ಮಾನ್ವಿ: ತಾಲ್ಲೂಕಿನ ವಿವಿಧೆಡೆ ಸರ್ಕಾರದ ಭೂಒಡೆತನ ಯೋಜನೆ ಅಡಿಯಲ್ಲಿ ಮಂಜೂರಾದ ಭೂಮಿಯನ್ನು ಬಡ ಫಲಾನುಭವಿಗಳಿಗೆ ಹಸ್ತಾಂತರಿಸುವಲ್ಲಿ ಪ್ರಭಾವಿಗಳು, ಮಧ್ಯವರ್ತಿಗಳು ಅಡ್ಡಿಪಡಿಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.
ಸರ್ಕಾರ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕ ಭೂಮಾಲೀಕರಿಂದ ಖರೀದಿಸಿ ಅರ್ಹ ಫಲಾನುಭವಿಗಳ ಹೆಸರಿನಲ್ಲಿ ನೋಂದಣಿ ಮಾಡಿಸಿ ಎರಡು ವರ್ಷಗಳು ಕಳೆದರೂ ಕೂಡ ಅನೇಕ ಕಡೆ ಫಲಾನುಭವಿಗಳಿಗೆ ಭೂಮಿ ಹಸ್ತಾಂತರ(ಖಬ್ಜಾ) ಆಗದಿರುವುದು ರೈತಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ತಾಲ್ಲೂಕಿನ ಹಿರೇಕೊಟ್ಟೆಕಲ್ ಹೋಬಳಿಯ ತಡಕಲ್ ಸೀಮಾದ ಸ.ನಂ:119 ಹಾಗೂ ಸ.ನಂ: 120ರ ವ್ಯಾಪ್ತಿಯ ಜಮೀನುಗಳನ್ನು 2020-21ನೇ ಸಾಲಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಭೂಒಡೆತನ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಮಂಜೂರು ಮಾಡಲಾಗಿತ್ತು. ತಡಕಲ್ ಗ್ರಾಮದ ಪರಿಶಿಷ್ಟ ಜಾತಿಯ ಭೂರಹಿತ 15 ಫಲಾನುಭವಿಗಳಿಗೆ ತಲಾ 1 ಎಕರೆ ಭೂಮಿ ಮಂಜೂರಾಗಿತ್ತು.
ಫಲಾನುಭವಿಗಳ ಹೆಸರಿನಲ್ಲಿ ಭೂಮಿ ನೊಂದಣಿ ಆಗಿ ಪಹಣಿಯಲ್ಲಿ ಹೆಸರು ಸೇರ್ಪಡೆ ಕೂಡ ಮಾಡಲಾಗಿದೆ. ಆದರೆ, ಸದರಿ ಹಂಚಿಕೆಯಾದ ಜಮೀನುಗಳನ್ನು ಸ್ಥಳೀಯ ಪ್ರಭಾವಿ ವ್ಯಕ್ತಿಗಳು ಹಾಗೂ ಮಧ್ಯವರ್ತಿಗಳು ಫಲಾನುಭವಿಗಳ ಖಬ್ಜಾಕ್ಕೆ ನೀಡದೆ ಸಾಗುವಳಿಗೆ ಅಡ್ಡಿಪಡಿಸುತ್ತಿದ್ದಾರೆ. ಭೂಮಿ ಮಂಜೂರಾಗಿ ಎರಡು ವರ್ಷಗಳು ಕಳೆದರೂ ಫಲಾನುಭವಿಗಳು ಭೂಮಿಯಲ್ಲಿ ಸಾಗುವಳಿ ಮಾಡಲು ಸಾಧ್ಯವಾಗದೆ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಫಲಾನುಭವಿಗಳು ಹಾಗೂ ಸಿಪಿಐ(ಎಂಎಲ್) ಪಕ್ಷದ ತಾಲ್ಲೂಕು ಸಮಿತಿಯ ಪದಾಧಿಕಾರಿಗಳು ಜ.23ರಂದು ತಹಶೀಲ್ದಾರ್ ಅವರಿಗೆ ದೂರು ಸಲ್ಲಿಸಿದ್ದರು. ದೂರಿನನ್ವಯ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರವಿಕುಮಾರ ಫಲಾನುಭವಿಗಳಿಗೆ ಹಂಚಿಕೆಯಾದ ಜಮೀನುಗಳ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಫಲಾನುಭವಿಗಳಿಗೆ ಜಮೀನು ಹಸ್ತಾಂತರಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ತೆರಳಿದ್ದಾರೆ. ತಮಗೆ ಮಂಜೂರಾದ ಭೂಮಿ ಹಸ್ತಾಂತರ ಮಾಡಿ ಸಾಗುವಳಿ ಮಾಡಲು ಅವಕಾಶ ಕಲ್ಪಿಸುವ ಕುರಿತು ತಾಲ್ಲೂಕು ಆಡಳಿತದ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಫಲಾನುಭವಗಳು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.