ADVERTISEMENT

ಕೇಳೋರಿಲ್ಲ ಕಲ್ಯಾಣ ಕರ್ನಾಟಕದ ಕೊನೆಯ ಗ್ರಾಮದ ಗೋಳು

ಅಂಕನಾಳ–ಉಪನಾಳ ಗ್ರಾಮದ ಆಕ್ರಂದನ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 7:06 IST
Last Updated 19 ಅಕ್ಟೋಬರ್ 2024, 7:06 IST
ದಶಕಗಳಿಂದ ಡಾಂಬರು ಕಾಣದ ಅಂಕನಾಳ–ಉಪನಾಳ ರಸ್ತೆ
ದಶಕಗಳಿಂದ ಡಾಂಬರು ಕಾಣದ ಅಂಕನಾಳ–ಉಪನಾಳ ರಸ್ತೆ   

ಲಿಂಗಸುಗೂರು: ‘ಯಪ್ಪಾ.. ಕರೆಂಟ್‌ ಹೋಯ್ತು ಅಂದ್ರ ಹದಿನೈದು ದಿನ ಬರಲ್ಲ, ಮೊಬೈಲ್‌ ಚಾರ್ಜ್‌ ಮಾಡಾಕೂ ಪಕ್ಕದ ಊರಿಗೆ ಹೋಗ್ಬೇಕು. ಹೊಳಿ ಪಕ್ಕದಲ್ಲೇ ಐತಿ ಖರೆ, ಹೊಳಿಯಿಂದನ ಹಳಿ ಮನಿ ಮುಳುಗಿ ಹೊಸ ಊರಿಗೆ ಬಂದೀವಿ. ಆದ್ರ ನಮ್‌ ನಸೀಬ ಬದಲಾಗ್ಲಿಲ್ಲ, ಊರು ಮುಳುಗಡೆಯಾದಾಗಲೇ ನಮ್ಮ ಬದುಕೂ ಮುಳುಗಿತು’ ಎನ್ನುತ್ತಾ ಸೀರೆಯಂಚಲ್ಲಿ ಕಣ್ಣೀರು ಒರೆಸಿಕೊಂಡರು ಹುಲಿಗೆಮ್ಮ ಕೌಜಗನೂರು.‌

‘ಪ್ರತಿಭಟನೆ, ಧರಣಿ, ಹೋರಾಟ ಮಾಡಿದ್ರ ಅಧಿಕಾರಿಗಳು ಬಂದು ನಮ್‌ ಸಮಸ್ಯೆ ಕೇಳ್ತಾರ ಅನ್ಕೊಂಡಿದ್ವಿ. ಹಾಗಂತ ಮೊನ್ನೆ ಲೋಕಸಭಾ ಚುನಾವಣೆನ ಬಹಿಷ್ಕಾರ ಮಾಡಿದ್ವಿ. 150 ಮಂದಿ ವೋಟ್‌ ಹಾಕಿಲ್ಲ, ಹಾಕುದಿಲ್ಲ ಅಂತ ಮೊದಲ ಹೇಳಿದ್ವಿ, ಆದ್ರ ಒಬ್ಬೇ ಒಬ್ಬ ಅಧಿಕಾರಿಯೂ ಬರಲಿಲ್ರಿ ಎನ್ನುತ್ತಾ ವ್ಯವಸ್ಥೆಯ ಬಗ್ಗೆ ನಿಟ್ಟುಸಿರಾಗುತ್ತಾರೆ ಕೆಂಚಪ್ಪ.

ಇವು ರಾಯಚೂರು ಜಿಲ್ಲೆಯ ಕೊನೆ ಗ್ರಾಮದ ಜನತೆಯ ಮಾತುಗಳು. ಲಿಂಗಸುಗೂರು ತಾಲ್ಲೂಕಿನ ಅಂಕನಾಳ–ಉಪನಾಳ ಗ್ರಾಮದಲ್ಲಿ ಸುಮಾರು 2000 ಜನ ವಾಸಿಸುತ್ತಿದ್ದು, ಸಮಸ್ಯೆಗಳ ಸರಮಾಲೆಯಲ್ಲಿಯೇ ಬದುಕುತ್ತಿದ್ದಾರೆ. 1984ರಲ್ಲಿ ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾಗಿ ಎಕರೆಗೆ ಕೇವಲ ₹2000 ಪರಿಹಾರ ಪಡೆದ ಈ ಊರಿನ ಜನ ಸುಧಾರಿಸಿಕೊಳ್ಳಲು ನಾಲ್ಕು ದಶಕಗಳೇ ಹಿಡಿಯಿತು. ಬೆಂಗಳೂರು, ಗೋವಾ, ಮುಂಬೈನಲ್ಲಿ ದುಡಿದು ಅಳಿದುಳಿದ ಜಮೀನಿಗೆ ನೀರು ಹಾಯಿಸಿ ನೀರಾವರಿ ಮಾಡಿಕೊಂಡಿದ್ದಾರೆ. ಆದರೆ ಬೆಳೆದ ಬೆಳೆ ಸಾಗಿಸಲು ರಸ್ತೆಯೇ ಕಾಣದಂತಾಗಿದೆ.

