ADVERTISEMENT

ಸಚಿವ ತಿಮ್ಮಾಪುರ ಮಾಲೀಕತ್ವದ ಸಕ್ಕರೆ ಕಾರ್ಖಾನೆಗೆ ಅಕ್ರಮವಾಗಿ ಜಮೀನು ಒತ್ತುವರಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2024, 0:15 IST
Last Updated 20 ಸೆಪ್ಟೆಂಬರ್ 2024, 0:15 IST
ಲಿಂಗಸುಗೂರು ತಾಲ್ಲೂಕು ಸುಣಕಲ್ಲ ಕಲ್ಲುಗುಡ್ಡದಲ್ಲಿ ಆರ್.ಬಿ ಶುಗರ್ಸ್‌ ಕಂಪನಿಯವರು ಯಂತ್ರ ಬಳಸಿ ನೆಲಸಮಗೊಳಿಸುತ್ತಿರುವುದು
ಲಿಂಗಸುಗೂರು ತಾಲ್ಲೂಕು ಸುಣಕಲ್ಲ ಕಲ್ಲುಗುಡ್ಡದಲ್ಲಿ ಆರ್.ಬಿ ಶುಗರ್ಸ್‌ ಕಂಪನಿಯವರು ಯಂತ್ರ ಬಳಸಿ ನೆಲಸಮಗೊಳಿಸುತ್ತಿರುವುದು   

ಲಿಂಗಸುಗೂರು (ರಾಯಚೂರು ಜಿಲ್ಲೆ): ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ಮಾಲೀಕತ್ವದ ಆರ್‌.ಬಿ. ಶುಗರ್ಸ್‍ ಕಂಪನಿ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕಾಗಿ ಅಕ್ರಮವಾಗಿ ಕಂದಾಯ, ಅರಣ್ಯ ಹಾಗೂ ಉಳುಮೆ ಮಾಡುತ್ತಿರುವ ಪಟ್ಟಾ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ರೈತರು ಆರೋಪಿಸಿದ್ದಾರೆ.

ಕಾರ್ಖಾನೆ ನಿರ್ಮಾಣಕ್ಕಾಗಿ ಕಂಪನಿಯು 85.01 ಎಕರೆ ಜಮೀನು ಖರೀದಿಸಿದೆ. ಈ ಪೈಕಿ 49 ಎಕರೆ ಜಮೀನನ್ನು ಕೃಷಿಯೇತರ ಜಮೀನನ್ನಾಗಿ ಪರಿವರ್ತಿಸಿ, ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಮುಂದಾಗಿದೆ. ಇದ ಜೊತೆಗೆ ಅಕ್ಕಪಕ್ಕದ ಕಂದಾಯ, ಅರಣ್ಯ ಸೇರಿದಂತೆ ರೈತರ ಉಳಿಮೆ ಪಟ್ಟಾ ಜಮೀನನ್ನೂ ಸಮತಟ್ಟು ಮಾಡುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಸುಣಕಲ್ಲ ಗ್ರಾಮದ ಕಂದಾಯ, ಅರಣ್ಯ ಮತ್ತು ಖಾಸಗಿ ರೈತರ ಪಟ್ಟಾ ಜಮೀನಿನಲ್ಲಿರುವ ಕಲ್ಲುಗುಂಡು, ಮಣ್ಣು ಕಿತ್ತು ಚಿಕ್ಕ ಉಪ್ಪೇರಿ ಸೀಮಾಂತರ ಸರ್ವೆ ನಂ. 62 ಕಂದಾಯ ಜಮೀನಿನಲ್ಲಿ ಕೃತಕ ಗುಡ್ಡ ನಿರ್ಮಿಸಲಾಗಿದೆ. ಹೀಗಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ರೈತರು ದೂರಿದ್ದಾರೆ.

