ಅವೈಜ್ಞಾನಿಕವಾಗಿ ನಿರ್ಮಿಸಿದ ರಸ್ತೆ ವಿಭಜಕ

ಸಿರವಾರ: ಸಿರವಾರ ಪಟ್ಟಣದಲ್ಲಿ ಹಾದು ಹೋಗಿರುವ ಹೈದರಾಬಾದ್- ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯು ಹೆಸರಿಗೆ ಸೀಮಿತವಾಗಿದೆ. ಹೆ್ದ್ದಾರಿ ಸ್ಥಿತಿ ಹಳ್ಳಿಗಳ ರಸ್ತೆಗಳಿಂತಲೂ ಕೆಟ್ಟದಾಗಿದೆ.

ಮೂರು ಕಿಮೀ ಉದ್ದವಿರುವ ಪಟ್ಟಣದಲ್ಲಿ ಅವೈಜ್ಞಾನಿಕವಾಗಿ ರಸ್ತೆ ವಿಭಜಕ ನಿರ್ಮಿಸಲಾಗಿದೆ. ಹೆದ್ದಾರಿ ವಿಸ್ತರಣೆ ಮಾಡದ ಕಾರಣ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಒಂದು ಮಾರ್ಗದಲ್ಲಿ ಏಕಕಾಲದಲ್ಲಿ ಎರಡು ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಇಲ್ಲಿ ರಸ್ತೆ ವಿಭಜಕಗಳಿಗೆ ವಾಹನಗಳು ಡಿಕ್ಕಿ ಹೊಡೆಯುವುದು ಸಾಮಾನ್ಯವಾಗಿದೆ.

‘ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಒಂದಿಷ್ಟು ತೇಪೆ ಹಾಕಿದ್ದಾರೆ. ಅವು ಸಹ ಸರಿಯಾಗಿಲ್ಲ. ವಾಹನಗಳ ಸಂಚಾರಕ್ಕೆ ಬಹಳ ಸಮಸ್ಯೆಯಾಗುತ್ತಿದೆ‘ ಎಂದು ವಾಹನ ಚಾಲಕರು ಹೇಳುತ್ತಾರೆ.

ಹೆದ್ದಾರಿ ಮಧ್ಯೆ ಮರದ ಟೊಂಗೆಗಳು

ಮಾನ್ವಿ: ಪಟ್ಟಣದ ಮೂಲಕ ಹಾದು ಹೋಗಿರುವ ರಾಜ್ಯ ಹೆದ್ದಾರಿ ಎಸ್.ಎಚ್.23 ಸ್ಥಳೀಯರ ಪಾಲಿಗೆ ಅಪಾಯ, ಅಪಘಾತಗಳಿಗೆ ಆಹ್ವಾನಿಸುವಂತಿದೆ.

ಪಟ್ಟಣದ ಸೂರ್ಯ ಪೆಟ್ರೋಲ್ ಬಂಕ್ ನಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವರೆಗೆ ಇರುವ ಸುಮಾರು 3ಕಿ.ಮೀ ರಾಜ್ಯ ಹೆದ್ದಾರಿಯಲ್ಲಿ ನಿರಂತರವಾಗಿ ಅಪಘಾತಗಳು ಸಂಭವಿಸುತ್ತವೆ. ಪಟ್ಟಣದ ಕೆಲವು ಕಡೆ ಈ ಹೆದ್ದಾರಿಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವುದು ಅಪಘಾತಗಳಿಗೆ ಕಾರಣ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಮಹರ್ಷಿ ವಾಲ್ಮೀಕಿ ವೃತ್ತದಿಂದ ಬಸವ ವೃತ್ತದವರೆಗೆ ಇಳಿಮುಖವಾಗಿರುವ ಹೆದ್ದಾರಿಯಲ್ಲಿ ವೇಗವಾಗಿ ಬರುವ ವಾಹನಗಳು ನಿಯಂತ್ರಣ ಕಳೆದುಕೊಂಡು ಡಿವೈಡರ್ ಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗುವುದು ಇಲ್ಲಿ ಸಾಮಾನ್ಯ. ವಿಭಜಕದ ಮೇಲೆ ಅರಣ್ಯ ಇಲಾಖೆಯವರು ಬೆಳೆಸಿರುವ ಗಿಡಗಳ ನಿರ್ವಹಣೆ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಟೊಂಗೆಗಳು ಅಡ್ಡವಾಗಿ ಬೆಳೆಯುತ್ತಿವೆ. ಎತ್ತರದಲ್ಲಿ ಬೆಳೆದು ನಿಂತಿರುವ ಗಿಡಗಳು ರಸ್ತೆ ದಾಟುವವರಿಗೆ ವಾಹನಗಳು ಕಾಣದಂತೆ ಅಡ್ಡಿಯಾಗಿ ಅಪಘಾತಗಳು ಸಂಭವಿಸಲು ಕಾರಣವಾಗಿವೆ. ಅನೇಕ ವಾಹನ ಸವಾರರು, ಪಾದಚಾರಿಗಳು ಪ್ರಾಣ ಕಳೆದುಕೊಂಡ ಘಟನೆಗಳು ನಡೆದಿವೆ. ಚತುಷ್ಪಥ ನಿರ್ಮಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಬಸನಗೌಡ ಮೇಟಿ ಮನವಿ ಮಾಡುತ್ತಾರೆ.

