ರಾಯಚೂರು: ಜಿಲ್ಲೆಯಲ್ಲಿ ಸಕಾಲ ಯೋಜನೆಯಡಿ ಸ್ವೀಕರಿಸಿದ ಎಲ್ಲಾ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ಇತ್ಯರ್ಥಗೊಳಿಸಿ ಸಾರ್ವಜನಿಕರಿಗೆ ಸಮರ್ಪಕವಾಗಿ ಸಕಾಲ ಯೋಜನೆಯ ಸೇವೆಗಳು ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಆರ್.ದುರುಗೇಶ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಕಾಲ ಯೋಜನೆಯ ವಿವಿಧ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಕಾಲ ಸೇವೆಯಡಿ ಅರ್ಜಿಗಳನ್ನು ಸ್ವೀಕರಿಸುವ ಹಂತದಲ್ಲಿಯೇ ಅವಶ್ಯಕ ದಾಖಲಾತಿಗಳನ್ನು ಪಡೆದು ಅರ್ಜಿಯನ್ನು ಇತ್ಯರ್ಥ ಪಡಿಸಬೇಕು. ದಾಖಲೆಗಳು ಇಲ್ಲವೆಂದು ತಿರಸ್ಕೃತ ಮಾಡಬಾರದು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಕಾಲ ಯೋಜನೆಯಡಿಯಲ್ಲಿಯೇ ಅರ್ಜಿಗಳನ್ನು ಸ್ವೀಕರಿಸಬೇಕು. ಇತರೆ ವಿಧಾನಗಳ ಮೂಲಕ ಅರ್ಜಿ ಸ್ವೀಕರಿಸದೆ ಜನಪರವಾಗಿ ಕಾಲಮಿತಿಯೊಳಗೆ ಅರ್ಜಿ ವಿಲೇವಾರಿ ಮಾಡಬೇಕು. ಜನರ ನಂಬಿಕೆ, ವಿಶ್ವಾಸಗಳಿಸಬೇಕು ಎಂದು ತಿಳಿಸಿದರು.
ಸಕಾಲ ಸೇವೆಗಳ ಮಾಹಿತಿ ಫಲಕವನ್ನು ಎಲ್ಲಾ ಕಚೇರಿಗಳಲ್ಲಿ ಅಳವಡಿಸಿ ಜನರಿಗೆ ಯಾವ ಅವಧಿಯೊಳಗೆ ಸೇವೆ ಲಭ್ಯವಾಗಲಿದೆ ಎಂಬುದು ಸಮಗ್ರವಾಗಿ ತಿಳಿಯುವಂತಾಗಬೇಕು. ಅಟಲ್ ಜೀ ಜನಸ್ನೇಹಿ ಕೇಂದ್ರ ಸೇರಿದಂತೆ ಎಲ್ಲೆಡೆ ಫಲಕವನ್ನು ಅಳವಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯು ಸಕಾಲ ಸೇವೆ ಅನುಷ್ಠಾನದಲ್ಲಿ ಮುಂದಿನ ದಿನಗಳಲ್ಲಿ ಅಗ್ರ ಸ್ಥಾನಕ್ಕೆ ಬರಲು ಎಲ್ಲಾ ಇಲಾಖೆಯ ಅಧಿಕಾರಿಗಳು ಶ್ರಮಿಸಬೇಕು. ಕರ್ನಾಟಕದಲ್ಲಿ ಸೇವಾಸಿಂಧು ಕೇಂದ್ರಗಳಿದ್ದು, ಸಾರ್ವಜನಿಕರು ಆನ್‌ಲೈನ್ ಮೂಲಕವು ಅರ್ಜಿ ಸಲ್ಲಿಸಿ ಸೇವೆ ಪಡೆಯಬಹುದು ಎಂದರು.
ಅಬಕಾರಿ ಇಲಾಖೆಯ ಉಪ ಆಯುಕ್ತೆ ವಿಜಯಲಕ್ಷ್ಮೀ, ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಎಚ್.ಸಿ.ನಾಗೇಂದ್ರಪ್ಪ, ಶಿಕ್ಷಣ ಇಲಾಖೆಯ ಸಹಾಯಕ ಯೋಜನಾ ಸಮನ್ವಯಾಧಿಕಾರಿ ಕೃಷ್ಣ, ಮಾನ್ವಿ ತಹಶೀಲ್ದಾರ್ ಚಂದ್ರಕಾಂತ್, ಲಿಂಗಸೂಗೂರು ತಹಶೀಲ್ದಾರ್ ಬಲರಾಮ ಕಟ್ಟಿಮನಿ, ಆರ್.ಡಿ.ಪಿ.ಆರ್
ವ್ಯವಸ್ಥಾಪಕ ವಿರೇಶ್ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.