ADVERTISEMENT

ಮರಳು ಅಕ್ರಮ ಸಾಗಣೆ: ಅಧಿಕಾರಿಗಳ ಮೌನ

ಡಾ.ಶರಣಪ್ಪ ಆನೆಹೊಸೂರು
Published 27 ಜೂನ್ 2024, 5:32 IST
Last Updated 27 ಜೂನ್ 2024, 5:32 IST
ಮುದಗಲ್ ಸಮೀಪದ ತಲೆಕಟ್ಟ ಗ್ರಾಮದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ
ಮುದಗಲ್ ಸಮೀಪದ ತಲೆಕಟ್ಟ ಗ್ರಾಮದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ   

ಮುದಗಲ್: ಸುತ್ತಲಿನ ವಿವಿಧ ಗ್ರಾಮಗಳಲ್ಲಿ ನಿಯಮ ಮೀರಿ ಮರಳು ಅಕ್ರಮ ದಂಧೆ ಅವ್ಯಾಹತವಾಗಿ ನಡೆದಿದೆ.

‘ಮುದಗಲ್ ಹೋಬಳಿಯಲ್ಲಿ ಪ್ರಾಕೃತಿಕ ಸಂಪತ್ತು ಹೇರಳವಾಗಿದೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ, ಅಧಿಕಾರಿಗಳ ನೆರಳಲ್ಲಿ ನಿತ್ಯ ಮರಳು ಸಾಗಿಸುತ್ತಿದ್ದು, ಇದಕ್ಕೆ ಕಡಿವಾಣ ಇಲ್ಲದಂತಾಗಿದೆ’ ಎಂದು ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಶರಣಪ್ಪ ಕಟ್ಟಿಮನಿ ಆರೋಪಿಸುತ್ತಾರೆ.

ಹೋಬಳಿಯ ತಲೆಕಟ್ಟ, ವ್ಯಾಕರನಾಳ, ಮರಳಿ, ನಾಗಲಾಪುರ, ಹೂನೂರು, ನಾಗರಾಳ ಗ್ರಾಮಗಳಲ್ಲಿ ಸರ್ಕಾರಿ ಹಾಗೂ ಪಟ್ಟಾ ಭೂಮಿಗಳಲ್ಲಿ, ಹಳ್ಳ–ಕೊಳ್ಳ, ನದಿಪಾತ್ರದ ಜಮೀನುಗಳಲ್ಲಿ ಮರಳು ಅಕ್ರಮವಾಗಿ ಅಗೆಯಲಾಗುತ್ತಿದೆ.

ADVERTISEMENT

‘ಮರಳು ಅಕ್ರಮ ದಂಧೆ ಕಡಿವಾಣಕ್ಕೆ ತಹಶೀಲ್ದಾರ್‌ ಅಧ್ಯಕ್ಷತೆಯಲ್ಲಿ ತಾಲ್ಲೂಕುಮಟ್ಟದ ಅಧಿಕಾರಿಗಳ ಸದಸ್ಯತ್ವದೊಂದಿಗೆ ಕಮಿಟಿ ರಚಿಸಬೇಕು. ಮರಳು ಅಕ್ರಮ ಗಣಿಗಾರಿಕೆ ಕಡೆ ಯಾರೊಬ್ಬ ಅಧಿಕಾರಿಯೂ ಇತ್ತ ಗಮನ ಹರಿಸುವುದಿಲ್ಲ. ಇದರಿಂದ ಅವ್ಯಾಹತವಾಗಿ ಮರಳು ಮಾಫಿಯಾದ ಜಾಡು ಹೆಚ್ಚುತ್ತಲೇ ಇದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ದಕ್ಷತೆಯಿಂದ ಕಾರ್ಯನಿರ್ವಹಿಸಿ, ಈ ದಂಧೆಗೆ ಕಡಿವಾಣ ಹಾಕಬೇಕು’ ಎಂಬುದು ಸ್ಥಳೀಯರ ಆಗ್ರಹವಾಗಿದೆ.

‘ಮರಳು ಮಾರಾಟ ಉದ್ಯಮದಲ್ಲಿ ಬಂಡವಾಳ ಕಡಿಮೆ; ಆದಾಯ ಅಧಿಕ. ಒಂದು ಲಾರಿ ಲೋಡ್ ಮರಳಿಗೆ ಸುಮಾರು ₹ 25ರಿಂದ 30 ಸಾವಿರಕ್ಕೆ ಮಾರಾಟ ಮಾಡಲಾಗುತ್ತದೆ. ಬೇಡಿಕೆ ಹೆಚ್ಚಿರುವ ಸಂದರ್ಭದಲ್ಲಿ ಮರಳಿನ ಬೆಲೆ ದುಪ್ಪಟ್ಟಾಗಿರುತ್ತದೆ. ಮರಳು ದಂಧೆಕೋರರು ಸರ್ಕಾರಕ್ಕೆ ರಾಜಧನ ಕಟ್ಟುತ್ತಿಲ್ಲ. ಇಲ್ಲಿ ಅಕ್ರಮವೂ ಅವ್ಯಾಹತವಾಗಿ ನಡೆಯುತ್ತಿರುವುದರಿಂದ ಯಾವುದೇ ರಾಜಧನವನ್ನು ಸರ್ಕಾರಕ್ಕೆ ಕಟ್ಟದೇ; ಅದನ್ನೇ ಸಂಬಂಧಪಟ್ಟ ಇಲಾಖೆಗಳಿಗೆ ತಿಂಗಳಿಗೆ ಕೊಡುತ್ತಿದ್ದಾರೆ’ ಎಂದು ಸ್ಥಳೀಯರಾದ ಕೃಷ್ಣ ಮುದಗಲ್‌ ಆರೋಪ ಮಾಡಿದ್ದಾರೆ.