ADVERTISEMENT

ಈ ಗ್ರಾಮದ ಪಕ್ಕದ ಊರು ಬ್ರಿಟಿಷರ ಸರಹದ್ದಿನಲ್ಲಿದ್ದ, ಪ್ರಸ್ತುತ ಹುನಗುಂದ ತಾಲ್ಲೂಕಿಗೆ ಸೇರಿರುವ ಇಸ್ಲಾಂಪುರ ಗ್ರಾಮ. ಎರಡೂ ಗ್ರಾಮದ ಅಂತರ ಕೇವಲ 2 ಕಿ.ಮೀ. ಪುನರ್ವಸತಿ ಆದಾಗ ಮಣ್ಣು ಕಂಡಿದ್ದ ರಸ್ತೆ ಇದೀಗ ಪಾತಾಳಕ್ಕೆ ಕುಸಿದಿದೆ. ದುರಸ್ತಿಗೆ ಮನವಿ ಮಾಡಿದರೆ, ಅದು ಬಾಗಲಕೋಟೆ ಜಿಲ್ಲೆ ವ್ಯಾಪ್ತಿಗೆ ಬರುತ್ತದೆ ಎಂದು ರಾಯಚೂರಿನವರು, ರಾಯಚೂರಿಗೆ ಬರುತ್ತದೆ ಎಂದು ಬಾಗಲಕೋಟೆಯವರು ಜಾರಿಕೊಳ್ಳುತ್ತಾರೆ. ಮತ ಕೇಳಲು ಬಂದಿದ್ದ ಶಾಸಕರು ಮತ್ತೆ ಇತ್ತ ಸುಳಿದೇ ಇಲ್ಲ’ ಎನ್ನುತ್ತಾರೆ ಗ್ರಾಮಸ್ಥರು.

ಮಹಿಳೆಯರಿಗೆ ಬಯಲು ಶೌಚವೇ ಅನಿವಾರ್ಯವಾಗಿದ್ದು, ಮಳೆ ಬಂದರೆ ಚರಂಡಿ ನೀರು ಬಾಗಿಲಿನ ಮುಂದೆ ನಿಲ್ಲುತ್ತಿದೆ. ಗ್ರಾಮ ಪಂಚಾಯಿತಿಯವರು ನರೇಗಾ ಹೆಸರಲ್ಲಿ ಹೊಳೆ ದಂಡಿಯಲ್ಲಿ ತಗ್ಗು ಕಡಿದಿದ್ದೇ ದೊಡ್ಡ ಕೆಲಸವೆಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಗ್ರಾಮ ಹಲಕಾವಟಗಿ ಪಂಚಾಯಿತಿ ವ್ಯಾಪ್ತಿಗೆ ಸೇರುತ್ತಿದ್ದು, ಅವರಾದರೂ ಮರುಮ್‌ ಹಾಕಿ ರಸ್ತೆ ದುರಸ್ತಿ ಮಾಡುತ್ತಾರೆಂದರೆ ಲೋಕೋಪಯೋಗಿ ಇಲಾಖೆಯತ್ತ ಬೆರಳು ತೋರಿಸುತ್ತಾರೆ. ಕಳೆದ ವರ್ಷ ರೈತರೇ ದುಡ್ಡು ಸಂಗ್ರಹಿಸಿ ರಸ್ತೆ ದುರಸ್ತಿ ಮಾಡಿಕೊಂಡಿದ್ದೇವೆ. ಆದರೆ ಅದು ತಾತ್ಕಾಲಿಕ. ನಮಗೆ ಶಾಶ್ವತ ರಸ್ತೆಯಾಗಬೇಕು ಎಂದು ಗ್ರಾಮದ ಮುಖಂಡ ಬಸವರಾಜ ಕರಡಿ ಆಗ್ರಹಿಸುತ್ತಾರೆ. 

