ರಾಯಚೂರು: ‘ಸರ್ಕಾರವು ಜಾರಿಗೊಳಿಸುವ ಯೋಜನೆಗಳಿಗೆ ಪ್ರಚಾರ ಕೊಟ್ಟು, ಜನರಿಗೆ ಮನವರಿಕೆ ಮಾಡಿಸುವಲ್ಲಿ ಮಾಧ್ಯಮಗಳು ವಹಿಸುತ್ತಿರುವ ಪಾತ್ರ ಗಮನಾರ್ಹ. ಮಾಧ್ಯಮಗಳಿಂದಾಗಿ ಯೋಜನೆಗಳ ಅನುಷ್ಠಾನ ಸುಲಭವಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಹೇಳಿದರು.
ನಗರದ ಅತಿಥಿ ಹೊಟೇಲ್ ಸಭಾಂಗಣದಲ್ಲಿ ಕೇಂದ್ರದ ವಾರ್ತಾ ಶಾಖೆ (ಪಿಐಬಿ) ಬೆಂಗಳೂರು, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜಿಲ್ಲಾ ಮಾಧ್ಯಮ ಪ್ರತಿನಿಧಿಗಳಿಗಾಗಿ ಮಂಗಳವಾರ ಏರ್ಪಡಿಸಿದ್ದ ‘ಫಸಲ್ ಬಿಮಾ ಯೋಜನೆ ಹಾಗೂ ಆಯುಷ್ಮಾನ್ ಭಾರತ್’ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ನಾಲ್ಕು ಗೋಡೆಗಳ ಮಧ್ಯ ಚರ್ಚಿಸುವ ಯೋಜನೆಗಳನ್ನು ಜಿಲ್ಲಾಮಟ್ಟ ಹಾಗೂ ರಾಜ್ಯವ್ಯಾಪಿ ಪ್ರಚಾರ ನೀಡಿ, ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಮಾಧ್ಯಮಗಳು ಮಾಡುತ್ತವೆ. ಯೋಜನೆಗಳ ಸಾಧಕ–ಬಾಧಕಗಳ ಕುರಿತು ಸುದ್ದಿಗಳನ್ನು ಪ್ರಕಟಿಸುವುದರಿಂದ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಪ್ರಾದೇಶಿಕ ಜನಸಂಪರ್ಕ ಕಚೇರಿಯ ಹೆಚ್ಚುವರಿ ಮಹಾನಿರ್ದೇಶಕ ಎಂ. ನಾಗೇಂದ್ರಸ್ವಾಮಿ ಮಾತನಾಡಿ, ದೇಶದ 130 ಕೋಟಿ ಜನರ ಆರೋಗ್ಯ ಕಾಪಾಡುವುದಕ್ಕೆ ‘ಆಯುಷ್ಮಾನ್ ಭಾರತ್’ ಮತ್ತು ರೈತರು ಬೆಳೆಯುವ ಬೆಳೆಗಳಿಂದ ನಷ್ಟ ಉಂಟಾಗುವುದನ್ನು ತಪ್ಪಿಸಲು ‘ಫಸಲ್ ಬಿಮಾ ಯೋಜನೆ’ಗಳನ್ನು ಕೇಂದ್ರ ಸರ್ಕಾರವು ಜಾರಿಗೊಳಿಸಿದೆ. ಯೋಜನೆಗಳ ಪ್ರಯೋಜನ ಎಲ್ಲ ಜನರಿಗೂ ದೊರಕಿಸುವ ನಿಟ್ಟಿನಲ್ಲಿ ಮಾಧ್ಯಮಗಳ ಸಹಕಾರದೊಂದಿಗೆ ಪ್ರಚಾರ ನೀಡುವ ಕೆಲಸವನ್ನು ಕೇಂದ್ರದ ವಾರ್ತಾ ಶಾಖೆ ಮಾಡುತ್ತಿದೆ ಎಂದರು.