‘ಮರಳು ಗಣಿಗಾರಿಕೆ ನಿಷೇಧದವಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಹಗಲಿರುಳು ರಾಜ್ಯ ಹೆದ್ದಾರಿ ಮುಖಾಂತರ ಅಕ್ರಮವಾಗಿ ಸಾಗಣೆ ನಿರಂತರವಾಗಿ ಸಾಗುತ್ತಿದೆ. ಈ ರೀತಿ ಕಾನೂನು ಬಾಹೀರ ಮರಳು ಮಾಫಿಯಾ ಮರು ಜೀವ ಪಡೆದಿದ್ದು, ಹಳ್ಳದ ತುಂಬೆಲ್ಲಾ ತಗ್ಗು, ದಿನ್ನೆಗಳು ಬಿದ್ದಿವೆ. ಹಳ್ಳದಲ್ಲಿ ಇದ್ದ ಔಷಧ ಗಿಡಮೂಲಿಕೆಗಳು ಹಾಳಾಗುತ್ತಿವೆ. ಬೃಹತ್ ಮರಗಳು ಧರೆಗೆ ಉರುಳುತ್ತಿವೆ. ಭೂಮಿಯಲ್ಲಿ ತೇವಾಂಶ ಕಡಿಮೆಯಾಗುತ್ತಿದೆ. ಇದರಿಂದಾಗಿ ಈ ಭಾಗದಲ್ಲಿ ಉಷ್ಣತೆ ಹೆಚ್ಚಾಗಿದ್ದು, ಬಿಸಿಲಿನ ತಾಪಕ್ಕೆ ಪರಿತಪ್ಪಿಸುತ್ತಿದ್ದಾರೆ.

ನಿತ್ಯ ನೂರಾರು ಟ್ರ್ಯಾಕ್ಟರ್ ಹಾಗೂ ಲಾರಿಯಲ್ಲಿ ಮರಳು ಅಕ್ರಮವಾಗಿ ಸಾಗಿಸಲಾಗುತ್ತಿದೆ. ಟ್ರ್ಯಾಕ್ಟರ್ ಮತ್ತು ಲಾರಿಗಳಲ್ಲಿ ನಿಯಮದ ಪ್ರಕಾರ ಮರಳು ಸಾಗಿಸಲು ವಾಹನ ಮಾರ್ಗದ ಪರವಾನಗಿಯನ್ನು ಪಡೆಯಬೇಕು. ಲಾರಿಗಳಿಗೆ ಜಿಪಿಎಸ್ ಅಳವಡಿಸಬೇಕು. ಆದರೆ, ಇಲ್ಲಿ ಮರಳು ಸಾಗಿಸುವ ಲಾರಿಗಳಿಗೆ ಇವುಗಳ ಪರಿಚಯವೇ ಇರುವುದಿಲ್ಲ. ಇದರಿಂದ ಸರ್ಕಾರಕ್ಕೆ ಬರಬೇಕಾದ ರಾಜಧನ ನಷ್ಟವಾಗುತ್ತಿದೆ. ತೆರಿಗೆ ಕಟ್ಟಬೇಕಾದ ಮಧ್ಯವರ್ತಿಗಳು ಸಂಬಂಧಿಸಿದ ಇಲಾಖೆ ಅಧಿರಿಗಳೊಂದಿಗೆ ಕೈ ಜೋಡಿಸಿ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಟವನ್ನುಂಟು ಮಾಡುತ್ತಿದ್ದಾರೆ’ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಲಾರಿಗಳಲ್ಲಿ ನಿಗದಿಕ್ಕಿಂತ ಹೆಚ್ಚು ಮರಳು ತುಂಬಿ ಚಲಾಯಿಸುವುದರಿಂದ ಗ್ರಾಮೀಣ ರಸ್ತೆಗಳು ಹದಗೆಟ್ಟಿವೆ.

ಮುದಗಲ್ ಸಮೀಪದ ತಲೆಕಟ್ಟ ಗ್ರಾಮದಲ್ಲಿ ಮರಳು ಗಣಿಗಾರಿಕೆಯ ಬಾರಿ ವಾಹನ ಓಡಾಟದಿಂದ ತಲೆಕೆಟ್ಟ ಗ್ರಾಮದಲ್ಲಿ ರಸ್ತೆ ಹಾಳಾಗಿದೆ
ತಲೆಕಟ್ಟ ಗ್ರಾಮದಲ್ಲಿ ಮರಳು ಕ್ವಾರಿ ನಡೆಸಲು ಕಂದಾಯ ಇಲಾಖೆಯಿಂದ ಯಾವುದೇ ಪರವಾನಗಿ ಪಡೆದಿಲ್ಲ.
ಶಂಕರಪ್ಪ ಪಟ್ಟಣಶೆಟ್ಟಿ ಕಂದಾಯ ನಿರೀಕ್ಷಕ ಮುದಗಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.