ADVERTISEMENT

ಆರ್.ಬಿ. ಶುಗರ್ಸ್‍ ಕಂಪನಿಯು ಸರ್ವೇ ನಂ. 77/2 (13–01 ಎಕರೆ), ಸ.ನಂ 77/3 (7 ಎಕರೆ), 78/1 (24–12 ಎಕರೆ), 80/2 (6 ಎಕರೆ), 81/2 (06–21 ಎಕರೆ), 82/2 (6-05 ಎಕರೆ), 83/2 (13–12 ಎಕರೆ), ಸ.ನಂ. 84 (5 ಎಕರೆ)ರಲ್ಲಿ ಜಮೀನು ಖರೀದಿಸಿದೆ. ಈ ಪೈಕಿ 77/2 (13–01 ಎಕರೆ), 77/3 (7 ಎಕರೆ), ಸ.ನಂ 78/1 (24–12 ಎಕರೆ)ರಲ್ಲಿನ ಜಮೀನನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸಿಕೊಂಡಿದೆ. ಉಳಿದಂತೆ 300ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಅಕ್ರಮವಾಗಿ ಕಲ್ಲುಗುಂಡು ನೆಲಸಮಗೊಳಿಸಿರುವುದು ಕಂಡು ಬಂದಿದೆ.

‘ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಸ್ವಂತ ಖರೀದಿ ಜಮೀನು ಜತೆಗೆ 111.2 ಎಕರೆ ಕಂದಾಯ ಮತ್ತು ಅರಣ್ಯ ಇಲಾಖೆಗೆ ಒಳಪಟ್ಟ ಜಮೀನನ್ನು ಅಕ್ರಮವಾಗಿ ಸ್ವಚ್ಛಗೊಳಿಸಿ ಸಮತಟ್ಟುಗೊಳಿಸುತ್ತಿರುವ ಬಗ್ಗೆ ಕರ್ನಾಟಕ ರೈತ ಸಂಘದಿಂದ ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟರ್ ಅವರಿಗೆ ಲಿಖಿತ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಕರ್ನಾಟಕ ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಬಸವರಾಜ ಬಡಿಗೇರ ದೂರಿದ್ದಾರೆ.

‘ನೂರಾರು ವರ್ಷಗಳಿಂದ ಸರ್ಕಾರಿ ಜಮೀನುಗಳಲ್ಲಿ ಅಕ್ರಮವಾಗಿ ಉಳುಮೆ ಮಾಡುವ ಹಾಗೂ ಸರ್ಕಾರಿ ಜಮೀನಿಗೆ ಹೊಂದಿಕೊಂಡ ಪಟ್ಟಾ ಜಮೀನುಗಳನ್ನು ಕೂಡ ದೌರ್ಜನ್ಯದಿಂದ ತಮ್ಮ ಸ್ವಾಧೀನಕ್ಕೆ ಪಡೆದುಕೊಂಡಿದ್ದಾರೆ. ಪಟ್ಟಾ ಜಮೀನು ದಾಖಲೆ ತೋರಿಸಿದರೂ ಅಧಿಕಾರಿಗಳ ಮೂಲಕವೇ ಬೆದರಿಕೆ ಹಾಕಿಸುತ್ತಿದ್ದಾರೆ. ಜಮೀನು ಉಳಿಸಿಕೊಡದಿದ್ದರೆ ವಿಷ ಸೇವನೆ ಮಾಡುತ್ತೇವೆ’ ಎಂದು ರೈತರು ಮಾಧ್ಯಮದವರ ಎದುರು ಅಳಲು ತೋಡಿಕೊಂಡಿದ್ದಾರೆ.

‘ಯಾವುದೇ ಕಂಪನಿಯು ಕಂದಾಯ ಹಾಗೂ ಅರಣ್ಯ ಇಲಾಖೆಯ ಜಾಗ ಅತಿಕ್ರಮಣ ಮಾಡಿಕೊಂಡು ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ ಅವರು ಸೆ. 17ರಂದು ನಡೆದ ಕಲ್ಯಾಣ ಕರ್ನಾಟಕ ಉತ್ಸವದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ್ದರು.