ದೇಶದ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಫಸಲ್ ಬಿಮಾ ಯೋಜನೆಯಡಿ ನೋಂದಾಯಿಸುವ ರೈತರ ಸಂಖ್ಯೆ ಕಡಿಮೆ ಇದೆ. ಅದರಲ್ಲೂ ರಾಯಚೂರು ಜಿಲ್ಲೆಯ ನೋಂದಣಿ ಪ್ರಮಾಣ ಅಷ್ಟೊಂದು ಪ್ರಮಾಣದಲ್ಲಿಲ್ಲ. ಮಾಧ್ಯಮಗಳಿಗೆ ಮೊದಲು ಯೋಜನೆಯ ಉದ್ದೇಶಗಳನ್ನು ಮನವರಿಕೆ ಮಾಡಿಸುವುದಕ್ಕಾಗಿ ಕಾರ್ಯಾಗಾರ ಮಾಡಲಾಗುತ್ತಿದೆ. ಮಾಧ್ಯಮ ಪ್ರತಿನಿಧಿಗಳು ವ್ಯಕ್ತಪಡಿಸುವ ಅಭಿಪ್ರಾಯಗಳನ್ನು ಕ್ರೊಢೀಕರಿಸಿ ಸರ್ಕಾರದ ಗಮನಕ್ಕೆ ನೀಡಲಾಗುವುದು. ಪ್ರಮುಖವಾಗಿ ಕೃಷಿ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಕೃಷಿ ಸಚಿವಾಲಯದ ಗಮನ ಸೆಳೆಯುತ್ತಾರೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಲಿನ್ ಅತುಲ್ ಮಾತನಾಡಿ, ದೇಶದ ಜಿಡಿಪಿ ಒಟ್ಟು ಪ್ರಮಾಣದಲ್ಲಿ ಶೇ 6 ರಷ್ಟನ್ನು ಆರೋಗ್ಯಕ್ಕಾಗಿ ವೆಚ್ಚ ಮಾಡಬೇಕು ಎನ್ನುವುದು ಅಂತರರಾಷ್ಟ್ರೀಯ ನಿಯಮಾವಳಿ. ಸರ್ಕಾರವು ಶೇ 1.5 ಮಾತ್ರ ಇಲ್ಲಿಯವರೆಗೂ ವೆಚ್ಚ ಮಾಡುತ್ತಿತ್ತು. ಆಯುಷ್ಮಾನ್ ಭಾರತ್ ಹಾಗೂ ಆರೋಗ್ಯ ಕರ್ನಾಟಕ ಜಾರಿಯಿಂದಾಗಿ ವೆಚ್ಚದ ಪ್ರಮಾಣವು ಶೇ 2.5 ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದರು.
ಯೋಜನೆಗಳ ಅನುಷ್ಠಾನದಲ್ಲಿ ಮಾಧ್ಯಮಗಳು ಪ್ರಮುಖಪಾತ್ರ ವಹಿಸುವುರಿಂದ ಪ್ರಜಾಪ್ರಭುತ್ವದಲ್ಲಿ ನಾಲ್ಕನೇ ಅಂಗದ ಸ್ಥಾನಮಾನ ಕೊಡಲಾಗಿದೆ. ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಕೈಗೊಳ್ಳುವ ನಿರ್ಧಾರ, ಮಾಡುವ ಕೆಲಸ ಜನರಿಗೆ ಸರಿಯಾಗಿ ತಲುಪುತ್ತಿದ್ದೆಯೋ ಇಲ್ಲವೋ ಎಂಬುದು ಮಾಧ್ಯಮಗಳ ಮೂಲಕ ತಿಳಿಯುತ್ತದೆ. ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವುದು ಹಾಗೂ ಯೋಜನೆಗಳು ಪರಿಣಾಮಕಾರಿ ಅನುಷ್ಠಾನವಾಗಿದ್ದರ ಬಗ್ಗೆ ಮಾಹಿತಿ ಕೊಡುವ ಕೆಲಸವನ್ನು ಮಾಧ್ಯಮಗಳು ಮಾಡುತ್ತವೆ ಎಂದು ಹೇಳಿದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ರಂಗನಾಥ ಎಸ್. ನೂಲಿಕರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಸವರಾಜ ನಾಗಡದಿನ್ನಿ ಮಾತನಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಗೋವಿಂದರೆಡ್ಡಿ ಇದ್ದರು. ಜೈ ಕಿಸಾನ್ ಕಲಾ ತಂಡದಿಂದ ಆಕರ್ಷಕ ನೃತ್ಯ ಪ್ರದರ್ಶನ ನಡೆಯಿತು. ಬೆಂಗಳೂರು ಪಿಐಬಿ ಕಚೇರಿಯ ಮಾಧ್ಯಮ ಮತ್ತು ಸಂಪರ್ಕಾಧಿಕಾರಿ ಪಿ.ಜಿ. ಪಾಟೀಲ ನಿರೂಪಿಸಿದರು. ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿ ಸುರೇಶ ವಂದಿಸಿದರು.
