ADVERTISEMENT

ಸಿರವಾರ: ದಾನ ಸಿಕ್ಕ ಜಾಗದಲ್ಲಿ ‘ಅಕ್ಷರ ಕ್ರಾಂತಿ’

ಪಿ.ಕೃಷ್ಣ
Published 9 ನವೆಂಬರ್ 2023, 4:38 IST
Last Updated 9 ನವೆಂಬರ್ 2023, 4:38 IST
ಸಿರವಾರ ತಾಲ್ಲೂಕಿನ ಕಲ್ಲೂರು ಗ್ರಾಮದ 123 ವರ್ಷದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನೋಟ
ಸಿರವಾರ ತಾಲ್ಲೂಕಿನ ಕಲ್ಲೂರು ಗ್ರಾಮದ 123 ವರ್ಷದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನೋಟ   

ಸಿರವಾರ: 50 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯೆ ನೀಡಿ ಹಲವರ ಜೀವನಕ್ಕೆ ಉನ್ನತ ಸ್ಥಾನ ನೀಡಿದ ಕೀರ್ತಿ ತಾಲ್ಲೂಕಿನ 123 ವರ್ಷದ ಕಲ್ಲೂರು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಸಲ್ಲುತ್ತದೆ.

1901ರಲ್ಲಿ ಹುಲ್ಲಿನ ಗುಡಿಸಲಿನಲ್ಲಿ ಪ್ರಾರಂಭವಾದ ಶಾಲೆಗೆ ಅಂದು ‘ಕಚೇರಿ ಶಾಲೆ’ ಎಂದು ಕರೆಯಲಾಗುತ್ತಿತ್ತು. ನಿಜಾಮರ ಆಳ್ವಿಕೆಯ ಅವಧಿಯಲ್ಲಿ ಖಾಸಗಿ ವ್ಯಕ್ತಿಗಳ ಸ್ಥಳದಲ್ಲಿ ನಡೆಯುತ್ತಿದ್ದ ಶಾಲೆಗೆ ಮುಸ್ಲಿಂ ಮಹಿಳೆ ಮುಮ್ತಾಜ್ ಬೇಗಂ ಎಂಬುವರು 1960ರಲ್ಲಿ ಐದು ಎಕರೆ ಜಮೀನು ದಾನ ನೀಡಿದರು.‌ ಬಳಿಕ ಶಾಲೆಯು ಹಂತ–ಹಂತವಾಗಿ ಅಭಿವೃದ್ಧಿಯಾಯಿತು. ಕಿರಿಯ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆಗಳ ತರಗತಿಗಳು ಒಂದೇ ಆವರಣದಲ್ಲಿ ಆರಂಭವಾದವು.

ಸ್ವಂತ ಜಮೀನು ಹೊಂದಿದ ಶಾಲೆಯು ಮುಂದುವರಿದಂತೆ ಇನ್ನಷ್ಟು ಅಭಿವೃದ್ಧಿ ಹೊಂದಿ ಬಾಲಕಿಯರ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ತರಗತಿಗಳನ್ನು ಆರಂಭಿಸಲಾಯಿತು. ನಂತರದ ದಿನಗಳಲ್ಲಿ ಉರ್ದು ಮಾಧ್ಯಮಕ್ಕೆ ಬೇಡಿಕೆ ಬಂದ ನಂತರ ಉರ್ದು ಪ್ರಾಥಮಿಕ ಶಾಲೆಯನ್ನೂ ತೆರೆಯಲಾಯಿತು.

ADVERTISEMENT

ಪ್ರಸ್ತುತ 1ರಿಂದ 7ನೇ ತರಗತಿಯ ವರೆಗಿನ ಒಟ್ಟು 304 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಒಟ್ಟು 9 ಕೊಠಡಿಗಳಿದ್ದು, ನಾಲ್ಕು ಕೊಠಡಿಗಳು ಸುಸಜ್ಜಿತವಾಗಿವೆ. ಇನ್ನುಳಿದ ಕೊಠಡಿಗಳು ಸಣ್ಣ–ಪುಟ್ಟ ದುರಸ್ತಿಯ ಅಗತ್ಯವಿದೆ. ಶಾಲೆಯಲ್ಲಿ ಮುಖ್ಯ ಶಿಕ್ಷಕ, ದೈಹಿಕ ಶಿಕ್ಷಣ ಶಿಕ್ಷಕ, ಸಂಗೀತ ಶಿಕ್ಷಕ ಸೇರಿದಂತೆ ಏಳು ಮಂದಿ ಕಾಯಂ ಸರ್ಕಾರಿ ಶಿಕ್ಷಕರು ಹಾಗೂ ಐವರು ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಶಾಲೆಯಲ್ಲಿ ಪ್ರಸ್ತುತ ವಿಶಾಲವಾದ ರಂಗಮಂದಿರ, ಸಾಮೂಹಿಕ ಶೌಚಾಲಯಗಳು, ಸುಸಜ್ಜಿತ ವಿಜ್ಞಾನ ಪ್ರಯೋಗಾಲಯ, ಗಣಕಯಂತ್ರ ಕೊಠಡಿ, ಕ್ರೀಡಾ ಸಾಮಾಗ್ರಿಗಳ ಸಂಗ್ರಹಗಾರ, ಕೇಂದ್ರ ಗ್ರಂಥಾಲಯದಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಪುಸ್ತಕಗಳ ಸಂಗ್ರಹ, ಶುದ್ಧ ಕುಡಿಯುವ ನೀರು ವ್ಯವಸ್ಥೆಗಳು ಇವೆ.