ಸ್ಥಳದಲ್ಲೇ ಇದ್ದ ಜಿಲ್ಲಾಧಿಕಾರಿ ನಿತಿಶ್‌ ಅವರನ್ನು ಈ ಬಗ್ಗೆ ವಿಚಾರಿಸಿದರೂ ಸಮರ್ಪಕವಾದ ಉತ್ತರ ದೊರೆತಿರಲಿಲ್ಲ. ರಾಜಕಾರಣಿಗಳು ಸರ್ಕಾರಿ ಜಾಗ ಅತಿಕ್ರಮಣ ಮಾಡುತ್ತಿದ್ದರೂ ಅಧಿಕಾರಿಗಳು ಮೌನವಹಿಸಿರುವುದಕ್ಕೆ ರೈತರಿಂದ ಆಕ್ರೋಶ ವ್ಯಕ್ತವಾಗಿದೆ.

‘ಪಟ್ಟಾ ಮಾಲೀಕರಿಂದ 90 ಎಕರೆಯಷ್ಟು ಜಮೀನು ಖರೀದಿಸಿದ್ದೇವೆ. ಉಳಿದಂತೆ ಖಾಸಗಿಯಾಗಿ ಖರೀದಿಸಿದ್ದು, ಯಾರಿಗೂ ಅನ್ಯಾಯ ಮಾಡಿಲ್ಲ. ಸರ್ಕಾರಿ ಜಮೀನು ಕಬಳಿಕೆ ಮಾಡಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ’ ಎಂದು ಆರ್.ಬಿ. ಶುಗರ್ಸ್‍ ಕಂಪನಿಯ ವ್ಯವಸ್ಥಾಪಕ ಪಂಚಾಕ್ಷರಯ್ಯ ದೊಡಮನಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

‘ಆರ್‌.ಬಿ. ಶುಗರ್ಸ್‌ ಕಂಪನಿಗೆ 39 ಎಕರೆ ಮಾತ್ರ ಕೃಷಿಯೇತರ ಜಮೀನಾಗಿ ಬಳಸಲು ಅನುಮತಿ ನೀಡಲಾಗಿದೆ. ಸರ್ಕಾರಿ ಮತ್ತು ಇತರೆ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿರುವ ಬಗ್ಗೆ ದೂರು ಬಂದಿದ್ದು, ಪರಿಶೀಲಿಸಲಾಗುವುದು’ ಎಂದು ಲಿಂಗಸುಗೂರು ತಹಶೀಲ್ದಾರ್‌ ಶಂಶಾಲಂ ನಾಗಡದಿನ್ನಿ ತಿಳಿಸಿದ್ದಾರೆ.

ತಲೆಮಾರುಗಳಿಂದ ಜಮೀನು ಸಾಗುವಳಿ ಮಾಡಿಕೊಂಡು ಬಂದಿದ್ದೇವೆ. ಪಟ್ಟಾ ಜಮೀನು ಖರೀದಿಸಿದ್ದೇವೆ ಎಂದು ಆರ್‌.ಬಿ ಶುಗರ್ಸ್‌ನವರು ನಮ್ಮನ್ನು ಒಕ್ಕಲೆಬ್ಬಿಸಿದ್ದಾರೆ
ದೇವಮ್ಮ ಚೌಡಕೆಪ್ಪ ಭೂ ಸಂತ್ರಸ್ತೆ ಸುಣಕಲ್ಲ
ನಾವು ಉಳುಮೆ ಮಾಡಿಕೊಂಡು ಬಂದಿದ್ದ ಜಮೀನನ್ನು ಒತ್ತುವರಿ ಮಾಡಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ವಿಷ ಸೇವಿಸುವುದೊಂದೇ ನಮಗಿರುವ ಮಾರ್ಗ
ಹನುಮಂತಪ್ಪ ಗದ್ದೆಪ್ಪ ಭೂ ಸಂತ್ರಸ್ತ ಸುಣಕಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.