ಆನಂತರ ನಡೆದ ಕಾರ್ಯಾಗಾರದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಡಾ. ಚೇತನಾ ಪಾಟೀಲ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಕೆ. ಎಸ್. ನಸೀರ್, ಆಯುಷ್ಮಾನ್ ಭಾರತ್ ನೋಡಲ್ ಅಧಿಕಾರಿ ಡಾ. ನಂದಿತಾ ಅವರು ಯೋಜನೆಗಳ ಕುರಿತು ಮಾಹಿತಿ ನೀಡಿದರು. ಸಂವಾದದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹೆಚ್ಚುವರಿ ಹಿರಿಯ ಸಹಾಯಕ ನಿರ್ದೇಶಕ ರಾಮಲಿಂಗಪ್ಪ ಬಿ.ಕೆ. ಇದ್ದರು.
ವಿಮಾ ಕಚೇರಿ ಎಲ್ಲಿದೆ?
ಬೆಳೆ ವಿಮಾ ಪಡೆಯುವ ಕಂಪೆನಿಯ ಹೆಸರು ಗೊತ್ತಿಲ್ಲದೆ ರೈತರೆಲ್ಲ ಬ್ಯಾಂಕುಗಳಲ್ಲಿ ವಿಮಾ ಕಂತು ಕಟ್ಟುತ್ತಾರೆ. ಆದರೆ, ಬೆಳೆ ನಷ್ಟವಾದಾಗ ಪರಿಹಾರ ಕೇಳುವುದಕ್ಕೆ ಎಲ್ಲಿಗೆ ಹೋಗಬೇಕು ಎನ್ನುವ ಬಗ್ಗೆ ರೈತರಿಗೆ ಮಾಹಿತಿಯನ್ನೆ ನೀಡಿರುವುದಿಲ್ಲ. ವಿಮಾ ಕಂಪೆನಿಗಳು ಕನಿಷ್ಠಪಕ್ಷ ತಮ್ಮ ಪ್ರತಿನಿಧಿಗಳನ್ನು ನೇಮಕ ಮಾಡಬೇಕು. ಕಚೇರಿಗಳನ್ನು ಸ್ಥಾಪಿಸಬೇಕು. ವಿಮಾ ಕಂತು ಕಟ್ಟಿರುವುದಕ್ಕೆ ಪ್ರಮಾಣಪತ್ರ ನೀಡುವ ಕೆಲಸವಾಗಬೇಕು. ಈ ಬಗ್ಗೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಸರ್ಕಾರಕ್ಕೆ ಪತ್ರ ಬರೆದು ಗಮನ ಸೆಳೆಯಬೇಕು ಎಂದು ಮಾಧ್ಯಮ ಪ್ರತಿನಿಧಿಗಳು ಸಂವಾದದಲ್ಲಿ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.