ಮಕ್ಕಳ ಕೈಗೆಟುಕುವ ವಿದ್ಯುತ್‌ ತಂತಿ

ಗ್ರಾಮದ ಎಸ್‌ಸಿ ಕಾಲೊನಿಯಲ್ಲಿ 10ಕ್ಕೂ ಅಧಿಕ ವಿದ್ಯುತ್‌ ಕಂಬಗಳು ಬಾಗಿದ್ದು, ಹೈವೋಲ್ಟೇಜ್‌ ವಿದ್ಯುತ್‌ ತಂತಿ ಮಕ್ಕಳ ಕೈಗೆಟುಕುವಂತಿದೆ. ಸುಮಾರು 150 ಜನರ ಕಾಲೊನಿಯಲ್ಲಿ ವಾಸಿಸುತ್ತಿದ್ದು, ಸಮಸ್ಯೆ ಪರಿಹಾರಕ್ಕಾಗಿ ಕಳೆದ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಿದ್ದರು. ಆದರೆ ಯಾರೊಬ್ಬರೂ ಬಂದು ಕೇಳಲಿಲ್ಲ ಎಂದು ಬಹುಜನ ಚಳವಳಿ ಜಿಲ್ಲಾ ಸಮಿತಿ ಅಧ್ಯಕ್ಷ ಕೆಂಚಪ್ಪ ಅಳಲು ತೋಡಿಕೊಂಡರು.

‘ಈ ಕುರಿತು ನಾನು ಮನವಿ ಸಲ್ಲಿಸಿ ಸಾಕಾಗಿದೆ, ನಮ್ಮ ಜೀವಕ್ಕೆ ಬೆಲೆಯೇ ಇಲ್ಲವೆಂಬಂತೆ ಅಧಿಕಾರಿಗಳು ವರ್ತಿಸುತ್ತಾರೆ. ನಮ್ಮ ಮಕ್ಕಳು, ಜಾನುವಾರುಗಳ ಜೀವದ ಜತೆ ಚೆಲ್ಲಾಟವಾಡುತ್ತಿದ್ದಾರೆ. ವಿದ್ಯುತ್‌ ತಂತಿ ತಗುಲಿ ಜೀವ ಹೋದರೆ ಯಾರು ಹೊಣೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಲೋಕಸಭಾ ಚುನಾವಣೆ ಬಹಿಷ್ಕರಿಸಿದ್ದೆವು. ಎಸ್‌ಸಿ ಕಾಲೊನಿಯ 150 ಜನ ಮತವನ್ನೇ ಹಾಕಲಿಲ್ಲ. ಅಧಿಕಾರಿಗಳು ಬಂದು ಯಾಕೆ ಎಂದು ವಿಚಾರಿಸಲಿಲ್ಲ ನಾವು ಅಷ್ಟೊಂದು ಬೇಡವಾಗಿದ್ದೇವೆ.
ಬಸಮ್ಮ, ಸ್ಥಳೀಯ ನಿವಾಸಿ
ಪಂಚಾಯಿತಿಯಲ್ಲಿ ಕಳಪೆ ಕಾಮಗಾರಿಗಳಾಗಿವೆ. ನಮ್ಮ ಮನೆಗಳಿಗೆ ಹೋಗೋಕೆ ರಸ್ತೆಗಳೇ ಇಲ್ಲ. ಮುಳ್ಳು ಕಂಟಿಗಳು ಆವರಿಸಿವೆ. ಮನವಿ ಕೊಟ್ಟರೂ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ. ನಾವು ರೋಸಿ ಹೋಗಿದ್ದೇವೆ
ಕೆಂಚಪ್ಪ, ಬಹುಜನ ಚಳವಳಿ ಜಿಲ್ಲಾಧ್ಯಕ್ಷ
ಚರಂಡಿ ಇಲ್ಲದ್ದಕ್ಕೆ ಮನೆಗಳ ಹೊಸ್ತಿಲಲ್ಲೇ ನಿಲ್ಲುವ ಕೊಳಚೆ  ನೀರು
ದುರಸ್ತಿಯಾಗದ ಫಿಲ್ಟರ್‌ ಬೆಡ್‌ ಮುಳ್ಳುಕಂಟಿಗಳಿಂದ ಆವೃತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.