ಸಿಂಧನೂರು: ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ವೈದ್ಯರು, ಸ್ಟಾಪ್ ನರ್ಸ್ ಮತ್ತು ಗ್ರೂಪ್ ‘ಡಿ’ ನೌಕರರಿಗೆ 7 ತಿಂಗಳಿನಿಂದ ವೇತನ ನೀಡದಿರುವುದರಿಂದ ಸಂಬಳಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಕೋವಿಡ್ ಎರಡನೇ ಅಲೆ ತೀವ್ರ ಸ್ವರೂಪದಲ್ಲಿ ಹರಡಿದ ಸಮಯದಲ್ಲಿ ರೋಗ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಪ್ರತಿಯೊಂದು ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ವೈದ್ಯರು, ಸ್ಟಾಪ್‍ನರ್ಸ್ ಮತ್ತು ‘ಡಿ’ ಗ್ರೂಪ್ ನೌಕರರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿತ್ತು.
ಸರ್ಕಾರ ವಿವಿಧ ಹುದ್ದೆಯ ನೌಕರರಿಗೆ ನೇಮಕದ ಆದೇಶ ನೀಡಿ 7 ತಿಂಗಳು ಪೂರ್ಣಗೊಂಡರೂ ಇಲ್ಲಿಯವರೆಗೆ ವೇತನ ನೀಡದಿರುವದಕ್ಕೆ ಗುತ್ತಿಗೆ ಆಧಾರಿತ ಎಲ್ಲಾ ನೌಕರರು ತೀವ್ರತೊಂದರೆ ಅನುಭವಿಸುತ್ತಿದ್ದಾರೆ. ಕೆಲವರು ಯಾವುದೋ ತಾಲ್ಲೂಕಿನ ಮತ್ತು ಯವುದೋ ಜಿಲ್ಲೆಯವರಾಗಿದ್ದು ನೇಮಗೊಂಡ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
7 ತಿಂಗಳ ಪೂರ್ಣಗೊಂಡರು ಮನೆ ಬಾಡಿಗೆ, ಊಟದ ಖರ್ಚು ಮತ್ತಿತರ ಉಪಜೀವನದ ಖರ್ಚನ್ನು ನಿಭಾಯಿಸುವುದು ಕಷ್ಟವಾಗಿರುವುದರಿಂದ ಈಗಾಗಲೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗೆ, ಜಿಲ್ಲಾಧಿಕಾರಿಗೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಮಟ್ಟದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಇದರಿಂದ ಯಾವುದೇ ಪ್ರತಿಫಲ ಲಭಿಸಿಲ್ಲವೆಂದು ಗುತ್ತಿಗೆ ಆಧಾರದಿಂದ ನೇಮಕಗೊಂಡ ವೈದ್ಯೆ ಡಾ.ಶೃತಿ ಬೇಸರ ವ್ಯಕ್ತಪಡಿಸಿದರು.
‘ಕೋವಿಡ್ ಎರಡನೇ ಅಲೆ ವೇಳೆಯಲ್ಲಿ ಮಾಸಿಕ ₹ 25 ಸಾವಿರ ವೇತನ ಕೊಡುವುದಾಗಿ ಹೇಳಿ ನೇಮಕ ಮಾಡಿಕೊಳ್ಳಲಾಗಿತ್ತು. ಮಾನ್ವಿ ತಾಲ್ಲೂಕಿನ ರಾಜಲಬಂಡಿ ಗ್ರಾಮದವನಾದ ನಾನು ಇಲ್ಲಿ ಮನೆ ಬಾಡಿಗೆ ಪಡೆದು ವಾಸವಾಗಿದ್ದೇನೆ. ಊಟಕ್ಕೂ ಸಮಸ್ಯೆಯಾಗಿದೆ. ಬಾಡಿಗೆಯನ್ನು ಕೊಟ್ಟಿರುವುದಿಲ್ಲ. ನೌಕರಿಯಲ್ಲಿ ಮುಂದುವರೆಯಬೇಕೋ, ಬಿಟ್ಟು ಹೋಗಬೇಕೋ ಎನ್ನುವ ಚಿಂತೆಯಲ್ಲಿ ಇದ್ದೇನೆ’ ಎಂದು ಸ್ಟಾಪ್‍ನರ್ಸ್ ಬಸವರಾಜ ಹೇಳುತ್ತಾರೆ.