ನೆನೆಗುದಿಗೆ ಬಿದ್ದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ

ಸಿಂಧನೂರು: ಜೇವರ್ಗಿ-ಚಾಮರಾಜನಗರ 150 ಎ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಲಿಂಗಸುಗೂರನಿಂದ ಸಿಂಧನೂರ ವರೆಗಿನ ಕಾಮಗಾರಿ ಪೂರ್ಣಗೊಂಡಿದೆ. ಸಿಂಧನೂರು ತಾಲ್ಲೂಕಿನ ವೆಂಕಟೇಶ್ವರ ಕ್ಯಾಂಪಿನಿಂದ ಧಡೇಸ್ಗೂರು ಸೇತುವೆ ರವರೆಗೆ ₹ 144 ಕೋಟಿ ವೆಚ್ಚದಲ್ಲಿ ರಸ್ತೆ ಸುಧಾರಣಾ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಆದರೆ, ಒಂದು ವರ್ಷವಾದರೂ ಕಾಮಗಾರಿ ಆರಂಭವಾಗಿಲ್ಲ.

ಧಡೇಸುಗೂರುದಿಂದ ಬಳ್ಳಾರಿ ವರೆಗೆ ಟೆಂಡರ್ ಕರೆದು 6 ವರ್ಷ ಕಳೆದರೂ ಕೆಲಸ ನೆನೆಗುದಿಗೆ ಬಿದ್ದಿದೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಕೃಷಿ ಮಾರಾಟ ಮಂಡಳಿ ಮಾಜಿ ಉಪಾಧ್ಯಕ್ಷ ರಾಜಶೇಖರ್ ಪಾಟೀಲ ಒತ್ತಾಯಿಸುತ್ತಾರೆ.

ಸಹಕಾರ: ಕೃಷ್ಣ ಪಿ, ಮಂಜುನಾಥ ಬಳ್ಳಾರಿ, ಬಸವರಾಜ ಭೋಗಾವತಿ, ಬಿ.ಎ.ನಂದಿಕೋಲಮಠ, ಡಿ.ಎಚ್‌.ಕಂಬಳಿ

ಕವಿತಾಳದಲ್ಲಿ ವಾಹನಗಳ ಓಡಾಟದಿಂದಾಗಿ ದೂಳು ಎದ್ದು ಅಂಗಡಿಗಳಿಗೆ ನುಗ್ಗುತ್ತಿದೆ. ಸಾರ್ವಜನಿಕರ ಸಂಚಾರಕ್ಕೂ ತೊಂದರೆಯಾಗುತ್ತಿದೆ
ಮಾನ್ವಿ ಪಟ್ಟಣದ ಮೂಲಕ ಹಾದು ಹೋಗಿರುವ ರಾಜ್ಯ ಹೆದ್ದಾರಿ ಎಸ್.ಎಚ್.23ರ ವಿಭಜಕದ ಮೇಲೆ ಬೆಳೆದು ನಿಂತಿರುವ ಗಿಡಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.