ಎ.ಡಿ.ಸಿ, ತಹಶೀಲ್ದಾರ್‌ ಹಳೇ ವಿದ್ಯಾರ್ಥಿಗಳು:

ಸಿರವಾರ ತಾಲ್ಲೂಕಿನ ಕಲ್ಲೂರು ಗ್ರಾಮದ 123 ವರ್ಷದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ

ಜಿಲ್ಲಾಧಿಕಾರಿ, ತಹಶೀಲ್ದಾರ್‌, ವಿಜ್ಞಾನಿಗಳು ಸೇರಿದಂತೆ ಹಲವು ಪ್ರಮುಖ ಹುದ್ದೆಗಳಲ್ಲಿರುವ ಅಧಿಕಾರಿಗಳು ಶತಮಾನ ಕಂಡಿರುವ ಈ ಶಾಲೆಯ ಹಳೇ ವಿದ್ಯಾರ್ಥಿಗಳಾಗಿದ್ದಾರೆ.

ಇಲ್ಲಿ ಕಲಿತ ವಿದ್ಯಾರ್ಥಿಗಳಲ್ಲಿ ಶಿವಮೊಗ್ಗ ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಬೆಂಗಳೂರಿನ ಶಾಲಾ ಶಿಕ್ಷಣ ನಿರ್ದೇಶಕ ಹಸನ್ ಮೋಹಿನುದ್ದೀನ್, ತಹಶೀಲ್ದಾರ್ ಗಂಗಪ್ಪ, ಕೃಷಿ ಇಲಾಖೆಯ ಭೀಮರಾಯ, ದೆಹಲಿಯ ಕೃಷಿ ವಿಜ್ಞಾನಿ ಶ್ರೀಹರಿ, ಸಿಪಿಐ ಹಸನಸಾಬ್ ಸೇರಿದ್ದಾರೆ.

ಇದರೊಂದಿಗೆ‌ ಈ ಇಲ್ಲಿ ಕಲಿತ ಹಲವರು ಎಂಜಿನಿಯರ್‌ಗಳು, ವೈದ್ಯರು, 30ಕ್ಕೂ ಹೆಚ್ಚು ಶಿಕ್ಷಕರು, ಸೇನೆಯ ಅಧಿಕಾರಿಗಳು, ಕೃಷಿ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಾಗಿ ವಿವಿಧೆಡೆ ಕೆಲಸ ಮಾಡುತ್ತಿದ್ದಾರೆ.

ಸಿರವಾರ ತಾಲ್ಲೂಕಿನ ಕಲ್ಲೂರು ಗ್ರಾಮದ 123 ವರ್ಷದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗ ದಿನಾಚರಣೆಯ ಚಿತ್ರ
ಸಿರವಾರ ತಾಲ್ಲೂಕಿನ ಕಲ್ಲೂರು ಗ್ರಾಮದ 123 ವರ್ಷದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗ ದಿನಾಚರಣೆಯ ಚಿತ್ರ
ಶತಮಾನ ಕಂಡ ಶಾಲೆಯಲ್ಲಿ ವೃತ್ತಿ ಮಾಡುತ್ತಿರುವುದು ಸಂತಸದ ವಿಷಯ. ಇಲ್ಲಿ ಕಲಿತು ಉನ್ನತ ಹುದ್ದೆ ಅಲಂಕರಿಸಿದವರು ಆಗಾಗ ಶಾಲೆ ಬಂದು ಇಲ್ಲಿನ ವ್ಯವಸ್ಥೆ ಬಗ್ಗೆ ಗಮನಹರಿಸಿದರೆ ಶಾಲಾ ಪರಿಸರ ಕಲಿಕೆ ಸುಧಾರಿಸಬಹುದು
- ಮುದ್ದುರಂಗಪ್ಪ, ಸಹಶಿಕ್ಷಕ ಸರ್ಕಾರಿ ಬಾಲಕರ ಪ್ರಾಥಮಿಕ ಶಾಲೆ ಕಲ್ಲೂರು
ಶಾಲೆಯಲ್ಲಿ ಕಲಿತವರು ಉನ್ನತ ಸ್ಥಾನದಲ್ಲಿದ್ದಾರೆ. ಆ ಎಲ್ಲ ಸಾಧನೆಗೆ ಶಾಲೆಯ ಶಿಸ್ತು ಇಲ್ಲಿ ಕಲಿಸಿದ ಶಿಕ್ಷಕರ ಶ್ರಮವೇ ಕಾರಣ. ಇಂದಿನ ಸರ್ಕಾರಿಗಳು ಶಾಲೆಗಳೆಂದರೆ ಬಡವರು ಕಲಿಯುವ ಕೇಂದ್ರಗಳಾಗಿವೆ. ಇಂದಿನ ಉತ್ತಮ ಶಿಕ್ಷಕರಿಂದಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮೀರಿಸುವ ಕಲಿಕಾ ವ್ಯವಸ್ಥೆ ಕಲ್ಲೂರು ಶತಮಾನದ ಶಾಲೆಯಲ್ಲಿದೆ
- ಶರಣಪ್ಪ ಮೇಟಿ ಕಲ್ಲೂರು, ಶಾಲೆಯ ಹಳೇ ವಿದ್ಯಾರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.