ಶಕ್ತಿನಗರ: ಜಿಲ್ಲೆಯಲ್ಲಿ ಕಳೆದ ಆರೇಳು ತಿಂಗಳಿಂದ ಕೆಲಸವಿಲ್ಲದೇ ಗೃಹರಕ್ಷಕ ದಳದ ಸಿಬ್ಬಂದಿ ಜೀವನ ಸಾಗಿಸಲು ಪರದಾಡುತ್ತಿದ್ದಾರೆ.
ರಾಯಚೂರು ತಾಲ್ಲೂಕಿನಲ್ಲಿ 400 ಸಿಬ್ಬಂದಿ ಸೇರಿ ಜಿಲ್ಲೆಯಲ್ಲಿ 800 ಗೃಹರಕ್ಷಕರಿದ್ದು, ಅವರೀಗ ಕೆಲಸವಿಲ್ಲದೇ ಜಮೀನುಗಳಲ್ಲಿ ಕೃಷಿ ಚಟುವಟಿಕೆ, ಗಾರೆ ಕೆಲಸದಲ್ಲಿ ಕೂಲಿಕಾರ್ಮಿಕರಾಗಿ ತೊಡಗಿಕೊಂಡಿದ್ದಾರೆ. ಇನ್ನೂ ಕೆಲವರು ಸಣ್ಣಪುಟ್ಟ ವ್ಯಾಪಾರ ಮಾಡುತ್ತಿದ್ದಾರೆ.
ತೆಲಂಗಾಣ ಮಾದರಿಯಲ್ಲಿ ವರ್ಷದ 365 ದಿನವೂ ಕೆಲಸ ನೀಡುವಂತೆ ಕರ್ನಾಟಕ ಗೃಹರಕ್ಷಕ ದಳ ಸಿಬ್ಬಂದಿ ಮನವಿ ಮಾಡಿದ್ದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ.ಕಳೆದ ಹತ್ತಾರು ವರ್ಷಗಳಿಂದ ಪೊಲೀಸ್, ಆರ್‌ಟಿಒ, ಬಂಧಿಖಾನೆ, ಅಗ್ನಿಶಾಮಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಕರ್ತವ್ಯಗಳಲ್ಲಿ ತೊಡಗಿಕೊಂಡಿರುವ ಗೃಹರಕ್ಷಕ ಸಿಬ್ಬಂದಿ ಜೀವನ ನಿರ್ವಹಣೆಗೆ ಪರದಾಡುತ್ತಿದ್ದಾರೆ. ಸರ್ಕಾರದಿಂದ ಸದ್ಯ ನೀಡುತ್ತಿರುವ ಗೌರವಧನ ₹ 380 ರಿಂದ 750ವರೆಗೆ ಇದೆ. ರಾಜ್ಯದ ಎಲ್ಲಾ ಗೃಹರಕ್ಷಕರಿಗೂ ಸಮಾನ ಗೌರವಧನ ನೀಡಬೇಕು. ಕೌಟುಂಬಿಕ ಆರೋಗ್ಯ ವಿಮೆ, ಮಹಿಳಾ ಗೃಹರಕ್ಷಕಿಯರಿಗೆ ಕರ್ತವ್ಯದ ಅವಧಿಯಲ್ಲಿ ಸೂಕ್ತ ಸೌಲಭ್ಯ ಒದಗಿಸಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಗೃಹರಕ್ಷಕರು ಒತ್ತಾಯಿಸಿದ್ದಾರೆ.
ಸಮಾಜಕ್ಕೆ ಮೌಲ್ಯಯುತವಾದ ಸೇವೆಯನ್ನು ಗೃಹ ರಕ್ಷದ ದಳದ ಸಿಬ್ಬಂದಿ ನೀಡುತ್ತಿದ್ದಾರೆ. ಸರ್ಕಾರದ ಅಧೀನದಲ್ಲಿ ಶಿಸ್ತುಬದ್ಧ ಸೇವೆ ನೀಡುತ್ತಿದೆ. ಪೊಲೀಸ್ ಇಲಾಖೆಗೆ ಪೂರಕವಾಗಿ ಕೆಲಸ, ಪ್ರಾಕೃತಿಕ ವಿಪತ್ತು ನಿರ್ವಹಣೆ, ಬೆಂಕಿ ಅನಾಹುತ, ದಾಳಿ, ಸುನಾಮಿ, ಭೂಕಂಪ, ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಕೆಲಸಕ್ಕೆ ನಿಯೋಜಿಸಲಾಗುತ್ತಿದೆ. ಸಂಕಷ್ಟದ ದಿನಗಳಲ್ಲಿ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸುವಗೃಹರಕ್ಷಕರಿಗೆ ಹಂತ ಹಂತವಾಗಿ ಇದ್ದ ಕರ್ತವ್ಯವನ್ನೂ ಕಡಿಮೆ ಮಾಡಲಾಗುತ್ತಿದೆ ಎಂದು ಗೃಹರಕ್ಷಕರೊಬ್ಬರು ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.