ADVERTISEMENT

‘1.50 ಲಕ್ಷ ಮತಗಳ ಅಂತರದಲ್ಲಿ ಹಿಟ್ನಾಳ್ ಗೆಲುವು ಖಚಿತ’

ಸುದ್ದಿಗೋಷ್ಠಿಯಲ್ಲಿ ಸಚಿವ ತಂಗಡಗಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2024, 15:31 IST
Last Updated 27 ಏಪ್ರಿಲ್ 2024, 15:31 IST
ಸಿಂಧನೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಬಹಿರಂಗ ಪ್ರಚಾರ ಸಭೆಯ ವೇದಿಕೆ ನಿರ್ಮಾಣ ಕಾರ್ಯವನ್ನು ಸಚಿವ ಶಿವರಾಜ ತಂಗಡಗಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಶನಿವಾರ ವೀಕ್ಷಿಸಿದರು
ಸಿಂಧನೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಬಹಿರಂಗ ಪ್ರಚಾರ ಸಭೆಯ ವೇದಿಕೆ ನಿರ್ಮಾಣ ಕಾರ್ಯವನ್ನು ಸಚಿವ ಶಿವರಾಜ ತಂಗಡಗಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಶನಿವಾರ ವೀಕ್ಷಿಸಿದರು   

ಸಿಂಧನೂರು: ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಅವರು 1.50 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವುದು ಖಚಿತ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ವಿಶ್ವಾಸ ವ್ಯಕ್ತಪಡಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಕೊಪ್ಪಳ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎರಡು ಬಾರಿ ಅಲ್ಪ ಮತಗಳ ಅಂತರದಲ್ಲಿ ಸೋತಿರುವ ಹಿಟ್ನಾಳ್ ಕುಟುಂಬ ಈ ಚುನಾವಣೆಯಲ್ಲಿ ಗೆಲ್ಲಲಿದೆ ಎಂಬ ವಿಶ್ವಾಸವಿದೆ. ಏ.28 ರಂದು ಸಂಜೆ 5.30ಕ್ಕೆ ಸಿಂಧನೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಪರ ಬಹಿರಂಗ ಪ್ರಚಾರ ಸಭೆ ಹಮ್ಮಿಕೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಮಿಸಲಿದ್ದಾರೆ’ ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್ ಬರ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿರುವುದು ಕಾಂಗ್ರೆಸ್ ಪಕ್ಷದ ಗೆಲುವಾಗಿದೆ. ಒಟ್ಟು ₹18 ಸಾವಿರ ಕೋಟಿ ಪರಿಹಾರ ಬರಬೇಕಿತ್ತು. ಈಗ ಬಿಡುಗಡೆ ಆಗಿರುವ ಹಣ ತೃಪ್ತಿ ತಂದಿಲ್ಲ. ಬಿಜೆಪಿಯವರು ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ. ಬರೀ ಜಾತಿ, ಧರ್ಮದ ವಿಚಾರ ಮಾತನಾಡಿ ಗಲಭೆ ಸೃಷ್ಟಿಸುತ್ತಿದ್ದಾರೆ. ಈ 10 ವರ್ಷಗಳಲ್ಲಿ ಬಿಜೆಪಿ ಪಕ್ಷ ಏನು ಅಭಿವೃದ್ಧಿ ಮಾಡಿದೆ ಅಂತ ಜನರಿಗೆ ತಿಳಿಸಲಿ. ಇವರಿಗೆ ಮತ ಕೇಳಲೂ ನೈತಿಕ ಹಕ್ಕಿಲ್ಲ ಎಂದು ದೂರಿದರು.

ADVERTISEMENT

ಜನಾರ್ಧನ ರೆಡ್ಡಿ ಚಪಲಕ್ಕೆ ಮಾತನಾಡುತ್ತಾರೆ. ಸುಳ್ಳಿನ ಸರದಾರ ರೆಡ್ಡಿ. ಗಂಗಾವತಿ ಕ್ಷೇತ್ರದಲ್ಲಿ ಗೆದ್ದರೆ ಡಬಲ್ ಬೆಡ್ ರೂಮ್ ಹೌಸ್, ಮಸೀದಿ ಅಭಿವೃದ್ಧಿಗೆ ₹6 ಕೋಟಿ ಹಣ, ಅಂಜನಾದ್ರಿ ಅಭಿವೃದ್ಧಿಗೆ ಕೇಂದ್ರದಿಂದ ₹5 ಕೋಟಿ ಹಣ ತರುತ್ತೇನೆಂದು ಹೇಳಿದ್ದರು. ಆ ಮಾತುಗಳು ಈಗ ಅವರಿಗೆ ನೆನಪಿದೆಯೇ. ಈ ಹಿಂದೆ ನನ್ನನ್ನು ಉಪಯೋಗ ಮಾಡಿಕೊಂಡು ರಾಜಕಾರಣ ಮಾಡಿದವರು ರೆಡ್ಡಿ. ಈಗ ನನ್ನ ಬಗ್ಗೆ ಮಾತನಾಡೋಕೆ ರೆಡ್ಡಿಗೆ ನೈತಿಕ ಹಕ್ಕಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಕೊಪ್ಪಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಶರಣೇಗೌಡ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಖಾಜಿಮಲಿಕ್ ವಕೀಲ, ಪ್ರಧಾನ ಕಾರ್ಯದರ್ಶಿ ಅನಿಲಕುಮಾರ ವೈ, ಮುಖಂಡ ಆರ್.ಸಿ.ಪಾಟೀಲ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.