ಇನ್ನೊಬ್ಬ ಸ್ಟಾಪ್‍ನರ್ಸ್ ಮೌನೇಶ ಅವರ ಪರಿಸ್ತಿತಿಯು ಇದಕ್ಕೆ ಬಿನ್ನವಾಗಿಲ್ಲ.
ಮೂಲತಃ ರಾಯಚೂರಿನವರಾದ ಮಲ್ಲೇಶ ಮತ್ತು ಹನುಮಂತ ಅವರು, ‘ಡಿ’ ಗ್ರೂಪ್ ನೌಕರರಾಗಿದ್ದು, ಕೊಠಡಿ ಬಾಡಿಗೆ ಮತ್ತು ಖಾನಾವಳಿ ಊಟದ ಬಿಲ್ ಕೊಡಲು ಆಗದೆ, ಬೇರೆಯವರ ಬಳಿ ಸಾಲ ಮಾಡಿ ಸಾಕಾಗಿದೆ ಎಂದು ಸರ್ಕಾರದ ವಿಳಂಬ ನೀತಿ ಕುರಿತು ಅಸಮಧಾನ ವ್ಯಕ್ತಪಡಿಸಿದರು.
ಆಗ್ರಹ: ಆಸ್ಪತ್ರೆಗೆ ಸೇವೆ ಸಲ್ಲಿಸಲು ಲಕ್ಷ ಸಂಬಳ ಕೊಟ್ಟರೂ ವೈದ್ಯರು ಬರುತ್ತಿಲ್ಲವೆಂದು ವೈದ್ಯಕೀಯ ಸಚಿವರು ಸೇರಿದಂತೆ ಎಲ್ಲಾ ವಿಧಾನಸಭಾ ಸದಸ್ಯರು ಹೇಳುತ್ತಾರೆ. ಆದರೆ ಸೇವೆ ಸಲ್ಲಿಸುವ ವೈದ್ಯರಿಗೆ ಸಂಬಳ ಕೊಡುತ್ತಿಲ್ಲ. ಸರ್ಕಾರದ ಇಂತಹ ಬೇಜವಾಬ್ದಾರಿ ವರ್ತನೆಯನ್ನು ಸಹಿಸದೆ ವೈದ್ಯರು ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಮಾಡಲು ಹಿಂಜರಿಯುತ್ತಾರೆ.
ಕೂಡಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಗಮನ ಹರಿಸಿ ಗುತ್ತಿಗೆ ಆಧಾರದ ವೈದ್ಯರು ಮತ್ತು ಇತರ ಸಿಬ್ಬಂದಿಗೆ ವೇತನ ಬಿಡುಗಡೆ ಮಾಡುವಂತೆ ಮನುಜಮತ ಬಳಗದ ಉಪಾಧ್ಯಕ್ಷರಾದ ವೆಂಕನಗೌಡ ಗದ್ರಟಗಿ, ಖಾದರ ಸುಬಾನಿ, ಪ್ರಧಾನ ಕಾರ್ಯದಶಿ ಬಸವರಾಜ ಬಾದರ್ಲಿ ಒತ್ತಾಯಿಸಿದ್ದಾರೆ.
**
ಕೋವಿಡ್ ಎರಡನೇ ಅಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ ವೈದ್ಯರು ಮತ್ತು ಇತರ ಸಿಬ್ಬಂದಿಗೆ ವೇತನ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ.
-ಡಾ.ಹನುಮಂತ ರೆಡ್ಡಿ, ಮುಖ್ಯ ವೈದ್ಯಾಧಿಕಾರಿ ಸಾರ್ವಜನಿಕ ಆಸ್ಪತ್ರೆ ಸಿಂಧನೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.